ನಮಸ್ತೆ ಜಗತ್ತಾರಿಣಿ ತ್ರಾಯಿ ದುರ್ಗೇ…

Ekanatheshwari Devi
Published on

ಚಿತ್ರದುರ್ಗ: ಕೋಟೆನಗರಿ ಸೇರಿ ಜಿಲ್ಲಾದ್ಯಂತ ಒಂಬತ್ತು ರಾತ್ರಿ, ಹತ್ತು ಹಗಲು ಶಕ್ತಿದೇವತೆಗಳನ್ನು ವೈವಿಧ್ಯಮಯ ರೂಪಗಳಲ್ಲಿ ಅಲಂಕರಿಸುವ ಮೂಲಕ ಮಹಾನವಮಿ, ವಿಜಯದಶಮಿ ಹಬ್ಬವನ್ನು ಅತ್ಯಂತ ಸಡಗರಿದಿಂದ ಆಚರಿಸಲಾಯಿತು. ನಮಸ್ತೆ ಜಗತ್ತಾರಿಣಿ ತ್ರಾಯಿ ದುರ್ಗೇಯ ನಾಮಸ್ಮರಣೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಪೂಜಿಸಿ, ಆರಾಧಿಸಲಾಯಿತು…

ಶರನ್ನವರಾತ್ರಿ ಅಂಗವಾಗಿ ಪಟ್ಟಕ್ಕೆ ಕೂತಿದ್ದ ನವದುರ್ಗೆಯರು ಸೇರಿ ಅನೇಕ ಶಕ್ತಿದೇವತೆಗಳಿಗೆ ನವ ಧಾನ್ಯ, ಪುಷ್ಪ, ತರಕಾರಿ, ಹಣ್ಣು, ಆಹಾರ ಪದಾರ್ಥ, ಚಾಕೊಲೇಟ್, ಬಳೆ, ರೇಷ್ಮೆ ಸೀರೆ ಹೀಗೆ ವಿವಿಧ ಬಗೆಯ ವಸ್ತುಗಳಿಂದ ನಿತ್ಯ ನಡೆದ ವೈಭವೋಪೇತ ಅಲಂಕಾರ ಸೇವೆಗಳು ಭಕ್ತರ ಕಣ್ಮನ ಸೆಳೆದವು. ದೇಗುಲಗಳ ಹೊರಾಂಗಣ ವಿದ್ಯುತ್ ದೀಪಗಳಿಂದ ಝಗಮಗಿಸಿದವು. ಹಬ್ಬದ ಕೊನೆಯ ದಿನ ಶನಿವಾರ ಕೂಡ ವಿಶೇಷ ಪೂಜೆಗಳು ನೆರವೇರಿತು.

ಸಂಜೆ ಬನ್ನಿ ಮುಡಿಯಲು ಹೊರಟ ದೇವಿಯರ ಉತ್ಸವ ಮೂರ್ತಿಗಳ ಮುಂಭಾಗ ಡೊಳ್ಳು, ಉರುಮೆ, ತಮಟೆ ಸೇರಿ ಮಂಗಳ ವಾದ್ಯಗಳ ಸದ್ದು ಮೊಳಗಿದವು. ದೇವತೆಗಳ ಮೂರ್ತಿ ಹೊತ್ತ ಅರ್ಚಕರು, ಭಕ್ತರು ನವೋಲ್ಲಾಸ ಭರಿತರಾಗಿ ಕುಣಿಯುತ್ತ ಸಾಗಿದರು. ಬನ್ನಿ ಮುಡಿಯುವುದರೊಂದಿಗೆ ಈ ಬಾರಿಯ ಉತ್ಸವಕ್ಕೆ ತೆರೆ ಬಿದ್ದಿತು. ಮುಂಜಾನೆಯಿಂದ ರಾತ್ರಿ 10ರ ವರೆಗೂ ಹಲವಾರು ದೇಗುಲಕ್ಕೆ ಭೇಟಿ ನೀಡಿದ ಅಸಂಖ್ಯಾತ ಭಕ್ತಗಣ ಶ್ರದ್ಧಾಭಕ್ತಿಯಿಂದ ಇಷ್ಟಾರ್ಥ ಈಡೇರಿಕೆಗಾಗಿ ಪ್ರಾರ್ಥಿಸಿದರು.

ದುರ್ಗದ ಅಧಿದೇವತೆ ಏಕನಾಥೇಶ್ವರಿ, ಕಣಿವೆಮಾರಮ್ಮ, ಬರಗೇರಮ್ಮ, ಚೌಡೇಶ್ವರಿ, ಉಚ್ಚಂಗಿಯಲ್ಲಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಕಾಳಿಕಮಠೇಶ್ವರಿ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಕೆಳಗೋಟೆಯ ಅಂಬಾಭವಾನಿ, ದಾನಮ್ಮ, ಗೋಪಾಲಪುರದ ದುರ್ಗಾಪರಮೇಶ್ವರಿ, ಕರುವಿನಕಟ್ಟೆ ವೃತ್ತದ ಅಂತರಘಟ್ಟಮ್ಮ, ಕೋಟೆಯಲ್ಲಿನ ಬನಶಂಕರಮ್ಮ, ಬುರುಜನಹಟ್ಟಿಯ ಬನಶಂಕರಿ, ರೇಣುಕಾಯಲ್ಲಮ್ಮ, ಕೆಳಗೋಟೆ ಕೊಲ್ಲಾಪುರದ ಮಹಾಲಕ್ಷ್ಮೀ, ಮೆದೇಹಳ್ಳಿಯ ಕೊಲ್ಲಾಪುರದಮ್ಮ, ಲಕ್ಷ್ಮೀಸಾಗರದ ತುಳಜಾ ಭವಾನಿ ದೇಗುಲಗಳಲ್ಲಿ ದೇವಿಯ ಮೂರ್ತಿಗಳಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಮಹಾಮಂಗಳಾರತಿ ಸೇರಿ ಇತರ ಪೂಜೆಗಳು ನೆರವೇರಿದವು.

ದೇಗುಲಗಳು ಅಷ್ಟೇ ಅಲ್ಲದೆ, ಹಲವೆಡೆ ಪೆಂಡಾಲ್ ನಿರ್ಮಿಸಿ ದೇವಿಯ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಆ ಸ್ಥಳಗಳಲ್ಲೂ ಪೂಜೆ, ಅರ್ಚನೆ, ಪ್ರಾರ್ಥನೆ, ಸಹಸ್ರನಾಮ, ಮಹಾಮಂಗಳಾರತಿ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net