ನನ್ನ ಶಕ್ತಿಯನ್ನು ಉಪಯೋಗಿಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಎ.ಮಂಜು

ನನ್ನ ಶಕ್ತಿಯನ್ನು ಉಪಯೋಗಿಸಿಕೊಳ್ಳುವಲ್ಲಿ ಬಿಜೆಪಿ ವಿಫಲ: ಎ.ಮಂಜು
Published on

ಅರಕಲಗೂಡು: ಅರಕಲಗೂಡಿನಲ್ಲಿ ಶನಿವಾರ ಎರಡು ದಿಢೀರ್ ರಾಜಕೀಯ ಬೆಳವಣಿಗೆಗಳು ನಡೆದಿವೆ. ಹಾಲಿ ಶಾಸಕ ಎ.ಟಿ. ರಾಮಸ್ವಾಮಿ ಜೆಡಿಎಸ್ ತೊರೆಯುವುದಾಗಿ ಬಹಿರಂಗವಾಗಿ ಹೇಳಿದ್ದರೆ, ಇತ್ತ ಅವರ ರಾಜಕೀಯ ವೈರಿ ಮಾಜಿ ಸಚಿವ ಎ.ಮಂಜು ಜೆಡಿಎಸ್ ಸೇರುವ ಮಾತನಾಡಿದ್ದಾರೆ.


ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಶನಿವಾರ, ‘ಎ.ಮಂಜು ಅವರು ಜೆಡಿಎಸ್ ಸೇರಲಿದ್ದಾರೆ’ ಎಂಬ ಮಾಹಿತಿ ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಅರಕಲಗೂಡಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಎ.ಮಂಜು, ‘ಕುಮಾರಸ್ವಾಮಿ ಅವರು ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ನಾನು ಕುಟುಂಬ ರಾಜಕೀಯದ ವಿರುದ್ಧ ಹೋರಾಟ ಮಾಡಿದ್ದನೇ ಹೊರತು, ವೈಯಕ್ತಿಕವಾಗಿ ಅಲ್ಲ. ಮುಂದಿನ ದಿನಗಳಲ್ಲಿ ಅವರೊಂದಿಗೆ ಸೇರಿ ಕೆಲಸ ಮಾಡುತ್ತೇನೆ’ ಎಂದರು.


‘ನಾನು ಕಾಂಗ್ರೆಸ್‌ಗೆ ಮರಳಲು ಬಯಸಿದ್ದು ನಿಜ, ನನ್ನ ಮಗ ಕೂಡ ಕಾಂಗ್ರೆಸ್‌ನಲ್ಲೇ ಇದ್ದಾನೆ. ಆದರೆ ಕಾಂಗ್ರೆಸ್ ನಾಯಕರು ನಮ್ಮನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ. ಅದರ ಲಾಭವನ್ನು ಜೆಡಿಎಸ್ ಪಡೆಯುತ್ತಿದೆ. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರು ಅಥವಾ ಮಿತ್ರ ಆಗಿರುವುದಿಲ್ಲ’ ಎಂದು ಹೇಳಿದರು.


ರಾಜಕೀಯ ಮಾಡಲು ಯಾವುದಾದರೊಂದು ಪಕ್ಷದ ಅಶ್ರಯ ಬೇಕಾಗುತ್ತದೆ. ಸ್ವತಂತ್ರವಾಗಿ ಚುನಾವಣೆಗೆ ನಿಲ್ಲುವ ಬಗ್ಗೆಯೂ ಯೋಚನೆ ಮಾಡಿದ್ದೆ. ಆದರೆ ನನ್ನ ಅಭಿಮಾನಿಗಳು, ಹಿತೈಷಿಗಳು ಯಾವುದಾದರೊಂದು ಪಕ್ಷದ ಚಿಹ್ನೆಯಿಂದಲೇ ಸ್ಪರ್ಧಿಸಬೇಕೆಂದು ಪಟ್ಟು ಹಿಡಿದರು. ನನ್ನ ಪ್ರಯತ್ನಕ್ಕೆ ಕುಮಾರಸ್ವಾಮಿ ಒಲವು ತೋರಿದರು. ದೇವೇಗೌಡರಿಗೆ ಮತ್ತು ಕುಮಾರಸ್ವಾಮಿಗೆ ಧನ್ಯವಾದ ಹೇಳಲು ಇಚ್ಚೆಪಡುತ್ತೇನೆ ಎಂದರು.


ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನನಗೆ 5 ಲಕ್ಷ ಮತಗಳು ಬಂದಿವೆ. ನನ್ನ ಶಕ್ತಿಯನ್ನು ಉಪಯೋಗಿಸಿಕೊಳ್ಳುವಲ್ಲಿ ಬಿಜೆಪಿಯವರು ವಿಫಲರಾದರು. ರಾಜಕೀಯವಾಗಿ ನನ್ನನ್ನು ತುಳಿಯುವ ಪ್ರಯತ್ನ ನಡೆಯಿತು. ನನಗೆ ಕೊಟ್ಟಿದ್ದ ಜವಾಬ್ದಾರಿ ಕಿತ್ತುಕೊಂಡರು ಎಂದು ಅಸಮಾಧಾನ ವ್ಯಕ್ತಪಡಿಸಿದರು.


ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸುವಾಗ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೂಕ್ತ ಮಾಹಿತಿ ನೀಡದೆ ಚುನಾವಣಾ ಆಯೋಗದ ನಿಯಮ ಉಲ್ಲಂಘಿಸಿದ್ದಾರೆ ಎಂಬುದಾಗಿ ಆರೋಪಿಸಿ ಅವರ ಆಯ್ಕೆ ಅಸಿಂಧುಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿರುವ ಕುರಿತು ಪ್ರಶ್ನಿಸಿದಾಗ, ಆ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.


1994 ಸಂಸತ್ ಚುನಾವಣೆಯಲ್ಲಿ ನಾನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪರ ಕೆಲಸ ಮಾಡಿ ಅವರ ಗೆಲುವಿಗೆ ಕಾರಣನಾಗಿದ್ದೆ. ಅದನ್ನು ದೇವೇಗೌಡರು ಮತ್ತು ರೇವಣ್ಣ ಸಹ ನೆನಪಿಸಿಕೊಂಡಿದ್ದಾರೆ. ನನ್ನ ಕ್ಷೇತ್ರದ ಜನರಿಗೋಸ್ಕರ ಜೆಡಿಎಸ್ ಸೇರುವ ನಿರ್ಧಾರ ಮಾಡಿದ್ದೇನೆ. ಅವರ ಆಶೀರ್ವಾದ ಬೇಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net