ಮೈಸೂರು: ಸಾರ್ವಜನಿಕರ ಅನುಕೂಲಕೋಸ್ಕರ ನಗರ ಪ್ರದೇಶಗಳಲ್ಲಿ ಆಯ್ದ ಕೆಲವು ‘ನಮ್ಮ ಕ್ಲಿನಿಕ್’ಗಳನ್ನು ಸಂಜೆ ಕ್ಲಿನಿಕ್‌ಗಳಾಗಿ ಬದಲಾಯಿಸಲು ಕ್ರಮ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾ ಪಂಚಾಯಿತಿಯ ಡಿ. ದೇವರಾಜ ಅರಸು ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ನಮ್ಮ ಕ್ಲಿನಿಕ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವವರು ಬಡ ಹಾಗೂ ಮಧ್ಯಮ ವರ್ಗದವರು. ಬಡ ಹಾಗೂ ಮಧ್ಯಮ ವರ್ಗದವರು ದುಡಿಮೆಗೆ ತೆರಳಿ ಸಂಜೆ ಹಿಂತಿರುಗುತ್ತಾರೆ. ಅಷ್ಟು ಹೊತ್ತಿಗೆ ಕ್ಲಿನಿಕ್ ಸೇವೆ ಇರುವುದಿಲ್ಲ. ಹಾಗಾಗಿ ನಗರದಲ್ಲಿ ಆಯ್ದ ನಮ್ಮ ಕ್ಲಿನಿಕ್‌ನಲ್ಲಿ ಮಧ್ಯಾಹ್ನ 12 ರಿಂದ ರಾತ್ರಿ 8ರವರೆಗೆ ವೈದ್ಯಕೀಯ ಸೇವೆ (ಸಂಜೆ ಕ್ಲಿನಿಕ್) ಒದಗಿಸಲು ಕ್ರಮ ವಹಿಸಬೇಕು. ಸಂಜೆ ಕ್ಲಿನಿಕ್‌ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾದರೆ ಎಲ್ಲ ಕಡೆಗಳಲ್ಲೂ ಸಮಯ ಬದಲಾಯಿಸಲು ಕ್ರಮ ವಹಿಸಲಾಗುವುದು ಎಂದರು.
ತಿ.ನರಸೀಪುರ, ಹುಣಸೂರು ಹಾಗೂ ಪಿರಿಯಾಪಟ್ಟಣ ತಾಲೂಕಿನಲ್ಲಿ ಜನರಿಗೆ ಆರೋಗ್ಯ ಸೇವೆ ಉತ್ತಮವಾಗಿ ದೊರೆಯುತ್ತಿಲ್ಲ. ಎಲ್ಲ ಸೌಲಭ್ಯಗಳು ಇದ್ದರೂ ಜನರಿಗೆ ಆರೋಗ್ಯ ಸೇವೆ ನೀಡಲು ಹಿಂದೇಟು ಹಾಕುವುದು ಸರಿಯಲ್ಲ. ತಾಲೂಕಿನಲ್ಲಿ ಕಡಿಮೆ ಸಂಖ್ಯೆಯಲ್ಲಿ ರೋಗಿಗಳು ವೈದ್ಯಕೀಯ ಸೇವೆ ಪಡೆಯುತ್ತಿದ್ದಾರೆ ಎಂದರೆ ನೀವು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದರ್ಥ. ಪಿರಿಯಾಪಟ್ಟಣ ತಾಲೂಕಿನವರು ಆರೋಗ್ಯ ಸೇವೆಗೆ ದೂರದ ಕೆ.ಆರ್.ನಗರ ಹಾಗೂ ಮಡಿಕೇರಿಗೆ ತೆರಳುವ ಅವಶ್ಯಕತೆ ಏನಿದೆ? ನೀವು ಸರಿಯಾದ ಆರೋಗ್ಯ ಸೇವೆ ನೀಡಿದರೆ ರೋಗಿಗಳು ಬೇರೆ ತಾಲೂಕಿಗೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗುತ್ತಿರಲಿಲ್ಲ. ಈಗ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಉತ್ತಮ ಆರೋಗ್ಯ ಸೇವೆ ನೀಡುವ ಕಡೆಗೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹುಣಸೂರು ತಾಲೂಕು ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾಮಗಾರಿ 2018ರಲ್ಲಿ ಪ್ರಾರಂಭಿಸಿ ಇದುವರೆಗೂ ಪೂರ್ಣಗೊಳಿಸದೆ ಇರುವುದಕ್ಕೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 2018ರಲ್ಲಿ ಒಟ್ಟು 25 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು. ನಂತರ ಈ ಮೊತ್ತವನ್ನು 35 ಕೋಟಿ ರೂ.ಗೆ ಪರಿಷ್ಕರಿಸಲಾಯಿತು. ಇದೀಗ ಕಾಮಗಾರಿ ಪೂರ್ಣಗೊಳಿಸಲು ಪುನಃ 9 ಕೋಟಿ ರೂ. ಅವಶ್ಯಕತೆ ಇದೆ ಎಂದು ಅಧಿಕಾರಿಗಳು ತಿಳಿಸಿದಾಗ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಈ ರೀತಿ ಹಣವನ್ನು ದುಂದುವೆಚ್ಚ ಮಾಡುವುದು ಸರಿಯಲ್ಲ. ನಾನು ಸ್ಥಳ ಪರಿಶೀಲನೆ ನಡೆಸುತ್ತೇನೆ. ಅಲ್ಲಿಯವರೆಗೆ ಹೊಸದಾಗಿ ಅನುದಾನ ನೀಡುವುದಿಲ್ಲ’ ಎಂದು ಸಚಿವರು ತಿಳಿಸಿದರು.
ತಾಯಿ ಮತ್ತು ಮಗುವಿನ ಮರಣ ಪ್ರಮಾಣ ತಗ್ಗಿಸಲು ಕ್ರಮ ವಹಿಸಬೇಕು. ಯಾವ ಕಾರಣಕ್ಕೆ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ವಿಶ್ಲೇಷಣೆ ಮಾಡಿ ಇನ್ನು ಮುಂದೆ ಆ ರೀತಿಯ ಸಾವುಗಳು ಆಗದಂತೆ ಎಚ್ಚರ ವಹಿಸಬೇಕು. ಸಾವಿನ ನಂತರ ಕೇವಲ ಅಂಕಿ ಅಂಶಗಳನ್ನು ಸಿದ್ಧಪಡಿಸುವುದಕ್ಕೆ ಮಾತ್ರ ಅಧಿಕಾರಿಗಳು ಸೀಮಿತ ಆಗಬಾರದು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ಹರೀಶ್ ಗೌಡ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಆಯುಕ್ತ ಡಿ. ರಂದೀಪ್, ನಿರ್ದೇಶಕಿ ಇಂದುಮತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಹಾಗೂ ಇತರರು ಇದ್ದರು.
ಪೈಲೆಟ್ ಯೋಜನೆ ಜಾರಿಗೊಳಿಸಿ
ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಪೈಲೆಟ್ ಯೋಜನೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಮನವಿ ಮಾಡಿದರು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಷ್ಟು ರೋಗಿಗಳು ಭೇಟಿ ನೀಡುತ್ತಿದ್ದಾರೆ ಎಂಬ ಅಂಕಿ ಅಂಶಗಳನ್ನು ಸಂಗ್ರಹಿಸಿ ಈ ಅಂಕಿ ಅಂಶಗಳ ಆಧಾರದ ಮೇಲೆ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸಲು ಕ್ರಮ ವಹಿಸಬೇಕು ಎಂದು ಶಾಸಕ ತನ್ವೀರ್ ಸೇಠ್ ಸಲಹೆ ನೀಡಿದರು.
ಮಕ್ಕಳು ಅಪೌಷ್ಟಿಕತೆಯಿಂದ ಬಳಲಬಾರದು
ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಅಪೌಷ್ಟಿಕತೆಯಿಂದ ಬಳಲದಂತೆ ನೋಡಿಕೊಳ್ಳಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ನಿರ್ದೇಶ ನೀಡಿದರು. ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಿ ಕಳುಹಿಸಿದರೆ ನಿಮ್ಮ ಜವಾಬ್ದಾರಿ ಮುಗಿಯುವುದಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ನಿರಂತರವಾಗಿ ಪೌಷ್ಟಿಕ ಆಹಾರ ದೊರೆಯುವಂತೆ ಮಾಡಬೇಕು. ಪೌಷ್ಟಿಕ ಆಹಾರದ ಕೊರತೆ ಇದ್ದರೆ ಸರ್ಕಾರದ ಗಮನಕ್ಕೆ ತರಬೇಕು. ಸರ್ಕಾರದ ಹಂತದಲ್ಲಿ ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ವಹಿಸಲಾಗುವುದು ಎಂದರು.
ಕೋಟ್
ಮೈಸೂರು ಮಹಾರಾಜರ ಕೊಡುಗೆಯಿಂದ ಮೈಸೂರು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ರೂಪುಗೊಂಡಿದೆ. ಹೀಗಾಗಿ ಮೈಸೂರು ಜಿಲ್ಲೆಯವರು ಆರೋಗ್ಯ ಸೇವೆಯ ವಿಚಾರದಲ್ಲಿ ಉತ್ತರ ಕರ್ನಾಟಕದೊಂದಿಗೆ ಹೋಲಿಕೆ ಮಾಡಿ ನಮ್ಮದು ಉತ್ತಮ ಸಾಧನೆ ಎಂದು ಸಂತೃಪ್ತಿ ಪಡಬಾರದು. ದೇಶದಲ್ಲಿ ಕೇರಳ ಹಾಗೂ ತಮಿಳುನಾಡು ಆರೋಗ್ಯ ಸೇವೆಯಲ್ಲಿ ಮುಂಚೂಣಿಯಲ್ಲಿವೆ. ಮೈಸೂರಿನವರು ಕೇರಳ, ತಮಿಳುನಾಡಿನೊಂದಿಗೆ ಹೋಲಿಕೆ ಮಾಡುವ ರೀತಿಯಲ್ಲಿ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು. ಹಾಗಾಗಿ ಕೊರತೆ ಗಳು ಹಾಗೂ ಲೋಪಗಳನ್ನು ಸರಿಪಡಿಸಿಕೊಂಡು ಸಾಧನೆ ತೋರಬೇಕು.
ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ