

ಚಿಟಗುಪ್ಪ: ಜೆಡಿಎಸ್ ಪಕ್ಷ ಹಳೆಯ ಮೈಸೂರು ಭಾಗಕ್ಕೆ ಮಾತ್ರ ಸೀಮಿತ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ನಮ್ಮ ಜತೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜನರು ಕೂಡ ಇದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ತಾಲೂಕಿನ ಮನ್ನಾಎಖೇಳ್ಳಿಯ ಮೀನಕೇರಾ ಕ್ರಾಸ್ ಹತ್ತಿರದ ವಿಜಯಲಕ್ಷ್ಮೀ ಫಂಕ್ಷನ್ ಹಾಲ್ನಲ್ಲಿ ಗುರುವಾರ ಆಯೋಜಿಸಿದ್ದ ಸದಸ್ಯತ್ವ ಅಭಿಯಾನ ಹಾಗೂ ಪಕ್ಷದ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಜನರ ಹೋರಾಟದ ಫಲವಾಗಿ ಅನೇಕ ಚುನಾವಣೆಗಳಲ್ಲಿ ನಾವು ಶಾಸಕರನ್ನು ಪಡೆದಿದ್ದೇವೆ ಎಂದರು.
ಮುಂದೆ ಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ಕೂಡ ನಿಮ್ಮ ಸಹಕಾರ ನಮಗೆ ಬೇಕಾಗಿದೆ. ರಾಜ್ಯದ ಉದ್ದಗಲಕ್ಕೂ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡಬೇಕಾಗಿದೆ. ನಾವು ಯಾವುದೇ ಚುನಾವಣೆಯ ದೃಷ್ಟಿಯಿಂದ ಸಂಘಟನೆ ಮಾಡುತ್ತಿಲ್ಲ. ಈಗಾಗಲೇ ನಾಲ್ಕು ಜಿಲ್ಲೆಯ ೧೯ ತಾಲೂಕುಗಳ ಪ್ರವಾಸ ಮಾಡಿದ್ದೇನೆ. ಇತರಡೆ ಪ್ರವಾಸ ಕೈಗೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಭಾಗದ ಯುವಕರು ಸಾರುತ್ತಿರುವ ಸಂದೇಶವನ್ನು ನಾನು ಗಮನಿಸಿದ್ದೇನೆ. ಜೆಡಿಎಸ್ ಪಕ್ಷಕ್ಕೆ ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಕೂಡ ಮುಖಂಡರು, ಕಾರ್ಯಕರ್ತರು ಇದ್ದಾರೆ. ಮುಂದಿನ ದಿನಗಳಲ್ಲಿ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಎಲ್ಲರೂ ಕೆಲಸ ಮಾಡಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಪಂಚಾಯಿತಿಗಳಲ್ಲಿ ಅಧಿಕಾರಿ ನಡೆಸುವ ಪಣ ತೊಡುವ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯಚಟವಟಿಕೆ ಆರಂಭಿಸಬೇಕು ಎಂದು ಕರೆ ನೀಡಿದರು.
ಸ್ಥಳೀಯ ಚುನಾವಣೆಗಳಲ್ಲಿ ಹಿಡಿತ ಸಾಧಿಸಿದರೆ ಮುಂಬರುವ ಚುನಾವಣೆ ನಮಗೆ ಕಷ್ಟವಾಗುವುದಿಲ್ಲ. ಪಕ್ಷಕ್ಕೆ ಜನರ ಆಶೀರ್ವಾದ, ಪ್ರೀತಿ, ವಿಶ್ವಾಸ, ಅಭಿಮಾನವಿದ್ದು, ಅವರ ವಿಶ್ವಾಸವನ್ನು ಹುಸಿಗೊಳಿಸುವುದಿಲ್ಲ. ಜನತಾದಳ ಪಕ್ಷದ ಕಾರ್ಯಕರ್ತರಿಗೆ ನಾಯಕರನ್ನು ಹುಟ್ಟು ಹಾಕುವ ಶಕ್ತಿ ಇದೆ ಎಂದು ಹೇಳಿದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಮಾತನಾಡಿ, ನಮಗೆ ಜನ ಬೆಂಬಲಿಸುವುದು, ಜೈಕಾರ ಹಾಕುವುದು ನಾವು ಮಾಡುವ ಕೆಲಸದ ಮೇಲೆ ನಿಂತಿರುತ್ತದೆ. ಜನರ ಪ್ರೀತಿ ವಿಶ್ವಾಸದಿಂದ ನಾನು ರಾಜಕೀಯದಲ್ಲಿ ಇದ್ದೇನೆ ಎಂದರು.
ನಾವೆಲ್ಲರೂ ರೈತರ ಮಕ್ಕಳು, ದೇಶದಲ್ಲಿ ೭೦ರಷ್ಟು ರೈತರು ಇದ್ದಾರೆ. ಆದರೆ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ರೈತರ ಗ್ಯಾರಂಟಿ ಯಾವುದು ಇದೆ. ನಮ್ಮ ಭಾಗದಲ್ಲಿ ರೈತರು ಸಮಸ್ಯೆಯಲ್ಲಿದ್ದರೂ ಕೂಡ ಅವರ ಬಗ್ಗೆ ಸರ್ಕಾರ ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ರಮೇಶ ಪಾಟೀಲ್ ಸೋಲಪುರ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಸಂಜುರೆಡ್ಡಿ ನಿರ್ಣಾ, ಮಾಜಿ ಶಾಸಕರಾದ ಸುರೇಶ ಗೌಡ, ಮಲ್ಲಿಕಾರ್ಜುನ ಖೂಬಾ, ಪ್ರಮುಖರಾದ ಸೂರ್ಯಕಾಂತ ನಾಗಮಾರಪಳ್ಳಿ, ಐಲಿಂಜಾನ್ ಮಠಪತಿ, ಸಂತೋಷ ರಾಸೂರ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ಅಶೋಕ ಕೊಡ್ಗೆ, ಮನೋಹರ ದಂಡಿ, ಶಿವರಾಜ ಹುಲಿ, ಬಸವರಾಜ ಪಾಟೀಲ್ ಹಾರೂರಗೇರಿ, ರೇವಣಸಿದ್ದ ಬಾವಗಿ, ದತ್ತು ರಾಸೂರ, ಮಹಮ್ಮದ್ ಅಶೋದೋದ್ದಿನ್, ಸಜ್ಜದ್ ಸಾಹೇಬ್, ಸಿದ್ರಾಮಪ್ಪ, ಮಲ್ಲಿಕಾರ್ಜುನ ನೆಳ್ಗೆ, ಅಭಿ ಕಾಳೆ, ಸುದರ್ಶನ ಸುಂದರರಾಜ, ಜಾಫೇಡ್ ಕಡ್ಯಾಳ, ಶಂಕರ ಇತರರಿದ್ದರು.
ಇದಕ್ಕೂ ಮುನ್ನಾ ಮನ್ನಾಎಖೇಳ್ಳಿ ಹತ್ತಿರದ ಶ್ರೀ ಬಾಲಮ್ಮ ದೇವಿ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿ ದರ್ಶನ ಪಡೆದರು.