

ಯಾದಗಿರಿ: ಚುನಾವಣಾ ಪೂರ್ವದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಭಾರವಸೆಯಂತೆ ಮಹತ್ವಾಕಾಂಕ್ಷಿಯ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಹೊಸಳ್ಳಿ ಗ್ರಾಮದ ಸಮೀಪದ ಕೆಪಿಟಿಸಿಎಲ್ ಸಭಾಂಗಣದಲ್ಲಿ ಗುರುವಾರ ಗೃಹಜ್ಯೋತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜ್ಯ ಸರಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪ್ರತಿ ವರ್ಷ 52 ಸಾವಿರ ಕೋಟಿ ರೂ.ಗಳ ಅನುದಾನ ವ್ಯಯವಾಗಲಿದ್ದು, ಇದಕ್ಕಾಗಿ ಐತಿಹಾಸಿಕ ಕ್ರಮ ಕೈಗೊಳ್ಳುವ ಮೂಲಕ ರಾಜ್ಯದ ಎಲ್ಲ ಜನತೆಯ ವಿಶ್ವಾಸಕ್ಕೆ ಹಾಗೂ ಸಂತಸಕ್ಕೆ ಕಾರಣವಾಗಿದೆ ಎಂದು ಹೇಳಿದರು.
ನಮ್ಮ ಸರಕಾರ
ಅಕಾರಕ್ಕೆ ಬಂದ ತಕ್ಷಣ ಕೇವಲ 2 ತಿಂಗಳಲ್ಲಿಯೇ ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮೀ ಯೋಜನೆಗಳನ್ನು ಜಾರಿಗೊಳಿಸಲು ಕೈಗೊಂಡಿರುವ ಕ್ರಮ ಐತಿಹಾಸಿಕ ಹೆಜ್ಜೆಯಾಗಿದೆ. ಬೆಲೆ ಏರಿಕೆ ಸೇರಿ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದ ನಾಡಿನ ಜನತೆಗೆ ಗ್ಯಾರಂಟಿ ಯೋಜನೆಗಳು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತಿದ್ದು, ಅರ್ಹ ಫಲಾನುಭವಿಗಳೂ ಕೂಡ ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.
ರಸ್ತೆ ಸಾರಿಗೆ ನಿಗಮಗಳಲ್ಲಿ ಸುಧಾರಣೆ ತರಲು ಸರಕಾರ ಕ್ರಮ ಕೈಗೊಂಡಿದ್ದು, ಕೊರತೆ ಇರುವ 13 ಸಾವಿರ ಸಿಬ್ಬಂದಿ ನೇಮಕಕ್ಕೂ ಮುಂದಾಗಿದೆ. ಅದರಂತೆ 4 ಸಾವಿರ ಹೊಸ ಬಸ್ಗಳನ್ನು ಸಹ ರಾಜ್ಯಕ್ಕೆ ಕೊಡುಗೆ ನೀಡಿದ್ದು ಜನರಿಗೆ ಹಲವು ರೀತಿಯಲ್ಲಿ ನೆರವಾಗುತ್ತಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿಯಲ್ಲಿ ಸುಮಾರು 1.42ಕೋ. ಕುಟುಂಬಗಳು ನೋಂದಣಿಯಾಗಿವೆ. ರಾಜ್ಯದ ಬಡ, ಮಧ್ಯಮ, ಹಾಗೂ ಶ್ರೀಮಂತ ವರ್ಗದವರಿಗೂ ತಲಾ 200 ಯೂನಿಟ್ ಉಚಿತ ವಿದ್ಯುತ್ ದೊರಕಿಸುವ ಮೂಲಕ ರಾಜ್ಯ ಸರಕಾರ ಎಲ್ಲ ವರ್ಗದ ಜನರ ಹಿತ ಕಾಪಾಡಿದೆ. ಅದರಂತೆ ಅನ್ನಭಾಗ್ಯ ಯೋಜನೆಯ ಮೂಲಕ ಹಸಿದವರಿಗೆ ಅನ್ನ ನೀಡುವ ಕಾರ್ಯ ಸಕರ್ಾರ ಮಾಡಿದೆ. 5 ಕೆಜಿ ಅಕ್ಕಿ ಹಾಗೂ ಬಾಕಿ ನೀಡಬೇಕಾದ 5 ಕೆಜಿ ಅಕ್ಕಿಗೆ 170 ರೂ. ನೀಡುವ ಮೂಲಕ ಬಡವರಿಗೆ ನೆರವಾಗಿದೆ ಎಂದು ವಿವರಿಸಿದರು.