ನಭದಲ್ಲಿ ಸಾರಂಗ್ ಹೆಲಿಕಾಪ್ಟರ್‌ಗಳ ಚಿನ್ನಾಟ..!

air show (2)
Published on

ಮಂಜುನಾಥ ತಿಮ್ಮಯ್ಯ ಮೈಸೂರು

ಸೂರ್ಯಾಸ್ತ ಮುನ್ನ ನೀಲಿ ಅಂಬರದಲ್ಲಿ ಕಡುಗೆಂಪಿನ ಚೆಲುವ ‘ಸಾರಂಗ್’ ಹೆಲಿಕಾಪ್ಟರ್ ಕರಾಮತ್ತಿನ ಚಿನ್ನಾಟ ಜನಸಮೂಹವನ್ನು ಆಶ್ಚರ್ಯಚಕಿತಗೊಳಿಸಿತು...!

ಭಾರತೀಯ ವಾಯುಪಡೆಯ ಸಾರಂಗ ಪ್ರದರ್ಶನ ತಂಡದಿಂದ ಐದು ಹೆಲಿಕಾಪ್ಟರ್‌ಗಳ ಚತುರತೆಗೆ ಪ್ರೇಕ್ಷಕರಿಂದ ‘ವಾಹ್’ ಎಂಬ ಮೆಚ್ಚುಗೆ ದೊರೆಯಿತು. ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಶನಿವಾರ ಸಂಜೆ ನಡೆದ ಐದು ಕಾಪ್ಟರ್‌ಗಳ ಮೈನವಿರೇಳಿಸುವ ಪ್ರದರ್ಶನ ಬೆರಗುಗೊಳಿಸಿತು.

ಹಾಲ್ನೊರೆಯುಂತಿದ್ದ ಮೋಡವನ್ನು ಸೀಳಿಕೊಂಡು ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಬಂದ ಕೆಂಪು ಬಣ್ಣದ ಸಾರಂಗ ಚಿಟ್ಟೆಗಳು ವಿವಿಧ ಚಮತ್ಕಾರಗಳನ್ನು ಪ್ರದರ್ಶಿಸಿ ನಿಬ್ಬೆರಗೊಳಿಸಿದವು. ಪೈಲಟ್‌ಗಳು ವಿವಿಧ ಕಠಿಣ ಕಸರತ್ತಿಗೆ ಬೇಷ್ ಎಂದರು ಇಡೀ ಜನಸಮೂಹ..!

ತಮಿಳುನಾಡಿನಲ್ಲಿರುವ ಕೊಯುಮತ್ತೂರಿನ ಭಾರತೀಯ ವಾಯುಪಡೆಯ ಕ್ಯಾಂಪ್‌ನಿಂದ ಬಂದಿದ್ದ ಈ ತಂಡದ 70 ಸಿಬ್ಬಂದಿ ಈ ಪ್ರದರ್ಶನಕ್ಕಾಗಿ ಶ್ರಮಿಸಿದರು. 5 ಕಾಪ್ಟರ್‌ಗಳು 25 ನಿಮಿಷದಲ್ಲಿ 16 ವಿಶಿಷ್ಟ, ಕಠಿಣ ಮತ್ತು ಸವಾಲಿನ ಕೌಶಲವನ್ನು ಪ್ರದರ್ಶಿಸಿ ಮನಸೂರೆಗೊಳಿಸಿದವು.

ಆರಂಭದಲ್ಲಿ ಪೊಲೀಸ್ ಸಿಬ್ಬಂದಿ ಮೈದಾನದ ಸುತ್ತ ಪಟಾಕಿ ಸಿಡಿಸಿ ಹಕ್ಕಿಗಳನ್ನು ಚದುರಿಸಿದರು. ಸಂಜೆ 4ರ ಸುಮಾರಿಗೆ ವೇಗವಾಗಿ ಮೈದಾನದತ್ತ ನುಗ್ಗಿದ ಹೆಲಿಕಾಪ್ಟರ್‌ಗಳು ಹರ್ಷೋಲ್ಲಾಸ ಉಂಟು ಮಾಡಿದವು. ನಭದಲ್ಲಿ ಲೋಹದ ಹಕ್ಕಿಗಳ ತುಂಟಾಟಕ್ಕೆ ಪ್ರೇಕ್ಷಕರು ಚಕಿತಗೊಂಡರು.

ಗ್ರೂಪ್ ಕ್ಯಾಪ್ಟನ್ ಸಂತೋಷ್ ಕುಮಾರ್ ಮಿಶ್ರ ನೇತೃತ್ವದ ಪೈಲಟ್‌ಗಳ ಸೃಜನಾತ್ಮಕ ಹೆಲಿಕಾಪ್ಟರ್ ಆಕಾಶ ನಡಿಗೆಗೆ ಜನರು ಕರತಾಡದ ಮೂಲಕ ಸಂತಸ ವ್ಯಕ್ತಪಡಿಸಿದರು. ವೇಗವಾಗಿ ತೆರಳಿ ಮೈದಾನದ ಮಧ್ಯದಲ್ಲಿ ಹೆಲಿಕಾಪ್ಟರ್ ಉಗುಳುವ ಹೊಗೆಯಿಂದ ವಿವಿಧ ಆಕೃತಿವನ್ನು ನಭೆದಲ್ಲೇ ರಚಿಸಿದವು. ಹೃದಯಾಕಾರದ ಆಕೃತಿ ಕಣ್ಮನ ಸೆಳೆಯಿತು. ಡಾಲ್ಫಿನ್ ಲೀಪ್, ಡೈಮಂಡ್, ವೈನ್ ಗ್ಲಾಸ್, ಡೈಮಂಡ್ ಆಕೃತಿಗಳನ್ನು ಸೃಷ್ಟಿಸಿ ಕುತೂಹಲ ಮೂಡಿಸಿದವು. ಐದು ಕಾಪ್ಟರ್‌ಗಳ ಪರಸ್ಪರ ಅಡ್ಡಾದಿಡ್ಡಿ ಚಲನೆ ಫೈಲಟ್‌ಗಳ ಕೈಚಳಕಕ್ಕೆ ಸಾಕ್ಷಿಯಾಯಿತು.

ನಾಲ್ಕು ದಿಕ್ಕುಗಳಲ್ಲಿ ಹಾರಾಟ ನಡೆಸಿ ಚಂಗನೆ ನುಗ್ಗುತ್ತಿದ್ದ ಕಾಪ್ಟರ್‌ಗಳ ಸಾಹಸ ಕಣ್ಣಿಗೆ ಆನಂದ ಉಂಟು ಮಾಡಿತು. ಅವುಗಳು ನಡೆಸಿದ ಲೆವೆಲ್ ಕ್ರಾಸಿಂಗ್, ಏರೊ ಹೆಡ್, ಕ್ರಾಸ್ ಓವರ್ ಬ್ರೇಕ್ ಸಾಹಸಗಳು ರೋಚಕತೆಯ ಭಾವ ಮೂಡಿಸಿದವು.

ಅಕ್ಕಪಕ್ಕದಲ್ಲಿ ತೆರಳುತ್ತಿದ್ದ ಕಾಪ್ಟರ್ ನಡುವೆ ಮತ್ತೊಂದು ಕಾಪ್ಟರ್ ಸಮಾಂತರ ನಲಿದಾಟದ ಚಲನೆ, ಚುರುಕಾದ ಸುಳಿದಾಟ, ಪರಸ್ಪರ ನಡುವೆ ನುಗ್ಗುವಿಕೆಯ ಓಡಾಟ ಸಭಿಕರನ್ನು ಬೆರುಗುಗೊಳಿಸಿತು. ಒಮ್ಮೆ ಆಕಾಶಕ್ಕೆ ಮುತ್ತಿಕ್ಕುವಂತೆ ಮೇಲ್ಮುಖ ಚಲನೆ, ಭೂಮಿಗೆ ಅಪ್ಪಳಿಸುವಂತಹ ಇಳಿಮುಖ ಚಲನೆ ಅವಾಕ್ಕಾಗುವಂತೆ ಮಾಡಿತು.

ತಂಡದ ಸದಸ್ಯೆ ಪಲ್ಲವಿ ಸಾಂಗವನ್ ನಿರೂಪಣೆ ಜನರಿಗೆ ಪ್ರೇಕ್ಷಕರಿಗೆ ಇಷ್ಟವಾಯಿತು. ಕಾರ್ಯಕ್ರಮ ಮುಗಿದ ಬಳಿಕ ತಂಡದ ಸಹ ಸದಸ್ಯರೊಂದಿಗೆ ಜನರು, ಗಣ್ಯರು ಸೆಲ್ಪಿ ತೆಗೆಸಿಕೊಳ್ಳಲು ಹಾತೊರೆದರು.

ಸಮಾಜ ಕಲ್ಯಾಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ವಿಧಾನಪರಿಷತ್ ಸದಸ್ಯರಾದ ವಿವೇಕಾನಂದ, ಕೆ. ಶಿವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸೇರಿದಂತೆ ಸಹಸ್ರಾರು ಜನರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಮೈದಾನ ಭಾಗಶಃ ಭರ್ತಿ

ಕವಾಯತು ಮೈದಾನದ ಭಾಗಶಃ ಪ್ರೇಕ್ಷಕರಿಂದ ಭರ್ತಿಯಾಗಿತ್ತು. ಪಾಸ್, ಟಿಕೆಟ್ ಪಡೆದವರಿಗೆ ಮಾತ್ರ ಒಳಗೆ ತೆರಳು ಅವಕಾಶ ಕಲ್ಪಿಸಿಕೊಡಲಾಗಿತ್ತು. ಇಷ್ಟ ಪ್ರಮಾಣದ ಜನರು ಮೈದಾನದ ಹೊರಗೆ ನಿಂತುಕೊಂಡು ಆಕಾಶದಲ್ಲಿ ನಡೆದ ಕರಸತ್ತು ವೀಕ್ಷಿಸಿದರು. ಕೆಲವರು ಕಟ್ಟಡ, ರಸ್ತೆ ಬದಿನಲ್ಲೇ ನಿಂತುಕೊಂಡೇ ಕಣ್ತುಂಬಿಕೊಂಡರು. ತಪ್ಪು ಮಾಹಿತಿಗೆ ಜನರ ಕಿಡಿ

ತಪ್ಪು ಮಾಹಿತಿಗೆ ಕೆಂಡವಾದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದು ಸಂಜೆ 4 ಗಂಟೆ ಆರಂಭಗೊಂಡಿತು. ಆದರೆ, ದಸರಾ ಮುಖ್ಯ ಆಮಂತ್ರಣ ಪತ್ರದಲ್ಲಿ ಸೆ.27ರಂದು ಸಂಜೆ 5ಕ್ಕೆ ಏರ್ ಶೋ ಕಾರ್ಯಕ್ರಮ ಎಂಬ ತಪ್ಪು ಮಾಹಿತಿ ನೀಡಲಾಗಿತ್ತು. ಇದನ್ನು ನಂಬಿಕೊಂಡು ಬಂದ ಬಹಳಷ್ಟು ಜನರಿಗೆ, ಮಾಧ್ಯಮದವರಿಗೆ ನಿರಾಶೆ ಕಾಯ್ದಿತ್ತು. ಇವರು ಬರುವ ಹೊತ್ತಿಗೆ ಪ್ರದರ್ಶನ ಮುಕ್ತಾಯಗೊಂಡಿತ್ತು. 30ಕ್ಕೆ ಮತ್ತೊಂದು ಏರ್ ಶೋ

ಅಂತಿಮ ವೈಮಾನಿಕ ಪ್ರದರ್ಶನ ಸೆ.30ರಂದು ಸಂಜೆ 4ಕ್ಕೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ನಡೆಯಲಿದೆ. ಪ್ರಸಿದ್ಧ ಸೂರ್ಯಕಿರಣ ಏರೋಬ್ಯಾಟಿಕ್ ತಂಡದ ಅಸಾಧಾರಣ ವೈಮಾನಿಕ ಪ್ರದರ್ಶನ ಇದಾಗಿದೆ.

ಭಾರತೀಯ ವಾಯುಪಡೆಯ ರಾಯಭಾರಿಗಳು ಎಂದು ಪ್ರಸಿದ್ಧವಾಗಿರುವ ಈ ತಂಡವು ತನ್ನ ನಿಖರತೆ, ಕೌಶಲತೆಗೆ ಖ್ಯಾತಿ ಗಳಿಸಿದೆ. ಆಕರ್ಷಕವಾದ ಕೆಂಪು-ಬಿಳಿ ಹಾಕ್ ಎಂಕೆ-132 ಜೆಟ್‌ಗಳನ್ನು ಹಾರಿಸುವ ಈ ಶ್ರೇಷ್ಠ ತಂಡವು ಬೆರಗುಗೊಳಿಸುವ ಹಾರಾಟದ ಸರಣಿಯನ್ನು ಪ್ರದರ್ಶಿಸಲಿದೆ.

ಮನೋಹರವಾದ ಲೂಪ್, ರೋಮಾಂಚಕಾರಿ ಬ್ಯಾರೆಲ್ ರೋಲ್‌ನಿಂದ ಹಿಡಿದು ಗುರುತ್ವಾಕರ್ಷಣೆಗೆ ಸವಾಲೆಸೆಯುವ ತಲೆಕೆಳಗಾದ ಹಾರಾಡಲಿವೆ. ಇದರ ಪ್ರದರ್ಶನವೂ ಪೈಲಟ್‌ಗಳ ಅಪ್ರತಿಮ ಪರಿಣತಿ, ಸಮನ್ವಯತೆಯ ಸಾಕ್ಷಿಯಾಗಲಿದೆ. ಇದನ್ನು ನೋಡಲು ಮೈಸೂರಿಗರು ಕಾತುರರಾಗಿದ್ದಾರೆ.

ಈ ಪ್ರದರ್ಶನ ವೀಕ್ಷಣೆಗೆ ದೊಡ್ಡ ಮಟ್ಟ ಜನಸಮೂಹ ಬಂದಿದ್ದು ನಮ್ಮೆಲ್ಲರಿಗೂ ಆನಂದ ಉಂಟು ಮಾಡಿದೆ. ಮೈಸೂರಿನ ಪ್ರೇಕ್ಷಕರ ಪ್ರೋತ್ಸಾಹ ಶಕ್ತಿ ಅದ್ಭುತವಾಗಿತ್ತು. ಇಷ್ಟೊಂದು ದೊಡ್ಡ ಪ್ರೇಕ್ಷಕರನ್ನು ನೋಡಿ ನಾನು ನಿಜವಾಗಿಯೂ ಆಶ್ಚರ್ಯಚಕಿತನಾದೆ. ಮೈಸೂರಿನ ಜನರ ಉತ್ತಮ ಪ್ರತಿಕ್ರಿಯೆಗಾಗಿ ನಾವುಗಳು ತುಂಬಾ ಅಭಾರಿಯಾಗಿದ್ದೇವೆ.ಪಲ್ಲವಿಸಾರಂಗ್ ತಂಡದ ಸದಸ್ಯೆ, ನಿರೂಪಕಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net