ನನ್ನದೇನು ಟೂರಿಂಗ್​ ಟಾಕೀಸೇ...? : ಕ್ಷೇತ್ರ ಬದಲಾವಣೆ ಮಾಡಲ್ಲ ಎಂದು ಎಚ್​ಡಿಕೆ ಸ್ಪಷ್ಟನೆ

1
Published on

ಚನ್ನಪಟ್ಟಣ: ಕ್ಷೇತ್ರ ಬದಲಾವಣೆಯ ಚಿಂತನೆಯೇ ಇಲ್ಲ. ಈ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ. ಕ್ಷೇತ್ರ ಬದಲಾವಣೆ ಮಾಡಲು ನನ್ನದೇನು ಟೂರಿಂಗ್​ ಟಾಕೀಸೇ... ಎನ್ನುವ ಮೂಲಕ ಮುಂದಿನ ಚುನಾವಣೆಯಲ್ಲಿ ಕ್ಷೇತ್ರ ತೊರೆಯುವುದಿಲ್ಲ ಎಂದು ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ತಾಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಭಾನುವಾರ ನಡೆದ ಬಮುಲ್​ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷ ಸಂಘಟನೆಗಾಗಿ ರಾಜ್ಯ ಪ್ರವಾಸ ಮಾಡಬೇಕಾದ ಅನಿವಾರ್ಯತೆಯಿಂದ ಕ್ಷೇತ್ರಕ್ಕೆ ಬರಲಿಲ್ಲ. ಎಲ್ಲೇ ಇದ್ದರೂ ಕ್ಷೇತ್ರದ ವಿಷಯದಲ್ಲಿ ಗಮನಹರಿಸಿದ್ದೇನೆ. ಸಮಸ್ಯೆಗಳು ಗಮನಕ್ಕೆ ಬಂದ ಕೂಡಲೇ ಅಧಿಕಾರಿಗಳಿಗೆ ಸೂಚನೆ ಕೊಟ್ಟು ಬಗೆಹರಿಸಲು ಕ್ರಮವಹಿಸುತ್ತಿದ್ದೇನೆ, ಕ್ಷೇತ್ರವನ್ನು ರ್ನಿಲಸುವ ಪ್ರಶ್ನೆಯೇ ಇಲ್ಲ ಎಂದರು.

2 ಕಡೆ ಸ್ಪರ್ಧಿಸುವಂತಿಲ್ಲ: ಕ್ಷೇತ್ರ ಬದಲಾವಣೆ ಬಗ್ಗೆ ನಾನ್ಯಾಕೆ ಚಿಂತಿಸಲಿ. ಚನ್ನಪಟ್ಟಣ ಬಿಟ್ಟು ಬೇರೆ ಎಲ್ಲೂ ನಿಲ್ಲಲ್ಲ. ಎರಡು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಕಾನೂನನ್ನು ಚುನಾವಣಾ ಆಯೋಗ ಮಾಡಲು ಹೊರಟಿದೆ. ಈ ಕಾನೂನು ಜಾರಿಯಾದರೆ ಸ್ವಾಗತಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಜನರು ನನ್ನನ್ನು ಉಳಿಸಿಕೊಳ್ಳುತ್ತಾರೆ: ಚನ್ನಪಟ್ಟಣ ತಾಲೂಕು ಹಾಗೂ ದೇವೇಗೌಡರ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ಕಳೆದ ಬಾರಿ ಚನ್ನಪಟ್ಟಣ ಕಾರ್ಯಕರ್ತರ ನೋವಿಗಾಗಿ ಎರಡು ಕಡೆ ಸ್ಪರ್ಧಿಸಿದ್ದೆ. ಚನ್ನಪಟ್ಟಣ, ರಾಮನಗರವಷ್ಟೇ ಅಲ್ಲದೆ ಇಡೀ ಜಿಲ್ಲೆಯೇ ನನ್ನ ಕರ್ಮಭೂಮಿ. ರಾಮನಗರ ಜನತೆ ಒಪ್ಪಿಗೆ ಪಡೆದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಅನಿವಾರ್ಯವಾಗಿ ರಾಜೀನಾಮೆ ನೀಡಿ ಚನ್ನಪಟ್ಟಣ ಉಳಿಸಿಕೊಂಡಿದ್ದೆ. ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲೇ ಮುಂದುವರಿಯುತ್ತೇನೆ. ಇದರಲ್ಲಿ ಯಾವುದೇ ಅಂಜಿಕೆ ಇಲ್ಲ. ಯಾರು ಎಷ್ಟೇ ಅಪಪ್ರಚಾರ ಮಾಡಿದರೂ ನನ್ನನ್ನು ಏನು ಮಾಡಲು ಸಾಧ್ಯವಿಲ್ಲ. ಇಲ್ಲಿನ ಜನರು, ಕಾರ್ಯಕರ್ತರು ನನ್ನ ಉಳಿಸಿಕೊಳ್ಳುತ್ತಾರೆಎಂದು ಎಚ್​ಡಿಕೆ ವಿಶ್ವಾಸ ವ್ಯಕ್ತಪಡಿಸಿದರು. ಮಾಗಡಿಯಲ್ಲಿ ಈಗಿರುವವರೇ ಅಭ್ಯರ್ಥಿಯಾಗಲಿದ್ದಾರೆ ಹಾಗೂ ಗೆಲ್ಲಲಿದ್ದಾರೆ. ನಾನು ಅಲ್ಲಿ ಹೋಗಿ ಅರ್ಜಿ ಹಾಕುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯಸಭೆ ಲಿತಾಂಶ ಆಶ್ಚರ್ಯ ತಂದಿಲ್ಲ: ರಾಜ್ಯಸಭೆ ಹಾಗೂ ವಿಧಾನ ಪರಿಷತ್​ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ರಾಜ್ಯಸಭೆಯಲ್ಲಿ ಇದ್ದದ್ದೇ ನಮ್ಮದು 32 ಮತ.32 ಮತದಲ್ಲಿ ಇಬ್ಬರು ಮೊದಲೇ ಪಕ್ಷದಿಂದ ಹೊರಗೆ ಇದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್​&ಬಿಜೆಪಿ ಒಳಗೊಳಗೆ ಏನೇನು ಆಟವಾಡಿದ್ದಾರೆ ಗೊತ್ತಿದೆ. ಈ ಫಲಿತಾಂಶ ನನಗೆ ಆಶ್ಚರ್ಯ ಉಂಟು ಮಾಡಿಲ್ಲ ಎಂದು ಎಚ್​.ಡಿ. ಕುಮಾರಸ್ವಾಮಿ ಹೇಳಿದರು.ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಎರಡು ದಿನ ಪ್ರಚಾರಕ್ಕೆ ಹೋಗಿದ್ದೆ. ಯಾವ ಕಾರಣಕ್ಕೆ ಅಲ್ಲಿ ಸೋತಿದ್ದೇವೆ ಎಂಬುದನ್ನು ಸಾರ್ವಜನಿಕವಾಗಿ ಚರ್ಚಿಸಲ್ಲ.ಅಲ್ಲಿ ಸೋತಿರುವುದು ನಮಗೆ ಮುಖಭಂಗ ಅಲ್ಲ. ಪಕ್ಷದ ಆಂತರಿಕ ಸಮಸ್ಯೆಯಿಂದ ಸೋಲಾಗಿದೆ.ವಿಧಾನ ಪರಿಷತ್​ ಮತ್ತು ವಿಧಾನಸಭೆ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ.ಈ ಹಿಂದೆ ನಮ್ಮ ಪಕ್ಷದ ಮುಖಂಡರಾದ ಭೋಜೆಗೌಡರು ಕರಾವಳಿ ಪ್ರದೇಶದಲ್ಲಿ ಗೆಲುವು ಕಂಡಿದ್ದರು. ಅಲ್ಲಿ ನಮ್ಮ ಒಬ್ಬ ಎಂಎಲ್​ಎ ಕೂಡ ಇರಲಿಲ್ಲ. ಆದರೂ, ಗೆದ್ದಿದ್ದೆವು. ತದನಂತರ ಕರಾವಳಿ, ಮಲೆನಾಡು ಪ್ರದೇಶದಲ್ಲಿ ಜೆಡಿಎಸ್​ ಶಕ್ತಿ ವೃದ್ಧಿಯಾಗಿತ್ತೇ?ಎಂಎಲ್​ಸಿ ಚುನಾವಣೆಗೂ ಸಾರ್ವತ್ರಿಕ ಚುನಾವಣೆಗೂ ವ್ಯತ್ಯಾಸವಿದೆ. ನಮಗೆ ವಿಧಾನಸಭಾ ಚುನಾವಣೆ ಮುಖ್ಯ. 123 ಸ್ಥಾನ ಗೆಲ್ಲುವ ಗುರಿಯೊಂದಿಗೆ ಆಗಸ್ಟ್​ನಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವೆ ಎಂದು ಎಚ್​.ಡಿ. ಕುಮಾರಸ್ವಾಮಿ ತಿಳಿಸಿದರು.

ಸ್ವತಂತ್ರವಾಗಿ ಅಧಿಕಾರಕ್ಕೆ: ಇಡೀ ರಾಜ್ಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿ ಪಂಚರತ್ನ ಯೋಜನೆ ಅನುಷ್ಠಾನಕ್ಕೆ ತರಲು ನಾಡಿನ ಜನತೆ ಆಶೀರ್ವಾದ ಪಡೆಯಲು ಸವಾಲು ಸ್ವೀಕರಿಸಿ ಹೊರಟಿದ್ದೇನೆ.ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ,ನಮ್ಮ ಕುಟುಂಬದಲ್ಲಿ ಎಲ್ಲರೂ ಸೋತು ಗೆದ್ದಿದ್ದೇವೆ. ಸೋತ ತಕ್ಷಣ ಹೆದರಿ ಕುಳಿತವರಲ್ಲ. ಕಾರ್ಯಕರ್ತರು, ಜನರ ಮಧ್ಯೆ ಕೆಲಸ ಮಾಡಿಕೊಂಡು ಬಂದಿದ್ದೇವೆ.ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​, ಬಿಜೆಪಿಗಿಂತ ಜೆಡಿಎಸ್​ ಹೆಚ್ಚಿನ ಸ್ಥಾನ ಪಡೆಯುತ್ತದೆ. ಸ್ವತಂತ್ರವಾಗಿ ಅಧಿಕಾರಕ್ಕೆ ಬರುತ್ತದೆ.ಇದಕ್ಕೆ ಎಷ್ಟೇ ಅಡಚಣೆ ಬರಲಿ, ನಮ್ಮ ಪಕ್ಷವನ್ನು ಸರ್ವನಾಶ ಮಾಡುವ ಹುನ್ನಾರ ನಡೆಸಲಿ. ಅದೆಲ್ಲವನ್ನೂ ಮೆಟ್ಟಿ ನಿಂತು ಈ ಪಕ್ಷಕ್ಕೆ ಶಕ್ತಿ ತುಂಬುವ ಲಕ್ಷಾಂತರ ಕಾರ್ಯಕರ್ತರಿದ್ದಾರೆಎಂದು ಎಚ್​ಡಿಕೆ ಹೇಳಿದರು.

ಕೇಂದ್ರ ಸರ್ಕಾರದ ವಿರುದ್ಧ ಕಿಡಿ: ಕೇಂದ್ರ ಸರ್ಕಾರದ ಅಗ್ನಿಪಥ್​ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅಗ್ನಿಪಥ್​ ಯೋಜನೆ ಆರ್​ಎಸ್​ಎಸ್​ ಯೋಜನೆ ಎಂಬ ಅನುಮಾನವಿದೆ. ಇವರಿಗೆ ಈ ಯೋಜನೆಯ ಸಲಹೆ ಕೊಟ್ಟವರು ಯಾರು? ರಕ್ಷಣಾ ಇಲಾಖೆಗೆ ಯಾರು ಸಲಹೆ ಕೊಟ್ಟರು? ಕೇಂದ್ರ ಸರ್ಕಾರಕ್ಕೆ ಸಂಸದರ ಸಮಿತಿ ಸಲಹೆ ಕೊಟ್ಟಿದೆಯಾ ಅಥವಾ ಆರ್​ಎಸ್​ಎಸ್​ನವರು ಸಲಹೆ ಕೊಟ್ಟಿದ್ದಾರಾ? ಹಿಟ್ಲರ್​ನ ಸರ್ವಾಧಿಕಾರ ಇತ್ತಲ್ಲ, ಆಗಲೇ ಆರ್​ಎಸ್​ಎಸ್​ ಹುಟ್ಟಿಕೊಂಡಿತ್ತು. ಅದೇ ರೀತಿ ಈಗ ಸೇನೆಯಲ್ಲೂ ಹಿಡಿತ ಸಾಧಿಸಲು ಹೊರಟಿದ್ದಾರೆ. ಸೇನೆಯಲ್ಲಿ ಆರ್​ಎಸ್​ಎಸ್​ನವರನ್ನು ತುಂಬಲು ಪ್ಲ್ಯಾನ್​ ಇದೆ. ಇದು ಆರ್​ಎಸ್​ಎಸ್​ನವರ ಅಗ್ನಿಪಥ್​ ಯೋಜನೆಎಂದು ಯೋಜನೆಯ ಬಗ್ಗೆ ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net