

ಚಿತ್ರದುರ್ಗ: ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್‌ಗೆ ನಾನು ಹೋಗಿಲ್ಲ. ಆಗ ನಾನು ಚಿತ್ರದುರ್ಗದಲ್ಲಿದ್ದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಫೋನ್ ಬಂದಿತ್ತು. ನಾನು ಯಾವ ಟೀಂನಲ್ಲೂ ಇಲ್ಲ. ನನ್ನದು ಕಾಂಗ್ರೆಸ್ ಟೀಂ. ಸಚಿವ ಸಂಪುಟ ಮರು ರಚನೆ ವಿಷಯ ನನಗೆ ಗೊತ್ತಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಸಿಎಂ ಸಿದ್ದರಾಮಯ್ಯ ಅವರು ಈ ಕುರಿತು ತೀರ್ಮಾನಿಸಲಿದ್ದಾರೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆದಿದ್ದು, ಸತ್ಯಾಂಶ ಹೊರಬರಲಿದೆ. ಕೆ.ಎಸ್. ಈಶ್ವರಪ್ಪ ಪ್ರಕರಣವೇ ಬೇರೆ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ನಮ್ಮ ಸರ್ಕಾರದ ಮೇಲೆ ಲಕ್ಷಾಂತರ ಕೋಟಿ ರೂ. ಹೊರೆ ಹೊರೆಸಿದೆ ಎಂದು ಪ್ರತಿಪಕ್ಷಗಳ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು.
ಸಿಎಂ ಈ ಬಾರಿ ಮಂಡಿಸುವ ಬಜೆಟ್ ನಂತರ ರಾಜ್ಯದ ಆರ್ಥಿಕತೆ ಸ್ಟ್ರೀಮ್‌ಲೈನ್‌ಗೆ ಬರಲಿದೆ ಎಂದು ಹೇಳಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಒಂದೇ ಒಂದು ಒಳ್ಳೆಯ ಕಾರ್ಯಕ್ರಮ ಹೆಸರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆರ್.ಅಶೋಕ್ ಸಾರಿಗೆ ಸಚಿವರಾಗಿದ್ದಾಗ ಶೇ.48 ರಷ್ಟು ಪ್ರಯಾಣ ದರ ಹೆಚ್ಚಿಸಲಾಗಿತ್ತು ಎಂದು ಬಸ್ ಪ್ರಯಾಣ ದರ ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.