

ಕೋಲಾರ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ನಬಾರ್ಡ್ ನೀಡಿದ್ದ ಗುರಿ ಸಾಧಿಸಲಾಗಿದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶನಿವಾರ ಕೋಲಾರ ತಾಲೂಕಿನ 127 ರೈತರಿಗೆ ಬೆಳೆ ಸಾಲ ವಿತರಿಸಿ ಮಾತನಾಡಿ, 900 ಮಂದಿಗೆ ಬೆಳೆ ಸಾಲ ವಿತರಿಸಲು ನಬಾರ್ಡ್ ಗುರಿ ನೀಡಿತ್ತು. ಈಗಾಗಲೇ ಸಾಲಕ್ಕಾಗಿ ದಾಖಲೆ ಸಲ್ಲಿಸಿದ 892 ಮಂದಿಗೆ 8.92 ಕೋಟಿ ರೂ. ಬೆಳೆ ಸಾಲ ನೀಡಲಾಗಿದೆ ಎಂದು ತಿಳಿಸಿದರು.
ಯೋಜನೆಯಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಜಮಾ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ರೈತರಿಗೆ ಕಡ್ಡಾಯವಾಗಿ ಬೆಳೆ ಸಾಲ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿರುವುದರಿಂದ ನಮ್ಮ ಬ್ಯಾಂಕ್ ರೈತರಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಮಾದರಿಯಾಗಿದೆ. ರೈತರು ಬ್ಯಾಂಕಿನಲ್ಲಿ ಉಳಿತಾಯ ಖಾತೆ ತೆರೆದಲ್ಲಿ ಅಂತಹವರಿಗೆ ಈ ಯೋಜನೆಯಡಿ ಸಾಲ ಸೌಲಭ್ಯ ಸುಲಭವಾಗಿ ಸಿಗುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಮಾತನಾಡಿ, ಈಗ ಡಿಸಿಸಿ ಬ್ಯಾಂಕ್ ಸದೃಢವಾಗಿದೆ. ಮಹಿಳೆಯರಿಗೆ ರಾಜ್ಯದಲ್ಲೇ ಅತಿ ಹೆಚ್ಚು ಸಾಲ ನೀಡಿರುವ ಬ್ಯಾಂಕಾಗಿ ಗೌರವಕ್ಕೂ ಪಾತ್ರವಾಗಿದ್ದು, ಭದ್ರತೆ ಇಲ್ಲದೆ ಸಾಲ ನೀಡಿದ್ದಲ್ಲದೆ ವಸೂಲಾತಿಯಲ್ಲೂ ಮುಂಚೂಣಿಯಲ್ಲಿದ್ದೇವೆ. ಬ್ಯಾಂಕ್ ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ನೀವು ಸಹಕಾರಿ ಸಂಸ್ಥೆಗಳ ಮೇಲೆ ಇಟ್ಟು ನಿಮ್ಮ ಉಳಿತಾಯವನ್ನು ಇಲ್ಲೇ ಮಾಡಿ ಎಂದು ಮನವಿ ಮಾಡಿದರು.
ಕೋಲಾರ ಜಿಲ್ಲೆಯ ರೈತರ ನೆಮ್ಮದಿಯ ಬದುಕಿಗೆ ಡಿಸಿಸಿ ಬ್ಯಾಂಕ್, ಕೋಚಿಮುಲ್‌ನಂತಹ ಸಹಕಾರಿ ಸಂಸ್ಥೆಗಳೇ ಕಾರಣ. ಇದನ್ನು ಅರಿತುಕೊಂಡು ಈ ಸಂಸ್ಥೆಗಳಲ್ಲೇ ನಿಮ್ಮ ಉಳಿತಾಯ ಖಾತೆ ತೆರೆದು ವಹಿವಾಟು ನಡೆಸಿ ನಿಮ್ಮ ಆತ್ಮಗೌರವಕ್ಕೆ ಕುತ್ತು ತರುವ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಠೇವಣಿ ಇಡದಿರಿ ಎಂದು ಕೋಚಿಮುಲ್ ನಿರ್ದೇಶಕ ಡಿ.ವಿ.ಹರೀಶ್ ಸಲಹೆ ನೀಡಿದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಶಶಿಧರ್, ತಾಪಂ ಮಾಜಿ ಸದಸ್ಯ ವಲ್ಲಂಬಳ್ಳಿ ಚಂದ್ರಶೇಖರ್, ಅಣ್ಣಿಹಳ್ಳಿ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗರಾಜ್, ಸಿಇಒ ಶ್ರೀನಿವಾಸ್, ವ್ಯವಸ್ಥಾಪಕ ಅಂಬರೀಷ್, ಮುಖಂಡ ಕೆಂಬೋಡಿ ನಾರಾಯಣಗೌಡ ಇದ್ದರು.
ರೈತರು ಸಾಲಕ್ಕಾಗಿ ಸಹಕಾರಿ ಬ್ಯಾಂಕ್, ಉಳಿತಾಯದ ಹಣ ಇಡಲು ವಾಣಿಜ್ಯ ಬ್ಯಾಂಕ್ ಎಂಬ ಮನೋಭಾವ ಬಿಡಬೇಕು. ಅವಿಭಜಿತ ಜಿಲ್ಲೆಯ ರೈತರು ನೆಮ್ಮದಿಯ ಬದುಕು ನಡೆಸುತ್ತಿರುವುದೇ ಸಹಕಾರಿ ರಂಗದಿಂದ ಎಂಬ ಸತ್ಯ ಅರಿತು ಸಹಕಾರಿ ಬ್ಯಾಂಕ್‌ಗಳಲ್ಲೇ ಉಳಿತಾಯ ಖಾತೆ ತೆರೆದು ಹೆಚ್ಚಿನ ಬಡ್ಡಿಯ ಪ್ರಯೋಜನ ಪಡೆಯಬೇಕು. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ