

ತಿಪಟೂರು:ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗಾಗಿ ಭೂಮಿ ಗುರುತಿಸಿದ್ದ ಹೆದ್ದಾರಿ ಪ್ರಾಧಿಕಾರ 7 ವರ್ಷಗಳ ನಂತರ ನಮಗೆ ಭೂಮಿ ಬೇಡ ಎನ್ನುತ್ತಿರುವುದು ಸ್ಥಳಿಯ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ನಿಶ್ಚಿತಾರ್ಥದ ನಂತರ ವರ ಮದುವೆ ಬೇಡ ಎಂದರೆ ಹೇಗೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ತುಮಕೂರು&ಶಿವಮೊಗ್ಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಸಂಬಂಧ ತಾಲೂಕಿನ ಕೆ.ಬಿ. ಕ್ರಾಸ್ನಿಂದ ಬಿಳಿಗೆರೆವರೆಗೂ 2.2 ಕಿ.ಮೀ ರಸ್ತೆ ಪಕ್ಕದ ಭೂಮಿಯನ್ನು ಹೆದ್ದಾರಿಗೆ ಬಳಸಿಕೊಳ್ಳಲು ಪ್ರಾಧಿಕಾರ 2016ರಲ್ಲಿ 4/1 ಪ್ರಕಾರ ನೋಟಿಸ್ ಜಾರಿ ಮಾಡಿ. ಯೋಜನೆಗೆ ಅಗತ್ಯವಿದ್ದ ಭೂಮಿ ಅಳತೆ ಮಾಡಿ ಮಾರ್ಕ್ ಮಾಡಿತ್ತು. ರಸ್ತೆ ಬದಿ ಬೆಳೆದು ನಿಂತಿದ್ದ ಮರಗಳನ್ನು ತೆರವುಗೊಳಿಸಲಾಗಿತ್ತು. ಇದರ ನಡುವೆ, ನೋಟಿಸ್ ಜಾರಿ ನಂತರ ಸ್ಥಳಿಯ ಗ್ರಾಪಂ 2.2 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿ ನಿಲ್ಲಿಸಿತ್ತು. ಈ ಪ್ರದೇಶದಲ್ಲಿ ಜರುಗುವ ದೇವರ ಉತ್ಸವ, ಇತ್ಯಾದಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಜನರಿಗೆ ನೀಡಲಾಗಿತ್ತು.
ಈ ಸಂದರ್ಭ ಮಾತನಾಡಿದ ಬಿಳಿಗೆರೆ ಪಾಳ್ಯದ ಶಿವಮೂರ್ತಿ, ಕಡತಗಳನ್ನು ತನ್ನಿ ಎಂದು ಹತ್ತಾರು ಬಾರಿ ಕಚೇರಿಗೆ ಕರೆಸಿಕೊಂಡಿರಿ, ಈಗ ಜಮೀನಿನ ಅವಶ್ಯಕತೆ ಇಲ್ಲ ಎನ್ನುತ್ತಿದ್ದೀರಿ. ಯೋಜನೆಗೆ ಅಗತ್ಯವಿದ್ದ ಐ ತೀರ್ಪು ರಚನೆ ಮತ್ತು ಅನುಮತಿ ಸಿಗದೆ ಇದ್ದಾಗ ಜಮೀನಿಗೆ ಅತಿಕ್ರಮಣ ಮಾಡಿದ್ದೀರಿ ಮತ್ತು ಮರಗಳನ್ನು ಕಡಿಸಿದ್ದೀರಿ. 7 ವರ್ಷಗಳಿಂದ ನಮಗಾಗಿರುವ ನಷ್ಟ ಪರಿಹಾರ ಕೊಡುವವರೆಗೂ ಒಂದಿಂಚೂ ರಸ್ತೆ ನಿರ್ಮಿಸಲು
ಬಿಡಲ್ಲ ಎಂದು ಪಟ್ಟು ಹಿಡಿದರು. ಉದ್ದೇಶಿತ ಯೋಜನೆಗೆ ಈ ಭಾಗದ ಸರ್ವೇ ನಂ. 125ರ ಪೈಕಿ 60&70 ವಾಸದ ಮನೆಗಳೂ ಇವೆ. ಯೋಜನೆಗೆ ಭೂಮಿ ಗುರುತಿಸಿದ ನಂತರ ಈ ಭಾಗದ ಗ್ರಾಮಸ್ಥರಿಗೆ ಮದುವೆ, ಶುಭಕಾರ್ಯ, ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಇತರ ಉದ್ದೇಶಗಳಿಗೆ ಬ್ಯಾಂಕ್ ಸಾಲ ಸೌಲಭ್ಯವೂ ನಿಂತು ಹೋಗಿದೆ. ಸಾಲ ಕೇಳಿದರೆ ರಸ್ತೆಗೆ ಗುರುತಿಸಿರುವ ಜಮೀನು ತೋರಿಸಿ, ನಮಗೆ ಮೋಸ ಮಾಡಿ ಸಾಲ ಪಡೆಯಲು ಯತ್ನಿಸುತ್ತಿದ್ದೀರಿ ಎಂದು ಬ್ಯಾಂಕಿನವರು ನಿಂದಿಸುತ್ತಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಭೂಮಿ ಮಾರಾಟ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳ್ಕಕೆ ಅಧಿಕಾರಿಗಳು: ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅನೂಪ್ ಶರ್ಮ ಮತ್ತು ವಿಶೇಷ ಭೂಸ್ವಾಧಿನಾಧಿಕಾರಿ ಧರ್ಮಪಾಲ್, ಅಧಿಸೂಚನೆ ಸಂಬಂಧ ಭೂ ಪರಿವರ್ತನೆಯ ಕಡತಗಳು ಇಲ್ಲದ ಕಾರಣ 2019ರಲ್ಲಿ ಅವಾರ್ಡ್ ಆಗಿಲ್ಲ. ಐ ತೀರ್ಪು ರಚನೆ ಮತ್ತು ಮಂಡನೆ ಆಗದ ಕಾರಣ ಪ್ಯಾಕೇಜ್ ಒಂದರ ರಾಷ್ಟ್ರೀಯ ಹೆದ್ದಾರಿ 206ರ ಈ ಭಾಗದಲ್ಲಿ 108 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ ಪ್ರಸ್ತಾವವನ್ನು ಕೇಂದ್ರ ಒಪ್ಪಿಲ್ಲ. ಹಾಗಾಗಿ ಉದ್ದೇಶಿತ ಯೋಜನೆಯನ್ನು ಕೈಬಿಟ್ಟು, ಹಾಲಿ ಇರುವ ಹೆದ್ದಾರಿಯಲ್ಲಿ ನಿಯಮಾನುಸಾರ ಲಭ್ಯವಿರುವ ಜಾಗದಲ್ಲೇ ರಸ್ತೆ ಅಭಿವೃದ್ಧಿ ಪಡಿಸಲಾಗುವುದು. ರಸ್ತೆ ವಿಸ್ತರಣೆಗೆಂದು ಗುರುತಿಸಿದ ಭೂಮಿ ನಮಗೆ ಅವಶ್ಯವಿಲ್ಲ. ಈಗ ಈ ಭೂಮಿ ನಿಮ್ಮದು ಎಂದು ತಿಳಿಸಿದರು.
ಜಾಗ ಕಾಲಿ ಮಾಡಿದ ಜನರು: ಹೆದ್ದಾರಿ ಪ್ರಾಧಿಕಾರದವರು ನೋಟಿಸ್ ಜಾರಿ ಬೆನ್ನಲ್ಲೇ ಭೂಮಿ, ಮನೆ ಬಿಟ್ಟುಕೊಡಲು ಸಿದ್ಧವಿದ್ದ ಗ್ರಾಮಸ್ಥರು ಬೇರೆ ಸ್ಥಳಕ್ಕೆ ಸ್ಥಳಾಂತರಗೊಂಡಿದ್ದಾರೆ. ಆದರೆ ಈಗ 7 ವರ್ಷಗಳ ನಂತರ ಪ್ರಾಧಿಕಾರದವರು ಭೂಮಿ ಬೇಡ ಎನ್ನುತ್ತಿರುವುದರಿಂದ ಬೇರೆ ಪ್ರದೇಶಕ್ಕೆ ಸ್ಥಳಾಂತರವಾಗಿರುವವರಿಗೆ ಸಮಸ್ಯೆಯಾಗಿದ್ದು, ಇತ್ತ ಮನೆಯೂ ಪಾಳು ಬಿದ್ದಿದೆ. ಭೂಮಿಯಲ್ಲಿ ಬೆಳೆ ಬೆಳೆಯದಂತಾಗಿದೆ. ಇನ್ನೊಂದೆಡೆ ಭೂಮಿ ಮಾರಾಟ ಮಾಡಲೂ ಸಾಧ್ಯವಿಲ್ಲದಂತಾಗಿದೆ. ಹಾಗಾಗಿ ನಮಗೆ ನಿಗದಿತ ಪರಿಹಾರ ಕೊಟ್ಟು ನಮ್ಮ ಭೂಮಿ ವಶಕ್ಕೆ ಪಡೆಯಿರಿ ಎಂದು ಪ್ರಾಧಿಕಾರದ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ. ಈ ಸಂಬಂಧ ಗ್ರಾಮಸ್ಥರು ಸೋಮವಾರ ಕೆ.ಬಿ. ಕ್ರಾಸ್ ಬಳಿ ಟೆಂಟ್ ಹಾಕಿ ಪ್ರತಿಭಟನೆ ನಡೆಸಿದರು.
ನಿಮ್ಮ ಮಾತು ನಂಬಿ 7 ವರ್ಷಗಳಿಂದ ಜಮೀನಿನಲ್ಲಿ ಬೆಳೆ ಬೆಳೆಯುತ್ತಿಲ್ಲ. ಈಗ ನಿಮ್ಮ ಜಮೀನು ನಮಗೆ ಬೇಕಿಲ್ಲ ಎನ್ನುತ್ತಿದ್ದೀರಿ. ಇಲ್ಲಿವರೆಗೂ ಆಗಿರುವ ನಷ್ಟ ಪರಿಹಾರ ಕೊಟ್ಟು ಮುಂದಿನ ಕಾಮಗಾರಿ ನಡೆಸಿ. ಯೋಜನೆಗೆ ಐ ತೀರ್ಪು ಆಗಿಲ್ಲದಿದ್ದರೂ ನಮ್ಮ ಸ್ವತ್ತುಗಳನ್ನು ಗುರುತಿಸಿದ್ದಾದರೂ ಏಕೆ?. ನೆಟ್ಟಿರುವ ಕಂಬ ತೆರವುಗೊಳಿಸುತ್ತೇವೆ ಎನ್ನುತ್ತೀರಿ, ಕಡಿದಿರುವ ಮರಗಳನ್ನು ಮತ್ತೆ ನೆಡಲು ಸಾಧ್ಯವೇ. | ಸೀಗೇಪಾಳ್ಯ ಸ್ವಾಮಿ ಸ್ಥಳಿಯ2.2 ಕಿ.ಮೀ ಉದ್ದರ ರಸ್ತೆ ವಿಸ್ತರಣೆಗೆ ಅಗತ್ಯವಿರುವ 108 ಕೋಟಿ ರೂ. ಹೊರೆ ತಗ್ಗಿಸಿ, ಹಾಲಿ ಹೆದ್ದಾರಿ ರಸ್ತೆಯನ್ನೇ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಹಾಗಾಗಿ ಈ ಭೂಮಿಯನ್ನು ಪ್ರಾಧಿಕಾರ ಬಳಿಸಿಕೊಳ್ಳುತ್ತಿಲ್ಲ.| ಧರ್ಮಪಾಲ್ ವಿಶೇಷ ಭೂ ಸ್ವಾಧಿನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತುಮಕೂರು ವಲಯ