ನಮಸ್ಕಾರ ಕುಣಿಗಲ್​ಗೆ ಚಾಲನೆ

24_01
Published on

ಸಂತೆಪೇಟೆಯಲ್ಲಿ ಹೊಸ ಹೆಜ್ಜೆ ಇಟ್ಟ ಶಾಸಕ ಡಾ.ಎಚ್​.ಡಿ.ರಂಗನಾಥ್​

ಕುಣಿಗಲ್​: ತಾಲೂಕಿನ ಸಂತೆಪೇಟೆ ಗ್ರಾಮದ ಅರಳಿಕಟ್ಟೆ ಮೇಲೆ ಗುರುವಾರ ತಾಲೂಕು ಆಡಳಿತವನ್ನು ಕೂರಿಸಿಕೊಂಡು ನಮಸ್ಕಾರ ಕುಣಿಗಲ್​ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲೆ ಪರಿಹಾರ ಮಾಡುವ ಮೂಲಕ ಶಾಸಕ ಡಾ.ಎಚ್​.ಡಿ.ರಂಗನಾಥ್​ ಕ್ಷೇತ್ರದ ಅಭಿವೃದ್ಧಿಗೆ ಹೊಸ ಹೆಜ್ಜೆ ಇಟ್ಟಿದ್ದಾರೆ.

ವಾರದಲ್ಲಿ ಒಂದು ದಿನ ಒಂದು ಹಳ್ಳಿಯಲ್ಲಿ ಅರಳಿಕಟ್ಟೆ ಅಹವಾಲು ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ತಹಸೀಲ್ದಾರ್​, ಇಒ, ಸೇರಿ ಎಲ್ಲ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೇ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು.

ಸಮಸ್ಯೆಗಳ ಸರಮಾಲೆ :ಹಾಲವಾಗಲ ಗ್ರಾಮದ ಜಯಮ್ಮ ಚರಂಡಿ ಹಾಗೂ ಮಳೆ ನೀರು ಮನೆಗೆ ನುಗ್ಗಿ ವಾಸಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ವಾಸ ಮಾಡಲು ಸರಿಯಾದ ಮನೆಯೂ ಇಲ್ಲ. ಇದರಿಂದ ಜೀವನವೇ ಬೇಸರವಾಗಿ ನಾನು ವಿಷ ಕುಡಿಯುವ ತಿಮಾರ್ನ ಮಾಡಿದ್ದೀನಿ ಸ್ವಾಮಿ ಎಂದು ಶಾಸಕರ ಮುಂದೆ ಅಲವತ್ತುಕೊಂಡಾಗ ಡಾ.ರಂಗನಾಥ್​, ನಾನಿಲ್ಲವೇ ನಿನ್ನ ಜತೆ, ನನ್ನ ಮನೆಗೆ ಬಂದು ಇರು, ಸಾಯವ ಮಾತೆಲ್ಲಾ ಆಡಬೇಡ ಎಂದು ಸಮಾಧಾನ ಮಾಡಿದರು. ಜತೆಗೆ ಗ್ರಾಪಂ ಪಿಡಿಒಗೆ ಸೂಚಿಸಿ ಜಯಮ್ಮಗೆ ಏನು ಅನುಕೂಲ ಮಾಡಬೇಕೋ ಅದೆಲ್ಲ ಮಾಡುವಂತೆ ಸೂಚಿಸಿದರು.

ಈ ಭಾಗದ ವಿಎ ಕುಮಾರ್​ ಆರ್​ಐ ಆಗಿ ಕೆಲಸ ಮಾಡುತ್ತಿದ್ದ್ದಾರೆ. ರೈತರ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತಿಲ್ಲ. ಬೆಂಗಳೂರು ಕಡೆಯಿಂದ ಬರುವ ಜನರ ಕೆಲಸ ಮಾಡುಕೊಡುತ್ತಿದ್ದಾರೆ. ಇವರ ಬಳಿ ದಲ್ಲಾಳಿಗೆ ಪ್ರಾಮುಖ್ಯತೆ ಎಂದು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಐ.ಎ.ವಿಶ್ವನಾಥ್​ ದೂರಿದರು. ಶಾಸಕ ಡಾ.ರಂಗನಾಥ್​ ವಿಎ ಕುಮಾರ್​ ಅವರನ್ನು ತರಾಟೆ ತೆಗೆದುಕೊಂಡು ಜನರ ಕೆಲಸ ಮಾಡದಿದ್ದರೆ ತಾವು ಇಲ್ಲಿಂದ ಜಾಗ ಖಾಲಿ ಮಾಡಬಹುದು, ಕೆಲಸ ಮಾಡುವವರಿಗೆ ಮಾತ್ರ ಜಾಗ ಎಂದು ವಾರ್ನಿಂಗ್​ ಮಾಡಿದರು.

ಅಕ್ಕಪಕ್ಕದ ಮನೆ, ಜಮೀನು ವ್ಯಾಜ್ಯಗಳು ಹೆಚ್ಚಾಗುತ್ತಿವೆ. ಖಾತೆ ಪಹಣಿ, ವೃದ್ಧಾಪ್ಯ ವೇತನ, ರಸ್ತೆ ಚರಂಡಿ, ಟಿಸಿ ಬೇಡಿಕೆಯಂತಹ ಸಮಸ್ಯೆಗಳನ್ನು ಜನ ಹೇಳಿಕೊಂಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಎಲ್ಲ ಸಮಸ್ಯೆಗಳನ್ನು ಪರಿಹಾರ ಮಾಡಬೇಕು ಎಂದು ತಿಳಿಸಿದರು.

ನಮ್ಮ ತಾಲೂಕಿನ ರೈತರ ಮೇಲೆ ಕಾಳಜಿ ಇಲ್ಲದ ಜೆಡಿಎಸ್​ ಹಾಗೂ ಬಿಜೆಪಿಯವರೂ ಲಿಂಕ್​ ಕೆನಾಲ್​ ಯೋಜನೆಗೆ ವಿರೋಧ ವ್ಯಕ್ತಡಿಸುತ್ತಿದ್ದಾರೆ. ಈ ಯೋಜನೆಯಾದರೆ ಕೇವಲ ಕಾಂಗ್ರೆಸ್​ಗೆ ಮಾತ್ರ ಪ್ರಯೋಜನವಾಗುವುದಿಲ್ಲ. ಎಲ್ಲ ಪಕ್ಷವರಿಗೆ ನೀರು ಸಿಗಲಿದೆ. ಯಾರೇ ವಿರೋಧ ಮಾಡಿದರೂ ಲಿಂಕ್​ ಕೆನಾಲ್​ ಯೋಜನೆ ಜಾರಿ ಮಾಡದೇ ಬಿಡುವ ಪ್ರಶ್ನೆಯೇ ಇಲ್ಲ. ಇದಕ್ಕೆ ತಾಲೂಕಿನ ರೈತರು ಕೈ ಜೋಡಿಸಿ ಹೋರಾಟಕ್ಕೂ ಇಳಿಬೇಕಾಗುತ್ತದೆ ಎಂದು ತಿಳಿಸಿದರು. ಗ್ಯಾರಂಟಿ ಸಮಿತಿ ಅಧ್ಯಕ್ಷ ಐ.ಎ.ವಿಶ್ವನಾಥ್​, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮು, ವಿಎಸ್​ಎಸ್​ಎನ್​ ಅಧ್ಯಕ್ಷ ಬೋರೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಹಾಲವಾಗಲ

ಸ್ವಾಮಿ, ಮುಖಂಡರಾದ ರಾಮಿ ಇದ್ದರು.

ಲಿಂಕ್​ ಕೆನಾಲ್​ ಯೋಜನೆ ಜಾರಿ: ಹುತ್ರಿದುರ್ಗ ಹೋಬಳಿ ಜನ ನೀರು ಇಲ್ಲದೆ ಬರಗಾಲದಿಂದ ಬೆಂದು ಹೋಗಿದ್ದಾರೆ. ಒಂದು ಸಾವಿರ ಅಡಿ ಬೋರ್​ವೆಲ್​ ಕೊರೆದರೂ ನೀರು ಸಿಗುತ್ತಿಲ್ಲ. ಹೋಬಳಿ ಜನರ ಕಷ್ಟ ನಿವಾರಣೆ ಮಾಡುವ ಉದ್ದೇಶದಿಂದ ಶ್ರೀರಂಗ ಏತ ನೀರಾವರಿ ಯೋಜನೆ ಜಾರಿ ಮಾಡಲಾಗುತ್ತಿದೆ. ಈ ಯೋಜನೆ ಜಾರಿಯಾಗದರೆ ಹಾಗೂ ಲಿಂಕ್​ ಕೆನಾಲ್​ ಯೋಜನೆ ಜಾರಿ ಮಾಡಿದರೆ ಹುತ್ರಿದುರ್ಗ ಹೋಬಳಿಯ ಜತೆಗೆ ತಾಲೂಕು ನೀರಾವರಿಯಿಂದ ಕಂಗೊಳಿಸಲಿದೆ. ರೈತರ ಬದುಕು ಹಸನಾಗಲಿದೆ ಎಂದ ಶಾಸಕರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net