ನಮೋ ಆಡಳಿತದಲ್ಲಿ 4 ಟ್ರಿಲಿಯನ್ ಆರ್ಥಿಕತೆ

12rajesh5
Published on

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರಮೋದಿಯವರು ಆಡಳಿತಕ್ಕೆ ಬಂದ 11 ವರ್ಷದಲ್ಲಿ 2 ಟ್ರಿಲಿಯನ್‌ನಿಂದ 4 ಟ್ರಿಲಿಯನ್ ಆರ್ಥಿಕತೆಗೆ ಜಿಗಿದಿದ್ದು, ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ವಿಕಸಿತ ಭಾರತ ಅಮೃತ ಕಾಲ ಸೇವೆ, ಸುಶಾಸನ,ಬಡವರ ಕಲ್ಯಾಣದ 11 ವರ್ಷಗಳ ಸಾಧನೆಯ ಜಿಲ್ಲಾ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರಮೋದಿ ಅಧಿಕಾರಕ್ಕೆ ಬಂದ ಬಳಿಕ ಭಾರತವು ಇಂಗ್ಲೆಂಡ್‌ಅನ್ನು ಹಿಂದಿಕ್ಕಿ 5ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ದಿನಗಳಲ್ಲಿ ಅಮೇರಿಕಾ, ಚೀನಾ ನಂತರ 3ನೇ ಅತಿದೊಡ್ಡ ದೇಶವಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ಪೂರೈಸಲಿದೆ. ಆ ನಿಟ್ಟಿನಲ್ಲಿ ಅಲ್ಲಿಯ ತನಕ ವಿಕಸಿತ ಭಾರತ ನಿರ್ಮಾಣ ಮಾಡುವುದು ಮೋದಿ ಅವರ ಗುರಿಯಾಗಿದೆ. ಆ ಮೂಲಕ ಭಾರತವು ವಿಶ್ವ ಗುರುವಾಗಲು ಎಲ್ಲರ ಕಲ್ಪನೆ ಯಾಗಿದೆ ಎಂದರು.

ಪ್ರಸ್ತುತ ದೇಶದಲ್ಲಿ 5000 ಉತ್ಪನ್ನಗಳನ್ನು ’ಮೇಡ್ ಇನ್ ಇಂಡಿಯಾ’, ’ಮೇಕ್ ಇನ್ ಇಂಡಿಯಾ’ದಡಿ ಉತ್ಪಾದಿಸುತ್ತಿದ್ದೇವೆ. 25,000 ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರ ಮತ್ತಿತರ ಉತ್ಪನ್ನಗಳನ್ನು ರಫ್ತು ಮಾಡಿರುವುದು ದೇಶದಲ್ಲಿ ಇದೇ ಮೊದಲಾಗಿದೆ. 2020 ರಿಂದ 81.35 ಕೋಟಿ ಜನರಿಗೆ ಉಚಿತ ಧಾನ್ಯ ವಿತರಣೆ ಮಾಡಲಾಗುತ್ತಿದೆ. ಜನೌಷಧಿ ಕೇಂದ್ರ, ಆಯುಷ್ಮಾನ್ ಭಾರತ್ ಆರೋಗ್ಯ ಸೇವೆ, 15 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲರಿಗೂ ಕುಡಿಯುವ ನೀರು, ಸ್ವಚ್ಛ ಭಾರತ್ ಯೋಜನೆಯಡಿ ಶೌಚಾಲಯ ನಿರ್ಮಾಣ, ಪಿಎಂ ಕಿಸಾನ್ ಯೋಜನೆ, ಮುದ್ರಾ ಯೋಜನೆ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದು ದೇಶದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಿ.ಎಸ್.ನಿಜರಂಜನ್ ಕುಮಾರ್, ಮಾಜಿ ಶಾಸಕ ಎಸ್.ಬಾಲರಾಜು, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡುಪ್ರಕಾಶ್, ಮಾಜಿ ಅಧ್ಯಕ್ಷ ಆರ್.ಸುಂದರ್, ಓಬಿಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್, ಮುಖಂಡ ಅರಕಲವಾಡಿ ನಾಗೇಂದ್ರ, ಪ್ರಣಯ್ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net