

ಭಾಲ್ಕಿ: ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪ ಕಟ್ಟಡ ಕಾಮಗಾರಿಗೆ ಇನ್ನಷ್ಟು ಚುರುಕು ಮುಟ್ಟಿಸಿ ನಮ್ಮ ಅವಧಿಯಲ್ಲಿ ಉದ್ಘಾಟಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಪೂಜ್ಯರ ಆಶೀರ್ವಾದ ಪಡೆದು ಮಾತನಾಡಿ, 2013ರಲ್ಲಿ ಸಿಎಂ ಆಗಿದ್ದ ಸಿದ್ದರಾಮಯ್ಯ ಸರ್ಕಾರದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಹಿರಿಯ ಸಾಹಿತಿ ಗೊರುಚ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿ ವಿನ್ಯಾಸ ಸಿದ್ಧಪಡಿಸಿ ಅನುದಾನ ಕೂಡ ಘೋಷಣಣೆ ಮಾಡಿತ್ತು. ಯೋಗಾಯೋಗ ಎಂಬಂತೆ ರಾಜ್ಯದಲ್ಲಿ ಮತ್ತೆ ಐದು ವರ್ಷಗಳ ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಈಗ ಪ್ರಗತಿಯಲ್ಲಿರುವ ಅನುಭವ ಮಂಟಪ ಕಾಮಗಾರಿ ನಮ್ಮ ಕಾರ್ಯಕಾಲದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.
ರಾಜಕೀಯ ಸಮಾಜ ಸೇವೆ ಎಂದು ಅರಿತು ಈ ಕ್ಷೇತ್ರಕ್ಕೆ ಕಾಲಿಟ್ಟಿದ್ದೇನೆ. ಡಾ.ಚನ್ನಬಸವ ಪಟ್ಟದ್ದೇವರು ಆಶೀರ್ವಾದ ಮತ್ತು ತಂದೆ ಭೀಮಣ್ಣ ಖಂಡ್ರೆ ಅವರ ಮಾರ್ಗದರ್ಶದಲ್ಲಿ ನನ್ನ ರಾಜಕೀಯ ಬೆಳವಣಿಗೆ ಕಂಡಿದ್ದೇನೆ. ರಾಜ್ಯದಲ್ಲಿ ಎರಡನೇ ಬಾರಿಗೆ ಸಚಿವನಾಗುವ ಅವಕಾಶ ನನಗೆ ಸಿಕ್ಕಿದೆ. ಈ ಬಾರಿ ಅರಣ್ಯ ಮತ್ತು ಪರಿಸರ ಇಲಾಖೆ ಸಚಿವನಾಗಿದ್ದು ಜಿಲ್ಲೆ ಸಂಪೂರ್ಣ ಹಸಿರೀಕರಣ ಮಾಡುವ ಸಂಕಲ್ಪ ಹೊತ್ತಿದ್ದು ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಎಪ್ಪತ್ತರ ದಶಕದಲ್ಲಿ ಭೀಮಣ್ಣ ಖಂಡ್ರೆ ಅವರು ಶಾಸಕರಾಗಿ ಜನರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜನಪರ ಕಾರ್ಯ ಮಾಡಿದ್ದರು. ಅವರಂತೆ ಅವರ ಪುತ್ರ ಈಶ್ವರ ಖಂಡ್ರೆ ಸಹ ಜನಮನ್ನಣೆ ಗಳಿಸಿ ರಾಜಕೀಯ ಏಳಿಗೆ ಕಾಣುತ್ತಿರುವುದು ಸಂತಸ ತರಿಸಿದೆ ಎಂದರು.
ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ ಅವರಿಗೆ ಅರಣ್ಯ ಮತ್ತು ಪರಿಸರ ಇಲಾಖೆ ಜವಾಬ್ದಾರಿ ಸಿಕ್ಕಿರುವುದು ಸಂತಸ ತರಿಸಿದೆ. ಇವರ ಅವಧಿಯಲ್ಲಿ ಜಿಲ್ಲೆ, ರಾಜ್ಯದಲ್ಲಿ ಹಸಿರು, ಪರಿಸರ ಪೂರಕ ವಾತಾವರಣ ಹೆಚ್ಚಾಗಲಿದೆ ಎಂದು ಹೇಳಿದರು.
ಶ್ರೀ ಬಸವಲಿಂಗ ದೇವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ಸಾಹಿತಿ ವಿಶ್ವರಾಧ್ಯ ಸತ್ಯಂಪೇಟೆ, ಪುರಸಭೆ ಸದಸ್ಯ ಬಸವರಾಜ ವಂಕೆ, ರಾಜಕುಮಾರ ಬಿರಾದಾರ್, ಸಂಗಮೇಶ ವಾಲೆ, ರಾಜು ಜುಬರೆ, ಬಾಬು ಬೆಲ್ದಾಳ ಇದ್ದರು.