

ಮೈಸೂರು: ಹಣದ ಅವಶ್ಯಕತೆ ಇರುವವನು ಎಂದು ನನ್ನನ್ನು ಬೇರೆ ರೀತಿ ತಿಳಿಯಬೇಡಿ. ಕ್ಷೇತ್ರದಲ್ಲಿ ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಕೆ.ಆರ್.ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮೈಸೂರು ನಗರ ಹಾಗೂ ಜಿಲ್ಲಾ ಬ್ರಾಹ್ಮಣ ಸಂಘ, ಮೈಸೂರು ಜಿಲ್ಲಾ ವಿಪ್ರ ಸಂಘದಿಂದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಶನಿವಾರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಲವು ಗುರು-ಹಿರಿಯರ ಆರ್ಶೀವಾದದಿಂದ ನನ್ನನ್ನು ಜನರು ಶಾಸಕನನ್ನಾಗಿ ಚುನಾಯಿಸಿದ್ದಾರೆ. ಹೀಗಾಗಿ ಜನರ ನಿರೀಕ್ಷೆ ಬಹಳಷ್ಟು ಇದ್ದು, ಅವರ ನಿರೀಕ್ಷೆಗಳನ್ನು ಹಂತ, ಹಂತವಾಗಿ ಈಡೇರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಹಾಲಿ ಇದ್ದ ಶಾಸಕರಿಗೆ ಬದಲಾಗಿ ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಟಿಕೆಟ್ ನೀಡಿತು. ಹಾಗಾಗಿ ಮುಖಂಡರನ್ನು ಬಿಟ್ಟರೆ ಹೆಚ್ಚಿನ ಜನರು ಪರಿಚಯ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಹಲವು ಸಂಘ, ಸಂಸ್ಥೆಗಳು, ಹಿರಿಯರು, ಹಿತೈಷಿಗಳು ನನ್ನ ಪರ ಪ್ರಚಾರ ನಡೆಸಿದರು. ಕೆಲವರು ತಮ್ಮ ಕೈಲಾದಷ್ಟು ಸಹಾಯ ಮಾಡಿ ಹರಸಿದ್ದರೆ, ಹಲವರು ವ್ರತ, ಪೂಜೆ ನೆರವೇರಿಸಿ ನನ್ನ ಗೆಲುವಿಗೆ ಪ್ರಾರ್ಥಿಸಿದ್ದಾರೆ. ಎಲ್ಲರ ಹಾರೈಕೆಗೆ ನಾನು ಚಿರಋಣಿ ಎಂದು ಕೃತಜ್ಞತೆ ಸಲ್ಲಿಸಿದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಗ್ರಾಮಾಂತರ ಅಧ್ಯಕ್ಷ ಗೋಪಾಲ್ ರಾವ್, ನಗರಪಾಲಿಕ ಸದಸ್ಯರಾದ ಮ.ವಿ. ರಾಮಪ್ರಸಾದ್, ಎಂ.ಸಿ.ರಮೇಶ್, ಲೇಖಕಿ ಪುಷ್ಪಾ ಅಯ್ಯಂಗಾರ್, ಮುಖಂಡರಾದ ರವಿ ಶಾಸ್ತ್ರಿ, ಪಂಡಿತ್ ಅನಿರುದ್ಧಾಚಾರ್, ಪುಟ್ಟಣ್ಣ ಭಟ್, ಹರೀಶ್, ಎಂ.ಆರ್.ಬಾಲಕೃಷ್ಣ, ಎಚ್.ಎನ್.ಶ್ರೀಧರಮೂರ್ತಿ, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ.ಎಂ.ನಿಶಾಂತ್, ಹರೀಶ್, ಶ್ರೀನಾಥ್, ಕಲ್ಕೆರೆ ನಾಗರಾಜ್, ಸುಚೀಂದ್ರ, ನಾಗಶ್ರೀ, ಚಕ್ರಪಾಣಿ, ಜ್ಯೋತಿ ಇತರರು ಇದ್ದರು.