ನಮ್ಮ ಕ್ಲಿನಿಕ್ ಸದುಪಯೋಗಪಡಿಸಿಕೊಳ್ಳಿ

14Jaggu6
ಮಜಗಾವಿಯಲ್ಲಿ ಬುಧವಾರ ಶಾಸಕ ಅಭಯ ಪಾಟೀಲ ನಮ್ಮ ಕ್ಲಿನಿಕ್ ಉದ್ಘಾಟಿಸಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ, ಡಾ. ಶಿವಾನಂದ ಮಾಸ್ತಿಹೊಳಿ, ಪ್ರೀಯಾ ಸಾತಗೌಡ, ಡಾ. ಅಶೋಕ ಶೆಟ್ಟಿ, ಡಾ. ವಿ.ವೈ, ಕಡಲೋಕರ, ಡಾ. ಗಿರೀಶ ಸೋನವಾಲಕರ ಇತರರಿದ್ದರು.
Published on

ಬೆಳಗಾವಿ: ಮಜಗಾಂವ, ಉದ್ಯಮಬಾಗ ಹಾಗೂ ಸುತ್ತಲಿನ ಪ್ರದೇಶವು ಕೈಗಾರಿಕಾ ಪ್ರದೇಶವಾಗಿದೆ. ಮಜಗಾವಿ ಭಾಗದ ಜನರಿಗೆ ಸರ್ಕಾರಿ ಆರೋಗ್ಯ ಸಂಸ್ಥೆ ಅವಶ್ಯವಿರುವುದನ್ನು ಅರಿತು ಆರೋಗ್ಯ ಕೇಂದ್ರದ ‘ನಮ್ಮ ಕ್ಲಿನಿಕ್’ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಭಯ ಪಾಟೀಲ್ ತಿಳಿಸಿದರು.ನಗರದ ಮಜಗಾವಿಯಲ್ಲಿ ಬುಧವಾರ ನಗರ ಆರೋಗ್ಯ ಕೇಂದ್ರ ನಮ್ಮ ಕ್ಲಿನಿಕ್ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದ ಕೊನೆಯ ವ್ಯಕ್ತಿಗೂ ಆರೋಗ್ಯ ಸೇವೆಯು ಉತ್ತಮ ಮಟ್ಟದಲ್ಲಿ ಸಿಗಬೇಕು ಎನ್ನುವುದು ಸರ್ಕಾರದ ಆಶಯವಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ ಅವರು ಜಿಲ್ಲೆಗೆ 21 ನಮ್ಮ ಕ್ಲಿನಿಕ್‌ಗಳನ್ನು ಮಂಜೂರು ಮಾಡಿದ್ದಾರೆ. ಅವುಗಳಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಶಾಹುನಗರ ಹಾಗೂ ದಕ್ಷಿಣ ಕ್ಷೇತ್ರದಲ್ಲಿ ಮಜಗಾಂವಿ ಮಂಜೂರಾತಿ ಪಡೆಯಲಾಗಿದೆ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ ಕೋಣಿ ಮಾತನಾಡಿ, ಸರ್ಕಾರವು 15ನೇ ಹಣಕಾಸು ಆಯೋಗದಲ್ಲಿ ಜಿಲ್ಲೆಗೆ 21 ನಮ್ಮ ಕ್ಲಿನಿಕ್ ಮಂಜೂರಾತಿ ನೀಡಿದೆ. ಇಲ್ಲಿ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರು, ಶುಶ್ರೂಷ ಅಧಿಕಾರಿಗಳು ಹಾಗೂ ಡಿ-ದರ್ಜೆಯ ಹುದ್ದೆಗಳು ಇರುತ್ತವೆ. ನುರಿತ ಸಿಬ್ಬಂದಿ ಇರುತ್ತಾರೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಾನಂದ ಮಾಸ್ತಿಹೊಳಿ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಪಾಲಿಕೆ ಸದಸ್ಯೆ ಪ್ರಿಯಾ ದೀಪಕ ಸಾತಗೌಡ, ಹಿರಿಯ ಉಪನ್ಯಾಸಕ ಡಾ. ಗಿರೀಶ ಸೋನವಾಲಕರ, ಬಿಮ್ಸ್ ನಿರ್ದೇಶಕ ಡಾ. ಅಶೋಕ ಶೆಟ್ಟಿ, ಅನಿಗೋಳ ನಗರ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ವಿ.ವೈ, ಕಡಲೋಕರ, ದೀಪಕ್ ಸಾತಗೌಡ, ಆಶಾ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಬಸವರಾಜ ಯಲಿಗಾರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net