

ಹಾಸನ: ಈ ಬಾರಿಯ ವಿಧಾನಸಭೆ ಚುನಾವನೆಯಲ್ಲಿ ಆಲೂರು - ಸಕಲೇಶಪುರ ಮೀಸಲು ಕ್ಷೇತ್ರದಿಂದ ನನ್ನನ್ನು ಸೋಲಿಸಲಿಲ್ಲ, ಕಾಂಗ್ರೆಸ್ ಪಕ್ಷ ಮತ್ತು ಕಾರ‌್ಯಕರ್ತರನ್ನು ನಮ್ಮ ಪಕ್ಷದ ಕೆಲ ಮುಖಂಡರು ಸೋಲಿಸಿದರು ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರುಳಿ ಮೋಹನ್ ಆರೋಪಿಸಿದರು.
ನನ್ನ ಸೋಲಿನ ಬಗ್ಗೆ ನಾನು ಧೃತಿಗೆಡುವುದಿಲ್ಲ. ಕ್ಷೇತ್ರದಲ್ಲೇ ಇದ್ದು ಪಕ್ಷಕ್ಕಾಗಿ ಮತ್ತು ನನಗಾಗಿ ದುಡಿದ ಕಾರ‌್ಯಕರ್ತರು ಮತ್ತು ಮುಖಂಡರ ಜೊತೆ ಇದ್ದು, ಪಕ್ಷ ಸಂಘಟನೆ ಮಾಡುತ್ತೇನೆ. ಬೇರೆಯವರ ರೀತಿ ಸೋತ ಮೇಲೆ ಕ್ಷೇತ್ರ ಬಿಟ್ಟು ಹೊಗುವ ಜಾಯಮಾನ ನನ್ನದಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇಡೀ ಜಿಲ್ಲೆಯಲ್ಲೇ ಸಕಲೇಶಪುರ ಕ್ಷೇತ್ರದಿಂದ ನನಗೆ ಗೆಲ್ಲುವ ಅವಕಾಶಗಳಿದ್ದವು. ಆದರೆ ಪಕ್ಷದ ಮುಖಂಡರು ಎನಿಸಿಕೊಂಡವರು ಮತ್ತು ಹಿರಿಯರು ಹಾಗೂ ಆಕಾಂಕ್ದಿಗಳಾಗಿದ್ದವರು ಸರಿಯಾದ ರೀತಿ ಕೆಲಸ ಮಾಡದೇ ಇದ್ದುದರಿಂದ ನನಗೆ ಸೋಲಾಗಿದೆ. ಆದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದರು.
ಕೆಲವರು ನಮ್ಮ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಗೆಲ್ಲುತ್ತದೆ ಎಂದು ಜೆಡಿಎಸ್‌ಗೆ ಮತ ಹಾಕುವಂತೆ ಪ್ರಚಾರ ಮಾಡಿದ್ದಾರೆ. ಅಲ್ಲದೆ ಚುನಾವಣೆ ಘೋಷಣೆಯಾಗಿ ನನ್ನನ್ನು ಮೊದಲ ಸಲವೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ದಿನದಿಂದಲೂ ಕೂಡ ನನ್ನ ಬಗ್ಗೆ ಅಪಪ್ರಚಾರಗಳು ಬಂದವು ಎಂದು ದೂರಿದರು.
ವೈಯಕ್ತಿಕ ದ್ವೇಷಗಳನ್ನು ಪಕ್ಷಕ್ಕೆ ತಂದರಲ್ಲದೆ, ನನ್ನ ಮೇಲೆ ಜಾತಿಯ ಅಪಪ್ರಚಾರವನ್ನು ಮಾಡುತ್ತಾ ನನ್ನ ಸೋಲಿಗೆ ಕಾರಣಕರ್ತರಾದರು. ಆದರೆ ನಾನು ಯಾರನ್ನೂ ಕೂಡ ದೂಷಿಸುವುದಿಲ್ಲ. ಅವರೆಲ್ಲರಿಗೂ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ಹೇಳಿದ ಅವರು, ನನ್ನ ಚುನಾವಣೆಯಲ್ಲಿ ಪಕ್ಷದ ವರಿಷ್ಠರು, ರಾಜ್ಯ ಮತ್ತು ಜಿಲ್ಲಾ ನಾಯಕರು, ಮತದಾರರು , ಕಾರ‌್ಯಕರ್ತರೆಲ್ಲರೂ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಅವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಕೊಲ್ಲಳ್ಳಿ ಸಲೀಂ, ಯಡೇಹಳ್ಳಿ ಮಂಜುನಾಥ್, ಸಕಲೇಶಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಮುಖಂಡರಾದ ಗಿರೀಶ್, ಬೈಕೆರೆ ದೇವರಾಜ್ ಹಾಜರಿದ್ದರು.