

ಸಿರಗುಪ್ಪ: ಮಕ್ಕಳಲ್ಲಿ ಒಂದೊಂದು ಪ್ರತಿಭೆ ಇರುತ್ತದೆ. ಈ ಪ್ರತಿಭೆಯನ್ನು ಪಾಲಕರು, ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಮಕ್ಕಳು ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಚೊಕ್ಕ ಬಸವನಗೌಡ ಹೇಳಿದರು.
ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಕಾರ್ಡ್) ವತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.
ಸಂಸ್ಕಾರ ಇಲ್ಲದ ವ್ಯಕ್ತಿ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಅದು ಯಶಸ್ಸು ಆಗಲಾರದು. ಸಂಸ್ಕಾರ ಮೈಗೂಡಿಸಿಕೊಂಡಾಗ ಸಮಾಜಕ್ಕೆ ಒಳಿತಾಗುವ ಕಾರ್ಯ ಮಾಡಲು ಸಾಧ್ಯ. ಸಮಾಜದಲ್ಲಿ ಬುದ್ಧಿವಂತರಿದ್ದರೂ ಒಳ್ಳೆಯ ಗುಣ ಹೊಂದಿದ ಮಕ್ಕಳು ಸಿಗುವುದು ಕಷ್ಟ. ಎಷ್ಟೇ ಅಂಕಗಳನ್ನು ಪಡೆದರೂ ಸಂಸ್ಕಾರ ಇಲ್ಲದಿದ್ದರೆ ಅಡ್ಡದಾರಿ ಹಿರಿಯುವ ಸಾಧ್ಯತೆಯಿದೆ. ವಿದ್ಯಾರ್ಥಿ ದಿಸೆಯಲ್ಲಿ ಓದುವುದೇ ಮುಖ್ಯ ಗುರಿಯಾಗಬೇಕು. ಇದರ ಜತೆಗೆ ಸಮಾಜಕ್ಕೆ ತೊಂದರೆಯಾಗದಂತೆ ನಡೆದುಕೊಳ್ಳುವುದೇ ಸಂಸ್ಕಾರ. ಶಾರೀರಿಕ ಬಲದಿಂದ ಇನ್ನೊಬ್ಬರಿಗೆ ತೊಂದರೆ ಮಾಡಬಹುದು ಎಂದು ಹೇಳಿದರು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕ ಮೌಲ್ಯ ಇರಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ಸಿಗಬಲ್ಲದು. ಜೀವನದಲ್ಲಿ ಸವಾಲನ್ನು ಎದುರಿಸುವ ಶಕ್ತಿ-ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಾಧನೆಯ ಮೆಟ್ಟಿಲನ್ನು ಏರುವ ತುಡಿತ ನಮ್ಮಲ್ಲಿರಬೇಕು. ನಮ್ಮ ಸಾಧನೆ ಇನ್ನೊಬ್ಬರಿಗೆ ಪ್ರೇರಣೆಯಾಗಬೇಕು ಎಂದು ಚೊಕ್ಕ ಬಸವನಗೌಡ ತಿಳಿಸಿದರು.
ಶಾಸಕ ಬಿ.ಎಂ.ನಾಗರಾಜ ಮಾತನಾಡಿ, ಪ್ರತಿಯೊಂದು ಸಹಕಾರಿಗಳಲ್ಲಿ ವ್ಯವಹಾರ ಮಾತ್ರ ನೋಡಿಕೊಳ್ಳುತ್ತಾರೆ. ಆದರೆ ಪಿಕಾರ್ಡ್ ಬ್ಯಾಂಕ್ ವ್ಯವಹಾರದೊಂದಿಗೆ ಶಿಕ್ಷಣ ಮತ್ತು ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ, ನಿರ್ದೇಶಕ ಶಾಂತನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ ಮಾತನಾಡಿದರು.
ಎಸ್ಸೆಸ್ಸೆಲ್ಸಿಯ 60 ಹಾಗೂ ಪಿಯುಸಿಯ 15 ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ಪ್ರೋತ್ಸಾಹ ಧನ ಹಾಗೂ ಪ್ರಶಂಸಾ ಪತ್ರ ನೀಡಿ ಸನ್ಮಾನಿಸಲಾಯಿತು. ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಚಂದ್ರಾರೆಡ್ಡಿ, ವ್ಯವಸ್ಥಾಪಕ ತಿಪ್ಪಣ್ಣ ಎಸ್.ಬನಸೋಡಿ, ನಿರ್ದೇಶಕರಾದ ಪಿ.ತಿಮ್ಮಪ್ಪ, ಜಡೇಸ್ವಾಮಿ, ಮಲ್ಲಿಕಾರ್ಜುನ, ಶಿವಶಂಕರಗೌಡ, ನಗರಸಭೆ ಸದಸ್ಯ ಗಣೇಶ ಇದ್ದರು.