ನಮ್ಮ ನೆಲದ ಸೊಗಡು ಅರಿಯಿರಿ

Untitled design (3)
Published on

ಕೂಡ್ಲಿಗಿ: ಸಾಂಸ್ಕೃತಿಕ ಕಲೆಗಳ ಬೀಡಾಗಿರುವ ಕೂಡ್ಲಿಗಿ ತಾಲೂಕಿನ ಅನೇಕರು ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ ಎಂದು ಛಾಯಾಗ್ರಾಹಕರ ಸಂಘದ ತಾಲೂಕು ಅಧ್ಯಕ್ಷ ಎ.ಎಂ.ಸೋಮಶೇಖರಯ್ಯ ಹೇಳಿದರು.

ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಏರ್ಪಡಿಸಿದ್ದ ತಬಲ ವಾದನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸೋಮವಾರ ಮಾತನಾಡಿದರು. ರಂಗಭೂಮಿ ತವರು ಆಗಿರುವ ತಾಲೂಕಿನ ಅನೇಕ ಕಲಾವಿದರು ಅಭಿನಯದ ಛಾಪು ಮೂಡಿಸಿದ್ದಾರೆ ಎಂದರು.

ಸಂಗೀತ ಕಲಾವಿದರು ಕೂಡ ಕಲೆ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಟಿವಿ, ಮೊಬೈಲ್ ಹಾವಳಿಯಿಂದ ಜನರು ಗಂಡುಕಲೆಗಳನ್ನು ಮರೆತು ಕೀಳುಮಟ್ಟದ ಸಂಭಾಷಣೆ ಹಾಗೂ ಹಾಡುಗಳಿಗೆ ಮಾರು ಹೋಗಿದ್ದಾರೆ. ಇಂದಿನ ಯುವ ಸಮೂಹ ಮನರಂಜನೆಗಾಗಿ ಜಾನಪದ, ಸಂಗೀತ, ಭಾವಗೀತೆ, ರಂಗಗೀತೆಗಳನ್ನು ಹೆಚ್ಚು ನೋಡುವ ಮೂಲಕ ಈ ನೆಲದ ಸೊಗಡನ್ನು ಅರಿಯಬೇಕಿದೆ ಎಂದು ಎ.ಎಂ.ಸೋಮಶೇಖರಯ್ಯ ತಿಳಿಸಿದರು.

ಕನ್ನಡ ಜಾನಪದ ಪರಿಷತ್ತಿನ ತಾಲೂಕು ಅಧ್ಯಕ್ಷ ಕೆ.ಎಂ.ವೀರೇಶ್ ಮಾತನಾಡಿ, ಅನಕ್ಷರಸ್ಥರು ಈ ಹಿಂದೆ ನಾಟಕ ನೋಡಿ ಹಾಗೂ ಸಂಗೀತ ಕೇಳುವುದರಿಂದ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಜಾತ್ರೆ ಹಾಗೂ ವಿಶೇಷ ದಿನಗಳಲ್ಲಿ ಕಲಾವಿದರು ಕಲೆ ಪ್ರದರ್ಶಿಸಲು ಹಗಲಿರುಳು ಶ್ರಮಿಸುತ್ತಿದ್ದರು. ಈ ಕಲಾವಿದರಿಗೆ ಉತ್ತಮ ವೇದಿಕೆಗಳು ಸಿಗಬೇಕಿದೆ. ಸಂಗೀತಕ್ಕೆ ನೋವುಗಳನ್ನು ಮರೆಸುವ ಶಕ್ತಿ ಇದೆ. ಈ ಭಾಗದಲ್ಲಿ ಜನಪದ, ರಂಗಕಲೆ ಹಾಗೂ ಭಜನಾ ಕಲಾವಿದರು ಹೇರಳವಾಗಿದ್ದು, ಅವರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವಕಾಶ ಒದಗಿಸಬೇಕಿದೆ ಎಂದು ತಿಳಿಸಿದರು.

ಡಿ.ವೆಂಕಟೇಶ್ ತಬಲಾ ವಾದನ ಪ್ರಸ್ತುತಪಡಿಸಿದರು. ಕಸಾಪ ತಾಲೂಕು ಅಧ್ಯಕ್ಷ ವೀರೇಶ್ ಅಂಗಡಿ, ಭಜನಾ ಕಲಾವಿದ ಬಾಣದ ನರಸಿಂಹಪ್ಪ, ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಸಂಗಯ್ಯ ಹಿರೇಮಠ, ಸಂಗೀತ ಕಲಾವಿದರಾದ ಅಗ್ರಹಾರ ಸೋಮಶೇಖರಯ್ಯ, ನಾಗರಾಜ, ಅಗಸಗಟ್ಟಿ ತಿಂದಪ್ಪ, ಸಿ.ಎಂ.ಚೆನ್ನವೀರ ಸ್ವಾಮಿ, ಈರಣ್ಣ, ತೂಲಹಳ್ಳಿ ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net