

ಹಾಸನ: ಮಾ.1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸನಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಇದು ಸರ್ಕಾರಿ ದುಡ್ಡಿನಲ್ಲಿ ಇವರು ಮಾಡುತ್ತಿರುವ ರಾಜಕೀಯ ಪ್ರದರ್ಶನ ಎಂದು ಸಂಸದ ಪ್ರಜ್ವಲ್ ರೇವಣ್ಣ ಕಿಡಿ ಕಾರಿದರು.
ನಗರದ ಸಂಸದರ ನಿವಾಸದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಯೋಜನೆಗಳನ್ನು ಇಂದು ಕಾಂಗ್ರೆಸ್ ಸಿಎಂ ಉದ್ಘಾಟನೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಸರ್ಕಾರ ಬಂದು 10 ತಿಂಗಳಾದರೂ ಹಾಸನಕ್ಕೆ ಒಂದು ರೂಪಾಯಿ ಅನುದಾನ ನೀಡಿಲ್ಲ. ಈ ಸರ್ಕಾರಕ್ಕೆ ಹಾಸನದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದು ಬಜೆಟ್‌ನಲ್ಲಿ ಗೊತ್ತಾಗಿದೆ. ಎಂಒಯು ನಂತರ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ತನ್ನ ಪಾಲಿನ 48 ಕೋಟಿ ರೂ. ಕೊಡಲು ಆಗುವುದಿಲ್ಲ ಎಂದರು. ಈಗ ಉದ್ಘಾಟನೆ, ಶಂಕುಸ್ಥಾಪನೆಗೆ ಮುಂದಾಗಿರುವುದು ಹಾಸ್ಯಾಸ್ಪದ. ಇದೆಲ್ಲವನ್ನೂ ಜಿಲ್ಲೆಯ ಜನರು ನೋಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಈಗಾಗಲೇ ಉದ್ಘಾಟನೆ ಆಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಲ್ಲಿಗೆ ಭೇಟಿ ನೀಡಿದ್ದಾಗ ಸೌಲಭ್ಯಗಳೇ ಇಲ್ಲ ಹೇಗೆ ಉದ್ಘಾಟನೆ ಮಾಡುತ್ತಾರೆ ಎಂದು ಕೇಳಿದ್ದರು. ಸೌಲಭ್ಯಗಳೇ ಇಲ್ಲ ಎಂದವರು ಈಗ ಮತ್ತೊಮ್ಮೆ ಏಕೆ ಉದ್ಘಾಟನೆಗೆ ಮುಂದಾಗಿದ್ದಾರೆ. ಇವರು ಯಾವ ಸೌಲಭ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಅರಸೀಕೆರೆ ತಾಲೂಕು ಬಾಣಾವರದಲ್ಲಿ ಸರ್ಕಾರಿ ಕಾರ್ಯಕ್ರಮ ಎಂದು ಹೇಳಿ ಕೇವಲ ರಾಜಕೀಯ ಭಾಷಣ ಮಾಡಿದರು. ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಹೇಗೆ ಮಾಡುತ್ತಾರೆ. ಆಹ್ವಾನ ಪತ್ರಿಕೆಯಲ್ಲಿ ಎಲ್ಲ ಜನಪ್ರತಿನಿಧಿಗಳ ಹೆಸರು ಹಾಕಿ, ಸರ್ಕಾರದ ಕಾರ್ಯಕ್ರಮ ಎಂದು ವೇದಿಕೆ ನಿರ್ಮಿಸಿ, ಅಲ್ಲಿ ರಾಜಕೀಯ ಭಾಷಣ ಮಾಡೋದು ಎಷ್ಟು ಸರಿ. ಬಾಣಾವರದಲ್ಲಿ ಸಿದ್ದರಾಮಣ್ಣ ಭೇಟಿ ಹಾಗೂ ಗಣ್ಯರು, ಸಭಿಕರು ಸೇರಿ ಊಟ ಇತ್ಯಾದಿಯಾಗಿ 3ರಿಂದ 4 ಕೋಟಿ ರೂ. ಖರ್ಚಾಗಿದೆ. ಹಾಸನದಲ್ಲೂ ಹೆಚ್ಚು ಕಡಿಮೆ ಅಷ್ಟೇ ಖರ್ಚು ಆಗಲಿದೆ. ಇದು ಜನರ ದುಡ್ಡಲ್ಲವೇ, ನಿಮ್ಮ ಕಾರ್ಯಕ್ರಮಕ್ಕೆ ಖರ್ಚು ಮಾಡುವ ಹಣವನ್ನಾದರೂ ಜಿಲ್ಲೆಗೆ ಅನುದಾನ ಕೊಟ್ಟಿದ್ದೀರಾ ಎಂದು ಕೇಳಿದರು.
ಪಾಕಿಸ್ತಾನ ಜಿಂದಾಬಾದ್ ಎಂದಿದ್ದು ಸರಿಯಲ್ಲ
ದೇಶದಲ್ಲಿ ಹುಟ್ಟಿದ ಎಲ್ಲರೂ ಭಾರತೀಯರು ಎಂದು ಹೆಮ್ಮೆ ಪಡಬೇಕು. ಅದನ್ನು ಬಿಟ್ಟು ಬೇರೆ ದೇಶ ಹೊಗಳುವುದು ಸರಿಯಲ್ಲ. ಭೂಮಿ ತಾಯಿ ನಮಗೆ ಎಲ್ಲಾ ಕೊಟ್ಟಿದೆ. ಪಾಕಿಸ್ತಾನ ಜಿಂದಾಬಾದ್ ಎಂದಿದ್ದು ಸರಿಯಲ್ಲ. ಹಾಗೆ ಘೋಷಣೆ ಕೂಗಿದವನನ್ನು ನಾಸಿರ್ ಹುಸೇನ್ ಅವರು ತಡೆಯಬಹುದಿತ್ತು. ಅದನ್ನು ಬಿಟ್ಟು ಮಾಧ್ಯಮದವರ ಮೇಲೆ ಮುಗಿಬಿದ್ದಿದ್ದು ಸರಿಯಲ್ಲ. ನಾವು ಭಾರತೀಯರು ಒಟ್ಟಿಗೆ ಹೋಗಬೇಕು. ಅದನ್ನು ಬಿಟ್ಟು ಹೀಗೆಲ್ಲಾ ನಡೆದುಕೊಳ್ಳುವುದು ಬೇಸರದ ಸಂಗತಿ ಎಂದರು.
ರಾಜ್ಯಸಭೆ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕುಪೇಂದ್ರರೆಡ್ಡಿ ಎನ್‌ಡಿಎ ಅಭ್ಯರ್ಥಿ ಆಗಿದ್ದರು. ಬಿಜೆಪಿಯಿಂದ ಒಬ್ಬರು ಕಣಕ್ಕಿಳಿದಿದ್ದರು. ಕಾಂಗ್ರೆಸ್ ಮೂವರು ಅಭ್ಯರ್ಥಿಗಳನ್ನು ನಿಲ್ಲಿಸಿತ್ತು. ಇವರ ದುರಾಡಳಿತದ ವಿರುದ್ಧ ಪಕ್ಷೇತರ ಶಾಸಕರು ಮತ ಹಾಕುವರು ಎಂಬ ವಿಶ್ವಾಸ ನಮ್ಮಲ್ಲಿತ್ತು. ಆದರೆ ನಮ್ಮ ಭಾವನೆ ತಪ್ಪಾಗಿದೆ. ಆದರೆ ಜೆಡಿಎಸ್ ಒಡೆದು ಹೋಗಿದೆ, ಅಡ್ಡ ಮತದಾನ ನಡೆಯಲಿದೆ ಎಂದುಕೊಂಡಿದ್ದವರಿಗೆ ನಮ್ಮ ಪಕ್ಷದ 19 ಶಾಸಕರೂ ಎನ್‌ಡಿಎ ಅಭ್ಯರ್ಥಿಗೆ ಮತ ಹಾಕುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ನಾವು ಗಟ್ಟಿಯಾಗಿದ್ದೇವೆ ಎಂಬ ಸಂದೇಶ ಕೊಟ್ಟಿದ್ದೇವೆ ಎಂದರು.
ಸಂಸದರು ಗ್ರಾಪಂ ಸದಸ್ಯರನ್ನು ಹೆದರಿಸುತ್ತಿದ್ದಾರೆ ಎಂಬ ಶಿವಲಿಂಗೇಗೌಡ ಅವರ ಆರೋಪಕ್ಕೆ ತಿರುಗೇಟು ನೀಡಿದ ಪ್ರಜ್ವಲ್, ನಾನು ಜನರ ಕಷ್ಟ-ಸುಖ ತಿಳಿಯಲು ಭೇಟಿ ನೀಡುತ್ತಿದ್ದೇನೆಯೇ ಹೊರತು, ಹೆದರಿಸುವ ಅವಶ್ಯಕತೆ ನನಗಿಲ್ಲ. ಹಿಂದೆ ಕಾಂಗ್ರೆಸ್ ಸಂಸದರು ಎಷ್ಟು ಮಂದಿ ಪಂಚಾಯಿತಿಗಳಿಗೆ ಹೋಗಿ ಕೆಲಸ ಮಾಡಿದ್ದಾರೆ. ನಮ್ಮ ಕಡೆಗೆ ಬೊಟ್ಟು ಮಾಡುವುದು ಬೇಡ. ನಾನು ಜನರ ವಿಶ್ವಾಸ ಪಡೆಯಲು ಭೇಟಿ ನೀಡಿದ್ದೇನೆ. ಅರಸೀಕೆರೆಯಲ್ಲಿ ಜನ ಆಡಳಿತ ಪಕ್ಷಕ್ಕಿಂತ ಶಾಸಕ ಶಿವಲಿಂಗೇಗೌಡ ಅವರ ವಿರುದ್ಧವಾಗಿದ್ದಾರೆ. ಅದು ಅವರಿಗೆ ಗೊತ್ತಾಗಿ, ಭಯಭೀತರಾಗಿ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.