

ಕಮಲಾಪುರ (ಲಿಂ.ಶ್ರೀ ಗುರುಲಿಂಗ ಶಿವಾಚಾರ್ಯರ ವೇದಿಕೆ): ಮಾನ್ಯಖೇಟದ ರಾಷ್ಟ್ರಕೂಟರು, ವಿಶ್ವವಿದ್ಯಾಲಯದ ನಾಗಾವಿ, ಕಮಲಾಪುರ ದಶರಥನ ಕೆರೆ, ಶ್ರವಣಕುಮಾರನ ಸಮಾಧಿ, ಮರತೂರಿನ ವಿಜ್ಞಾನೇಶ್ವರ, ಒಂಬತ್ತು ನಳಕುಗಳ ನವನಿಹಾಳ, ಕೆಂಡು ಮಣ್ಣಿನ ಮರಗುತ್ತಿ, ಡೊಂಗರಗಾಂವ, ಪ್ರಸಾದ ವಿತರಕ ಶರಣ ಜೀವಣಗಿಯ ಬಿಬ್ಬಿ ಬಾಚಯ್ಯ ಸೇರಿ ಹಲವು ಸ್ಥಳೀಯ ವೈಶಿಷ್ಟೃಗಳ ಬಗ್ಗೆ ಸಂಶೋಧನೆ ನಡೆದು ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸುವ ಕೆಲಸ ಆಗಬೇಕಿದೆ ಎಂದು ಸರ್ವಾಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಆಕೃತಿ ಬಿರಾದಾರ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬುಧವಾರ ಆಯೋಜಿಸಿದ್ದ 18ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸವರ್ಾಧ್ಯಕ್ಷತೆ ವಹಿಸಿದ್ದ ಅವರು, ವರಹಗಳು ಹೆಚ್ಚಾಗಿರುತ್ತಿದ್ದ ವರಹನಾಳ, ಮೂರು ಕಡೆ ಬಾಗಿದ ಬಾಚನಾಳ, ಕತ್ತಲೆಯ ದೇವಸ್ಥಾನದ ಕಾಳಮಂದರಗಿ, ಕಮಲ ಬೆಳೆಯುತ್ತಿದ್ದ ಕಮಲಾಪುರ ಸೇರಿ ಇಲ್ಲಿ ಸಾಹಿತ್ಯ, ಸಂಶೋಧಕರಿಗೆ ನೂರೆಂಟು ಅವಕಾಶಗಳಿದ್ದು, ಸಾಹಿತ್ಯ ಸಂಪತ್ತು ಹೇರಳವಾಗಿದೆ. ಅದನ್ನು ಹುಡುಕಾಡಬೇಕು. ಸಂಶೋಧಿಸಿ ಬರೆದು ಪ್ರಕಾಶನ ಮಾಡಬೇಕು ಎಂದು ಸಲಹೆ ನೀಡಿದರು.
ಮುದನೂರಿನ ದಾಸಿಮಯ್ಯ, ಕೆಂಭಾವಿಯ ಭೋಗಣ್ಣ, ಚಂದಿಮರಸ, ಕಲಬುರಗಿ ಶರಣರು, ಆಯ್ದಕ್ಕಿ ಮಾರಯ್ಯ ಅವರಂಥ ಶರಣ ಪರಂಪರೆಯ ಬಹುದೊಡ್ಡ ಕೊಂಡಿ ನಮ್ಮಲ್ಲಿದೆ. ಕಲ್ಯಾಣದ ಶರಣರು ಈ ಭಾಗದಲ್ಲಿ ನಡೆದಾಡಿದ್ದಾರೆ. ಆದರೆ ಇತಿಹಾಸದಲ್ಲಿ ಮಾಯವಾಗಿ ಹೋಗಿದ್ದಾರೆ. ಪರಕೀಯರ ಆಳ್ವಿಕೆ, ಪುರಾತನ ಕಾಲದ ಕುರುಹುಗಳ ನಾಶ, ಸಂಶೋಧಕರ ಕೊರತೆಯೇ ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಸಮ್ಮೇಳನ ಉದ್ಘಾಟಿಸಿದ ನಟ, ಸಾಹಿತಿ ಸಂಗಮೇಶ ಉಪಾಸೆ ಮಾತನಾಡಿ, ಬರಹ, ಭಾಷೆಗೆ ತನ್ನದೇ ಆದ ಶಕ್ತಿ ಇದೆ. ಪಂಪನಿಂದ ಚಂಪಾವರೆಗೆ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ. ಕವಿರಾಜ ಮಾರ್ಗದ ನೆಲೆಬೀಡಿನಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರಕಿದ್ದು ನಮ್ಮ ಸಾಹಿತ್ಯದ ಶಕ್ತಿ. ಈ ಭಾಗ ಹೆಸರಿನಿಂದ ಮಾತ್ರವಲ್ಲ ಶಿಕ್ಷಣ, ಉದ್ಯೋಗ, ಕೈಗಾರಿಕೆಗಳಿಂದಲೂ ಸಮೃದ್ಧವಾಗಬೇಕು ಎಂದರು.
ರಾಷ್ಟ್ರೀಯ ಹೂವು ಕಮಲಕ್ಕೆ ವಿಭಿನ್ನ ಶಕ್ತಿ ಇದೆ. ಅದು ಕಮಲಾಪುರದಲ್ಲಿ ಅನಾವರಣವಾಗುತ್ತಿದೆ. ದೇಶದಲ್ಲಿ ಕಮಲ ವಿಭಿನ್ನವಾಗಿ ನೆಲೆ ಕಂಡುಕೊಂಡಿದ್ದು, ಅದೇ ಮಾದರಿಯಲ್ಲಿ ಕಮಲದಿಂದಲೇ ಹೆಸರುವಾಸಿಯಾದ ಕಮಲಾಪುರ ಶಿಕ್ಷಣ, ಸಾಹಿತ್ಯದಿಂದ ಸಮೃದ್ಧವಾಗಲಿ. ಅಧಿಕಾರ ಶಾಹಿ ವಿರುದ್ಧ ಕಲೆ, ಸಾಹಿತ್ಯ ಸದಾ ಇರಬೇಕು. ಕಲೆ, ಸಾಹಿತ್ಯದಿಂದ ಸಮಾಜವನ್ನು ಜಾಗೃತವಾಗಿ ಇಡಬಹುದು. ಕಲ್ಯಾಣ ಕರ್ನಾಟಕ ಆರ್ಥಿಕವಾಗಿ ಹಿಂದುಳಿದಿರಬಹುದು. ಆದರೆ ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ರಾಜ್ಯದಲ್ಲೇ ಆತ್ಯಂತ ಶ್ರೀಮಂತವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕೆ.ಗಿರಿಮಲ್ಲ ಸಂಪಾದಕತ್ವದ ಕೆಂಬಾಳೆ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಪ್ರಾಸ್ತಾವಿಕ ಮಾತನಾಡಿದರು. ಮುತ್ಯಾನ ಬಬಲಾದದ ಶ್ರೀ ಗುರುಪಾದಲಿಂಗ ಶಿವಯೋಗಿಗಳು, ಮಹಾಗಾಂವ ಕಳ್ಳಿಮಠದ ಶ್ರೀ ವಿರುಪಾಕ್ಷ ದೇವರು, ಬೀದರ್ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಪ್ರಮುಖರಾದ ಸುಭಾಷ ಬಿರಾದಾರ, ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ಶರಣರಾಜ ಛಪ್ಪರಬಂದಿ, ಶರಣಗೌಡ ಪೊ.ಪಾಟೀಲ್, ಬಸವರಾಜ ಮಾಲಿ ಪಾಟೀಲ್, ದತ್ತಪ್ಪ ಸಾಗನೂರ, ಸುರೇಶ ಲೇಂಗಟಿ, ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ಸುರೇಶ ವರ್ಮಾ, ಸತೀಶ ಸೊರಡೆ, ಪ್ರವೀಣ ಮುಚ್ಚಟ್ಟಿ, ಗುರು ಮಾಟೂರ, ದೀಪಕ ಹೊಡಲ್, ಅಬ್ದುಲ್ ಸತ್ತಾರ, ರವಿ ಬಿಕೆ, ದಾಸಿಮಯ್ಯ ವಡ್ಡನಕೇರಿ, ಪರಮೇಶ್ವರ ಓಕಳಿ, ಅಮೃತ ಗೌರೆ, ಶಶಿಧರ ಮಾಕಾ, ಆನಂದ ವಾರಿಕ್, ಸುರೇಶ ರಾಠೋಡ, ವೆಂಕಟೇಶ ರಾಠೋಡ್, ರಘುನಂದನ ದ್ಯಾಮಣಿ, ಅಂದಪ್ಪ ಓಕಳಿ, ಸಾಗರ ಗುತ್ತೇದಾರ್, ರೇಣುಕಾ ಎನ್, ಕವಿತಾ ದೇಗಾಂವ, ತಯ್ಯಬ್ ಚೌದ್ರಿ, ಬಾಬುರಾವ ಜಾಲಳ್ಳಿ, ಗುರು ನಾಟೀಕರ್, ಅಂಬಾರಾಯ ಜವಳಗಾ, ವೈಜನಾಥ, ಸಂಜಯಕುಮಾರ, ಚಂದ್ರಕಾಂತ ಇತರರಿದ್ದರು.
ಕಸಾಪ ತಾಲೂಕು ಅಧ್ಯಕ್ಷ ರಾಮಕೃಷ್ಣ ಖಡಕೆ ಸ್ವಾಗತಿಸಿದರು. ಪೂಜಾ ಭಂಕಲಗಿ ನಿರೂಪಣೆ ಮಾಡಿದರು. ಸಿದ್ಧಾರ್ಥ ಚಿಮ್ಮಾ ಇದಲಾಯಿ ನಾಡಗೀತೆ, ಆಕಾಂಕ್ಷಾ ಪುರಾಣಿಕ ಭರತನಾಟ್ಯ ಪ್ರಸ್ತುತಪಡಿಸಿದರು.
ಪ್ರವಾಸಿ ತಾಣವಾಗಲಿ ಕೆಂಬಾಳೆಯೂರು: ಐತಿಹಾಸಿಕ ಕಮಲಾಪುರದ ದಶರಥ ಕೆರೆ ಅಭಿವೃದ್ಧಿಪಡಿಸಬೇಕು. ಶ್ರವಣಕುಮಾರ ಸಮಾಧಿ ಸ್ಥಳ, ರಾವಣನ ಪೂಜೆ ಮಾಡಿದ ನರೋಣಾ ಅಭಿವೃದ್ಧಿಪಡಿಸಿ ಈಗಿನ ಮಕ್ಕಳಿಗೆ ವೈಶಿಷ್ಟೃ ತಿಳಿಹೇಳುವುದರ ಜತೆಗೆ ಪ್ರೇರಣೆ ನೀಡಬೇಕು. ಕೆಂಪು ಬಾಳೆ ನಾಡಿನಾದ್ಯಂತ ಸಿಗುವಂತಾಗಬೇಕು. ರೈಲ್ವೆ ವಿಭಾಗೀಯ ಕಚೇರಿ ಆರಂಭಿಸುವುದರ ಜತೆಗೆ ಹೊಸ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು. ನಮ್ಮ ಭಾಗದ ಶಿಲಾಲಿಪಿಗಳು, ಮಹಾಗ್ರಂಥಗಳು, ಶರಣರ ವಾಸ್ತವ ಚರಿತ್ರೆ ಕಾಲಗರ್ಭದಲ್ಲಿ ನಾಶವಾಗಿದೆ. ಕೆಲ ಚರಿತ್ರೆ, ಆಯಾ ಸ್ಥಳ, ಗ್ರಾಮ, ಪುರಾತನ ದೇಗುಲಗಳು ಸಾಕ್ಷಿ ಹೇಳುತ್ತಿದ್ದರೂ ಸಂಶೋಧನೆ ಕೊರತೆಯಿಂದ ಇತಿಹಾಸದಿಂದ ಮರೆಯಾಗಿದ್ದು, ಸಂಶೋಧನೆ ಅವಶ್ಯಕವಾಗಿದೆ ಎಂದು ಸವರ್ಾಧ್ಯಕ್ಷ ಸುಭಾಶ್ಚಂದ್ರ ಕಶೆಟ್ಟಿ ಹೇಳಿದರು.
ಅರಣ್ಯ ಸಂಪತ್ತಿನ ಸಮೃದ್ಧ ನಾಡು: ಕಮಲಾಪುರ ಪ್ರದೇಶ ಗುಡ್ಡ-ಕಾಡುಗಳಿಂದ ಕೂಡಿತ್ತು. ಹಿಂದೆ ಕಮಲಾಪುರ ಸುತ್ತಮುತ್ತಲೂ ಹುಲಿ-ಚಿರತೆಯಂಥ ಕಾಡು ಪ್ರಾಣಿಗಳು ಓಡಾಡುತ್ತಿರುವುದನ್ನು ಕಂಡಿದ್ದೇನೆ. ನಮ್ಮ ಭಾಗದ ಶೂರ ದೇವಲನಾಯಕ್ ಹುಲಿ ಬೇಟೆಯಾಡಿದಾಗ ಆತ ಮತ್ತು ಹುಲಿ ಶವದ ಮೆರವಣಿಗೆ ಮಾಡಿದ್ದನ್ನು ಕಮಲಾಪುರದಲ್ಲಿ ಕಂಡಿರುವೆ. ಭೀಮನಾಳದ ಗುಡ್ಡದಲ್ಲಿ ಭೀಮ ಅಜ್ಞಾತವಾಸ ಮಾಡಿದ್ದಕ್ಕಾಗಿಯೇ ಭೀಮನ ನಳಕು, ಕೊಳ್ಳ ಇವೆ. ಇಂಥ ಸಮೃದ್ಧ ಅರಣ್ಯ ಪ್ರದೇಶದ ವನ ವೈಭವ ಮರುಕಳಿಸಲಿ ಎಂದು ಕಶೆಟ್ಟಿ ಆಶಿಸಿದರು.