ನಮ್ಮ ಮಹಾ ಪುರುಷರನ್ನು ಕೊಂದ ದಿನವೇ ದೀಪಾವಳಿ: ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಕಳವಳ

mysore
Published on

ಮೈಸೂರು: ನಮ್ಮ ಮಹಾ ಪುರುಷರನ್ನು ಕೊಂದ ದಿನವನ್ನು ನಮ್ಮಿಂದಲೇ ಪಟಾಕಿ ಹಚ್ಚಿಸಿ ದೀಪಾವಳಿ ಆಚರಿಸುವಂತೆ ಮಾಡಲಾಗಿದೆ ಎಂದು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.

68ನೇ ಧಮ್ಮ ದೀಕ್ಷಾ ವರ್ಷಾಚರಣೆ ಅಂಗವಾಗಿ ತನುಮನ ಸಂಸ್ಥೆ ವತಿಯಿಂದ ರಮಾಗೋವಿಂದ ರಂಗಮಂದಿರದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಧಮ್ಮ ಸಂಗೀತೋತ್ಸವ, ರಾಜ್ಯಮಟ್ಟದ ಧಮ್ಮ ಸೇವಾರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಮ್ರಾಟ ಅಶೋಕ ಚಕ್ರವರ್ತಿಯಿಂದ ದೀಪ ಉತ್ಸವ ಆರಂಭವಾಯಿತು. ಕ್ರಿ.ಪೂ.380ರಲ್ಲಿ ಕಳಿಂಗ ಯುದ್ಧದ ನಂತರ 94 ಸಾವಿರ ಬುದ್ಧ ಸ್ತೂಪಗಳನ್ನು ನಿರ್ಮಿಸಲಾಯಿತು. ಇದರ ಪ್ರಯುಕ್ತ ‘ಬುದ್ಧನ ಧಮ್ಮದ ಕಡೆ ಬೆಳಕಿನ ನಡೆಗೆ’ ಎಂದ ಆಶಯದಿಂದ ದೀಪ ಉತ್ಸವ ಆಚರಿಸಲಾಯಿತು. ಬಳಿಕ ಇತಿಹಾಸವನ್ನು ತಿರುಚಿಸಿ ಕಲ್ಲಿನ ದೇವರನ್ನು ವಿಜೃಂಭಿಸಲಾಗುತ್ತಿದೆ. ಮನುಸ್ಮತಿಯನ್ನು ತುಂಬಲಾಗಿದೆ ಎಂದು ಕಿಡಿಕಾರಿದರು.

‘ಯಾವ ಸಮುದಾಯವು ತನ್ನ ಇತಿಹಾಸವನ್ನು ತಮ್ಮವರಿಗೆ ಹೇಳುವುದಿಲ್ಲವೋ ಆ ಸಮುದಾಯ ಶಾಶ್ವತವಾಗಿ ಗುಲಾಮಗಿರಿಯತ್ತ ಹೋಗಲಿದೆ’ ಎಂದು ಡಾ.ಅಂಬೇಡ್ಕರ್ ಹೇಳಿದ್ದು ಈ ಕಾರಣಕ್ಕೆ. ಆದ್ದರಿಂದ ಸಮುದಾಯದ ಚರಿತ್ರೆ, ಸಂಸ್ಕೃತಿಯನ್ನು ಹೇಳಬೇಕಿದೆ ಎಂದರು.

ಜಗತ್ತಿಗೆ ಪ್ರೀತಿ-ಪ್ರಜ್ಞೆಯನ್ನು ಹೇಳಿಕೊಟ್ಟಿದ್ದೇ ಬುದ್ಧ ಧಮ್ಮ. ಇದರ ಮೇಲೆ ಅದು ನಿಂತಿದೆ. ‘ಕಲ್ಲಿನೊಳಗೆ ದೇವರು ಇದ್ದಾನೆ’ ಎಂದು ನಂಬಿಸಿ ವಿಜೃಂಭಿಸುತ್ತಿರುವ ಧರ್ಮ ಒಂದು ಕಡೆಯಾದರೆ. ಮನುಷ್ಯನೊಳಗೆ ಮನುಷ್ಯ ಇದ್ದಾನೆ ಎಂಬುದನ್ನು ಸಾಬೀತುಪಡಿಸುವ ಧಮ್ಮ ಇನ್ನೊಂದು ಕಡೆ ಇದೆ ಎಂದರು.

ಕಲ್ಲಿನೊಳಗೆ ದೇವರು ಇದ್ದಾನೆ ಎಂದು ಹೇಳುವ ಧರ್ಮವು ಮನುಷ್ಯರನ್ನು ಕುಬ್ಜಗೊಳಿಸಿದೆ. ಜಗತ್ತಿನ ಅದ್ಭುತಗಳು ಹೊರಗಿನಿಂದ ಸಂಭವಿಸಲ್ಲ. ಅದು ತನ್ನೊಳಗಿನಿಂದಲೇ ಸಂಭವಿಸುತ್ತವೆ. ಅದು ಕಲ್ಲಿನೊಳಗೆ ದೇವರಿಂದಲ್ಲ, ಬೌದ್ಧ ಧಮ್ಮವು ತನ್ನ ಒಳಗಿನ ಆಗುವ ಧಮ್ಮ ಎಂದರು.

ಮನುಷ್ಯತ್ವ ಶೋಧಿಸುವುದೇ ಬೌದ್ಧ ಧಮ್ಮ. ಪ್ರೀತಿ, ಸಹನೆ, ಕರುಣೆ, ಮೈತ್ರಿ, ಪ್ರಜ್ಞೆಯನ್ನೇ ಅದು ಅಪ್ಪಿಕೊಂಡಿದೆ. ಆದರೆ, ಶತಮಾನಗಳ ಹಿಂದೆಯೇ ಈ ಧಮ್ಮವನ್ನು ಸುಟ್ಟು ಹಾಕಿದ್ದಾರೆ. ದೇಶದಲ್ಲಿದ್ದ 94 ಸಾವಿರ ಸ್ತೂಪಗಳನ್ನೇ ನಾಶ ಪಡಿಸಿದ್ದಾರೆ. ಆದರೆ, ಇಡೀ ಜಗತ್ತು ಮಾತ್ರ ಬುದ್ಧನ ಕಡೆ ನೋಡುತ್ತಿದೆ. ಆದರೆ, ಭಾರತ ಮಾತ್ರ ಇದಕ್ಕೆ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು.

ಶತಮಾನಗಳ ಹಿಂದೆ ಹಿಂದುಗಳು, ಮುಸ್ಲಿಂರು, ಜೈನರು, ಕ್ರೈಸ್ತರು ಇದ್ದರು. ಈಗಲೂ ಇದ್ದಾರೆ. ಆದರೆ, ಬೌದ್ಧರು ಎಲ್ಲಿ ಹೋದರು? ಅಂಬೇಡ್ಕರ್ ಪ್ರಕಾರ ಮೂರನೇ ಒಂದು ಭಾಗದಷ್ಟಿದ್ದ ಬುದ್ಧರು ಎಲ್ಲಿದ್ದಾರೆ. ಅವರೆಲ್ಲ ಈಗ ಎಸ್‌ಸಿ-ಎಸ್‌ಟಿ ಮತ್ತು ಹಿಂದುಳಿದ ವರ್ಗದವರಾಗಿದ್ದಾರೆ. ಇದು ಮುಚ್ಚಿಸಿದ ಇತಿಹಾಸ. ನೈಜ ಚರಿತ್ರೆಗೆ ಪರದೆ ಹಾಕಲಾಗಿದೆ. ನಾವು ಜ್ಞಾನವಂತರಾಗಿ ಚರಿತ್ರೆಯನ್ನು ಅರಿತುಕೊಳ್ಳಬೇಕು ಎಂದರು.

ಮನುಷ್ಯ ಮನುಷ್ಯರನ್ನು ಗೌರವಿಸುವ ಪರಿಸ್ಥಿತಿ ಕಾಣುತ್ತಿಲ್ಲ. ಧರ್ಮ, ಕರ್ಮ ಬೋಧಿಸುವ ಧರ್ಮವು ಮನುಷ್ಯರ ನಡುವೆ ಬೆಂಕಿ ಹಚ್ಚುವ ಮೂಲಕ ಪ್ರಜ್ವಲಿಸುತ್ತದೆ. ನಮಗೆ ಬೆಂಕಿ ನಂದಿಸುವ ಧರ್ಮ ಬೇಕೋ ಹೊರತು, ಬೆಂಕಿಯನ್ನು ಹಚ್ಚು ಧರ್ಮ ಯಾವತ್ತೂ ಬೇಡ ಎಂದರು

ಬುದ್ಧ ಯಾರಿಗೆ ಬೇಡ? ಬೌದ್ಧ ಧಮ್ಮ ಜ್ಞಾನದ ಬೆಳಕು. ಹೀಗಾಗಿಯೇ ಬುದ್ಧ ಹೇಳಿರುವುದು ‘ನಿನಗೆ ನೀನೇ ಬೆಳಕು’ ಎಂದಿರುವುದು. ಅದನ್ನು ಯಾರನ್ನೋ ಕೇಳುವುದಲ್ಲ ಎಂದು ಹೇಳಿದರು.

ಶಾಸಕ ಡಿ.ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಬಿ.ಹರ್ಷವರ್ಧನ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಚಿಕ್ಕ ಜವರಪ್ಪ, ಮುಖಂಡ ಎಚ್.ವಾಸು, ಕೆಪಿಸಿಸ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಎ.ಆರ್.ಕಾಂತರಾಜು, ಗಾಯಕ ಲಕ್ಷ್ಮೀ ರಾಮ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net