

ಕಳಸ: ಕಳಸದ ಕಲಶೇಶ್ವರನನ್ನು ನಂಬಿ ಹರಕೆ ಕೊಟ್ಟಿಕೊಳ್ಳುವುದು, ಭಕ್ತಿಯಿಂದ ಪ್ರಾರ್ಥಿಸಿದರೆ ಬಯಕೆಯಗಳು ಈಡೇರುತ್ತವೆ ಎಂಬ ನಂಬಿಕೆ ಬಲವಾಗುತ್ತಿದೆ. ಹೀಗಾಗಿ ಕಲಶೇಶ್ವರ ದೇವರಿಗೆ ಹರಕೆ ಕಟ್ಟಿಕೊಳ್ಳುವವರ ಸಂಖ್ಯೆ ಜಾಸ್ತಿ. ಆದರೆ ಭಕ್ತನೋರ್ವ ಒಳ್ಳೆಯವನನ್ನಾಗಿ ಮಾಡು ಎಂದು ಕೋರಿ ಪತ್ರ ಬರೆದಿರುವುದು ಬೆಳಕಿಗೆ ಬಂದಿದೆ.
ಕಲಶೇಶ್ವರ ದೇವರ ಮತ್ತು ಪರಿವಾರ ದೇವರ ಕಾಣಿಕೆ ಹುಂಡಿಯ ಪರ್ಕಾವಣೆ ಬುಧವಾರ ನಡೆಯಿತು. ಹಣ ಎಣಿಸುವಾಗ ವೇದಾಂತ ಪಾಟೀಲ ಎಂದು ಬರೆದ ಭಕ್ತನ ಪತ್ರ ಸಿಕ್ಕಿದೆ. ಪತ್ರವನ್ನು ಜ.2ರಂದು ಬರೆದು ಹುಂಡಿಗೆ ಹಾಕಲಾಗಿದೆ.
ನಾನು ನಿನ್ನ ಜತೆ ನೇರ ಮಾತನಾಡಬೇಕು, ನಾನೊಬ್ಬ ಸುಕ್ಷಮವಾದ ವ್ಯಕ್ತಿ. ನಾನು ಯಾವುದೇ ಥರ ಕೆಟ್ಟದನ್ನು ಮಾಡಿಲ್ಲ ಮಾಡುವುದೂ ಇಲ್ಲ. ಆದರೆ ನೀನು ನನಗೆ ಶಿಕ್ಷೆಯನ್ನು ಕೊಡುತ್ತಿದ್ದಿಯಾ. ನನಗೆ ಅರ್ಥವಾಗಲಿಲ್ಲ. ನನಗೆ ಕೆಟ್ಟ ಜನರನ್ನು ನೀಡ ಬೇಡ, ನನ್ನನು ದುಃಖಪಡಿಸಬೇಡ. ನನ್ನನ್ನು ಕೆಟ್ಟ ಜನರಿಂದ ದೂರ ಇಡು. ನನ್ನನ್ನು ಒಳ್ಳೆಯ ವ್ಯಕ್ತಿಯನ್ನಾಗಿಸು. ಒಳ್ಳೆಯ ವಿದ್ಯೆಯನ್ನು ನೀಡು. ನನ್ನಿಂದ ಒಬ್ಬರಿಗೆ ಒಳ್ಳೆಯದಾಗಿಸು. ದುಷ್ಟರನ್ನು ನಾಶ ಮಾಡು ನನ್ನನ್ನು ಕಣ್ಣು ತೆರೆದು ನೋಡು. ದಯವಿಟ್ಟು ನಾನು ಏನೇ ಕೆಟ್ಟದು ಮಾಡಿದರೂ ಕ್ಷಮಿಸು. ಇದು ನಿನಗೆ ತಲುಪುತ್ತೆ ಅಂದುಕೊಂಡಿದ್ದೇನೆ. ಇದಕ್ಕೆ ನನಗೆ ಉತ್ತರ ಬೇಕು ಎಂದು ದೇವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ.