

ತೀರ್ಥಹಳ್ಳಿ: ನನ್ನ ರಾಜಕೀಯ ಭವಿಷ್ಯ ಮುಗಿಯಿತು ಎಂದೇ ಕೆಲವರು ಭಾವಿಸಿದ್ದಾರೆ. ಈ ಕ್ಷೇತ್ರದ ಹಾಲಿ ಮತ್ತು ಮಾಜಿ ಶಾಸಕರು ಹಿಂದಿನಿಂದ ನನಗೆ ಭಾರಿ ತೊಂದರೆ ನೀಡಿದ್ದಾರೆ ಎಂದು ಕೆಪಿಸಿಸಿ ಸಹಕಾರ ವಿಭಾಗ ಸಂಚಾಲಕ ಆರ್.ಎಂ.ಮಂಜುನಾಥ ಗೌಡ ಕಿಡಿಕಾರಿದ್ದಾರೆ.
ಶಿವಮೊಗ್ಗ ಟಿಎಪಿಸಿಎಂಎಸ್ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಈಡಿಗರ ಸಭಾಭವನದಲ್ಲಿ ಸೋಮವಾರ ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಶಿವಮೊಗ್ಗ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದು ಸಹಕಾರಿ ಕ್ಷೇತ್ರದಿಂದಲೇ ಇದೀಗ ನನ್ನ ಎರಡನೇ ಇನ್ನಿಂಗ್ಸ್ ಪ್ರಾರಂಭವಾಗಿದೆ. ಪಕ್ಷ ರಾಜ್ಯ ಮಟ್ಟದಲ್ಲಿ ಹೊಣೆಗಾರಿಕೆ ಸ್ಥಾನವನ್ನೂ ನೀಡಿದೆ. ಶಾಸಕ ಸ್ಥಾನದ ಬಯಕೆಯಿದೆ. ಚುನಾವಣೆಯಲ್ಲಿ ಟಿಕೆಟ್ ಯಾರಿಗೆ ನೀಡಿದರೂ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಬಹಳ ಮಂದಿ ಬಿಜೆಪಿ ಬಿಡಲು ತುದಿಗಾಲಲ್ಲಿ ನಿಂತಿದ್ದಾರೆ. ಆದ ಕಾರಣ ಆರ್‌ಎಸ್‌ಎಸ್‌ನಲ್ಲೇ ಇದ್ದ ಡಾ. ಧನಂಜಯ್ ಸರ್ಜಿ ಬಿಜೆಪಿ ಸೇರಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಯುವಕರಿಗೆ ಉದ್ಯೋಗ ಕಲ್ಪಿಸಲು ವಿಫಲವಾಗಿರುವ ಬಿಜೆಪಿ ಎಲ್ಲ ಸರ್ಕಾರಿ ಉದ್ದಿಮೆಗಳನ್ನು ಖಾಸಗಿಕರಣಗೊಳಿಸುತ್ತಿರುವುದು ಮಾತ್ರವಲ್ಲದೆ ಮುಜರಾಯಿ ದೇವಸ್ಥಾನಗಳನ್ನೂ ಖಾಸಗಿಯವರಿಗೆ ಕೊಡುವುದಕ್ಕೆ ಮುಂದಾಗಿದೆ ಎಂದು ಟೀಕಿಸಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಂಜುನಾಥಗೌಡರ ಸಾಧನೆ ಸ್ಮರಣೀಯವಾಗಿದೆ. ವಿಶೇಷವಾಗಿ ಸಹಕಾರ ಸಂಘಗಳ ಮೂಲಕ ಜಿಲ್ಲೆಯ ರೈತರಿಗೆ ಗೌಡರು ನೀಡಿರುವ ಕೊಡುಗೆ ಅಮೂಲ್ಯವಾಗಿದ್ದು ರೈತ ಸಮುದಾಯ ಸ್ಮರಿಸಬೇಕಿದೆ ಎಂದರು. ಶಿವಮೊಗ್ಗ ಗ್ರಾಮಾಂತರ ಕಾಂಗ್ರೆಸ್ ನಾಯಕಿ ಜಿ.ಪಲ್ಲವಿ ಮಾತನಾಡಿದರು.
ಕಾರ್ಯಕರ್ತರಿಗೆ ಇರಿಸುಮುರುಸು: ಕಿಮ್ಮನೆ ರತ್ನಾಕರ್- ಮಂಜುನಾಥಗೌಡರ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷದ ಕಾರ್ಯಕರ್ತರು ಇರುಸುಮುರುಸು ಪಡುವಂತಾಗಿದೆ ಎಂದು ಜಿಪಂ ಸದಸ್ಯ ಬಿ.ಪಿ.ರಾಮಚಂದ್ರ ನೇರವಾಗಿ ಹೇಳಿದರು. ರಾಜ್ಯ ಮುಖಂಡರು ಈ ಬಗ್ಗೆ ಕಾಳಜಿ ವಹಿಸದ ಕಾರಣ ಕ್ಷೇತ್ರದಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಗುವ ಆತಂಕವಿದೆ. ಇದೇ ಸ್ಥಿತಿ ಮುಂದುವರಿದರೆ ಗೆಲ್ಲಬಹುದಾದ ಈ ಕ್ಷೇತ್ರವನ್ನು ಕಳೆದುಕೊಳ್ಳುವುದು ಖಚಿತ ಎಂದು ಭವಿಷ್ಯ ನುಡಿದರು.