ನಮ್ಮದು ಸುಳ್ಳು, ಪೊಳ್ಳು ಹೇಳುವ ಸರ್ಕಾರವಲ್ಲ

Ours is not a government that tells lies
ಮುದ್ದೇಬಿಹಾಳ ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಅಧ್ಯಕ್ಷತೆಯಲ್ಲಿ ಮಹಿಳೆಯರು ಚಾಲನೆ ನೀಡಿದರು.
Published on

ಮುದ್ದೇಬಿಹಾಳ: ನಮ್ಮದು ಬಿಜೆಪಿಯವರಂತೆ ಸುಳ್ಳು, ಪೊಳ್ಳು ಹೇಳುವ ಸರ್ಕಾರವಲ್ಲ. ಕೊಟ್ಟ ಮಾತಿನಂತೆ ಗ್ಯಾರಂಟಿಯಲ್ಲಿನ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದೇವೆ ಎಂದು ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ಹೇಳಿದರು.

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿ ಜನರು ಕೇಂದ್ರ ಸರ್ಕಾರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಚುನಾವಣೆ ಹತ್ತಿರ ಬಂದಿದೆಯೆಂದು ಸಿಲಿಂಡರ್ ಬೆಲೆ ಇಳಿಸುವ ಘೋಷಣೆಯನ್ನು ಪ್ರಧಾನಿ ಮಾಡಿದ್ದಾರೆ. ವಿರೋಧ ಪಕ್ಷದ ಒಗ್ಗಟ್ಟಿನ ಶಕ್ತಿ ಹೆಚ್ಚಾಗಿ ಭಯದಿಂದ ಸಿಲಿಂಡರ್ ಬೆಲೆ ಇಳಿಸಿದ್ದಾರೆ. ಬರಲಿರುವ ದಿನಗಳಲ್ಲಿ ಇಂಡಿಯಾ ಒಕ್ಕೂಟ ಗ್ಯಾಸ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಲಿ ಎಂದು ಇಂತಹ ಯೋಜನೆಗಳನ್ನು ರೂಪಿಸಲಾಗಿದೆ. ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕು ಸೇರಿ ಒಟ್ಟು 59,689 ಜನ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆದುಕೊಳ್ಳಲಿದ್ದಾರೆ. ರಕ್ಷಾ ಬಂಧನದ ಶುಭ ದಿನದಲ್ಲಿ ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ. ಕೊಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಸಾಂಕೇತಿಕವಾಗಿ ಐವರು ಮಹಿಳೆಯರನ್ನು ವೇದಿಕೆಗೆ ಕರೆಯಿಸಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿ ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಉಪಾಧ್ಯಕ್ಷೆ ಗಿರಿಜಾ ಕಡಿ, ತಾಪಂ ಪ್ರಭಾರ ಯೋಜನಾಧಿಕಾರಿ ಖೂಭಾಸಿಂಗ ಜಾಧವ, ಸುಜಾತಾ ಸಿಂಧೆ, ವೈ.ಎಚ್. ವಿಜಯಕರ್ ಮಾತನಾಡಿದರು.

ತಹಸೀಲ್ದಾರ್ ಸಿ.ಎ. ಗುಡದಿನ್ನಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಹೊಸಮನಿ, ಅಂಗನವಾಡಿ ಸಂಘಟನೆಯ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್, ಪುರಸಭೆ ಮುಖ್ಯಾಧಿಕಾರಿ ಮೋಹನ್ ಜಾಧವ, ಡಾ. ಸತೀಶ ತಿವಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಗುರು ತಾರನಾಳ, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ. ನಾವದಗಿ, ಉದ್ಯಮಿ ಶರಣು ಸಜ್ಜನ, ಮುಖಂಡ ಪ್ರಭುರಾಜ ಕಲ್ಬುರ್ಗಿ, ಅಬ್ದುಲಗಫುರ ಮಕಾನದಾರ, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಇದ್ದರು. ಸಂಗಮೇಶ ಶಿವಣಗಿ ಸಂಗಡಿಗರು ನಾಡಗೀತೆ ಹಾಡಿದರು. ಸಿದ್ಧನಗೌಡ ಬಿಜ್ಜೂರ ನಿರೂಪಿಸಿದರು.

ಊಟಕ್ಕೆ ಪರದಾಡಿದ ಗೃಹಲಕ್ಷ್ಮಿಯರು
ಎರಡು ಸಾವಿರ ರೂ. ಖಾತೆಗೆ ಬರಲಿದೆ ಎಂದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಒಮ್ಮೆಲೇ ಆಗಮಿಸಿದ್ದರಿಂದ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಸರಿಯಾಗಿ ಮಾಡಲಾಗಲಿಲ್ಲ. ಮೈಸೂರಿನಲ್ಲಿರುವ ಕಾರ್ಯಕ್ರಮ ಆನ್‌ಲೈನ್ ಮೂಲಕ ಆರಂಭವಾಗುವ ಮುಂಚೆಯೇ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಊಟದ ಸ್ಥಳಕ್ಕೆ ತೆರಳಿದ್ದರಿಂದ ನೂಕುನುಗ್ಗಲು ಕಂಡು ಬಂದಿತು. ಕೆಲವರು ಊಟ ಮಾಡದೇ ಕಾರ್ಯಕ್ರಮಕ್ಕೆ ಕರೆಯಿಸಿದರವರನ್ನು ಶಪಿಸುತ್ತಾ ಊರುಗಳಿಗೆ ಮರಳಿದರು. ಅಂದಾಜು 4 ಸಾವಿರಕ್ಕೂ ಅಧಿಕ ಮಹಿಳೆಯರು ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net