ನಮ್ಮಂತೆ ನಿಮ್ಮನ್ನೂ ಖಾಲಿ ಮಾಡಿಸುತ್ತಾರೆ

26 mlv 2
Published on

ಮಳವಳ್ಳಿ: ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪಕ್ಷ ಸಮರ್ಪಕವಾಗಿ ಜಾರಿಗೊಳಿಸದಿದ್ದರೆ ಜನರು ನಮ್ಮನ್ನು ಖಾಲಿ ಮಾಡಿಸಿದಂತೆ ನಿಮ್ಮನ್ನೂ ಖಾಲಿ ಮಾಡಿಸಲಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ. ಅನ್ನದಾನಿ ತಿಳಿಸಿದರು.

ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಕರೆಯಲಾಗಿದ್ದ ಕಾರ್ಯಕರ್ತ, ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಂಗ್ರೆಸ್‌ನವರ ಗ್ಯಾರಂಟಿ ಭರವಸೆಗಳಿಗೆ ಮತದಾರರು ಮನಸೋತು ಕಾಂಗ್ರೆಸ್‌ಗೆ ಮತ ನೀಡಿ ನಮ್ಮನ್ನು ತಿರಸ್ಕರಿಸಿರಬಹುದು. ಮತದಾರರ ತೀರ್ಪನ್ನು ಗೌರವದಿಂದ ಸ್ವಾಗತಿಸುವ ಮೂಲಕ ಸೋಲನ್ನು ಸ್ವೀಕರಿಸುವುದರ ಜತೆಗೆ 50 ಸಾವಿರಕ್ಕೂ ಅಧಿಕ ಮತ ನೀಡಿ ಬೆಂಬಲಿಸಿದವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನನ್ನ ಅಧಿಕಾರವಧಿಯಲ್ಲಿ ಕೋವಿಡ್‌ನಂತಹ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಕ್ಷೇತ್ರದಲ್ಲಿ ಅಭಿವೃದ್ಧಿಗೆ ತೊಡಕಾಗಿದೆ. ಸಿಕ್ಕ ಕೆಲವು ವರ್ಷಗಳಲ್ಲಿ ಜನಮೆಚ್ಚುವ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದು ತಿಳಿಸಿದರು.

ಯಾವುದೇ ಪಕ್ಷ, ಧರ್ಮ, ಜಾತಿ ಭೇದವಿಲ್ಲದೆ ಅಭಿವೃದ್ಧಿ ಕೆಲಸ ಮಾಡಲು ಶ್ರಮಿಸಿದ್ದೇನೆ. ಆಡಳಿತದ ಅವಧಿಯಲ್ಲಿ ನನ್ನ ಅರಿವಿಗೆ ಬಾರದೆ ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಹಾಗೂ ಕಾರ್ಯಕರ್ತರಿಗೆ ನೋವಾಗಿರುವ ಸಂಗತಿಗಳು ನಡೆದಿದ್ದರೆ ಕ್ಷಮೆಯಾಚಿಸುತ್ತೇನೆ ಎಂದ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಮೂಲಕ ಮಳವಳ್ಳಿ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಲು ಶ್ರಮಿಸೋಣ ಎಂದರು.

ಪಟ್ಟಣದ ಪುರಸಭೆಗೆ ನಮ್ಮ ಪಕ್ಷದಿಂದ ಗೆದ್ದು ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿರುವ ಇಂದ್ರಮ್ಮ, ಲಕ್ಷ್ಮಮ್ಮ ಅವರು ಕೂಡಲೇ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ಟಿ.ನಂದಕುಮಾರ್, ಸಿದ್ದರಾಜು, ಕುಮಾರ್, ನೂರುಲ್ಲಾ, ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಡಿ.ಜಯರಾಮು, ಜಿಲ್ಲಾ ಉಪಾಧ್ಯಕ್ಷ ಸಿದ್ದಾಚಾರಿ, ಯುವ ಘಟಕದ ಅಧ್ಯಕ್ಷ ರವಿ, ತಾಲೂಕು ಅಧ್ಯಕ್ಷ ವಿ.ಎಂ.ವಿಶ್ವನಾಥ್, ಯುವ ಘಟಕದ ಅಧ್ಯಕ್ಷ ಶ್ರೀಧರ್, ಸಂತೋಷ್, ಬುಲೆಟ್ ನಿಂಗಣ್ಣ, ಕಾಂತರಾಜು, ಕಂಬರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net