ನನ್ನ ಮೇಲೆ ಹಲ್ಲೆ ನಡೆದರೆ ಮುಖಂಡರೇ ಹೊಣೆ

H.V.Chandru
Published on

ಚಾಮರಾಜನಗರ: ಜಿಲ್ಲಾಡಳಿತ ಭವನದ ಮುಂಭಾಗ ಶ್ರೀಮಹರ್ಷಿ ವಾಲ್ಮೀಕಿ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಕೆಲವು ನಾಯಕ ಸಮುದಾಯದ ಮುಖಂಡರು ನನ್ನ ಬಟ್ಟೆ ಬಿಚ್ಚಿಸಿ, ಕಾರಿಗೆ ಬೆಂಕಿ ಹಾಕುವಂತೆ ಬೆದರಿಕೆ ಹಾಕಿದ್ದಾರೆ. ಒಂದುವೇಳೆ ನನ್ನ ಮೇಲೆ ಹಲ್ಲೆ ನಡೆದರೆ ಆ ಮುಖಂಡರೇ ಹೊಣೆಯಾಗುತ್ತಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಮತ್ತು ನಾಯಕ ಜನಾಂಗದ ಮುಖಂಡ ಎಚ್.ವಿ.ಚಂದ್ರು ಹೇಳಿದರು.

ವಾಲ್ಮೀಕಿ ಪುತ್ಥಳಿ ನಿರ್ಮಾಣಸಂಬಂಧ ನಾಯಕ ಜನಾಂಗದ ಕೆಲ ಮುಖಂಡರಿಂದ ಜನಾಂಗವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ದಂಡ ಹಾಕುವುದಾಗಿ ಹೆದರಿಸಿ ವಿವಿಧ ಊರುಗಳಿಂದ ಜನರನ್ನು ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಕರೆತರಲಾಗಿದೆ. ನನಗೆ ಹಲವು ಮುಖಂಡರು ಬೆದರಿಕೆ ಹಾಕಿದ್ದಾರೆ. ಜತೆಗೆ ಬಂದಿದ್ದವರಿಗೂ ಕೂಡ ಧಮ್ಮಿ ಹಾಕಲಾಗಿದೆ. ಒಂದು ವೇಳೆ ನನ್ನ ಮೇಲೆ ಹಲ್ಲೆ ನಡೆದರೇ ಆ ಮುಖಂಡರೇ ನೇರ ಹೊಣೆಯಾಗುತ್ತಾರೆ ಎಂದು ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳೆದ 10 ವರ್ಷಗಳಿಂದಲೂ ವಾಲ್ಮೀಕಿ ಪುತ್ಥಳಿ ನಿರ್ಮಾಣಕ್ಕೆ ಹೋರಾಟ ಮಾಡಲಾಗುತ್ತಿದೆ ಎಂದು ಹೇಳುವ ಮುಖಂಡರು ಕಳೆದ ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪುತ್ಥಳಿ ನಿರ್ಮಾಣ ಮಾಡಿಸಲು ಯಾಕೆ ಮುಂದಾಗಲಿಲ್ಲ. ಪುತ್ಥಳಿ ನಿರ್ಮಾಣಕ್ಕೆ ಗಡುವು ನೀಡಿರುವುದು ಸರಿಯಲ್ಲ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಲ್ಮೀಕಿ ಪುತ್ಥಳಿಯಲ್ಲದೇ ಭಗೀರಥ, ಕನಕದಾಸರ ಪುತ್ಥಳಿ ನಿರ್ಮಾಣಕ್ಕೂ ಒಪ್ಪಿಗೆ ನೀಡಿದ್ದಾರೆ. ಪುತ್ಥಳಿ ನಿರ್ಮಾಣ ಕಾರ್ಯ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಅಲ್ಲದೇ ಬೇರೆ ಜನಾಂಗದವರಿಗೆ ನೋವಾಗುವ ರೀತಿ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಸರ್ಕಾರದ ಋಣದ ತೆಗೆ ಜನಾಂಗದ ಋಣ ತೀರಿಸುವ ಜವಬ್ದಾರಿಯೂ ನನ್ನ ಮೇಲಿದೆ. ನನ್ನನ್ನು ಜನಾಂಗದ ಸಭೆಗಳಿಗೆ ಆಹ್ವಾನಿಸುವುದಿಲ್ಲ ಎಂದು ಹೇಳಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಬಹಿಷ್ಕರಿಸಿ ಹೊರ ಬಂದ ಕೆಲ ಮುಖಂಡರು ಚಂದ್ರು ಹೊರಗೆ ಬರಲಿಲ್ಲ ಎಂದು ಹೇಳುತ್ತಾರೆ. ನನ್ನನ್ನು ಯಾರು ಕೂಡ ಸಭೆಗೆ ಕರೆದಿರಲಿಲ್ಲ. ಸರ್ಕಾರದ ಭಾಗವಾಗಿರುವ ನಾನು ಹೇಗೆ ಹೊರಗೆ ಹೋಗಲು ಆಗುತ್ತದೆ. ಜನಾಂಗ ಕ್ಷಮೆ ಕೇಳಲಿ ಅಂತ ಹೇಳಿಲ್ಲ. ಸಚಿವರು, ಶಾಸಕರು ಹೇಳಿದರೂ ಬೆಲೆ ಕೊಡದೇ ಹೊರ ನಡೆದ ಪರಿಣಾಮ ನಾನು ವೈಯಕ್ತಿಕವಾಗಿ ಕ್ಷಮೆ ಕೇಳಿದ್ದೇನೆ. ಜನಾಂಗದ ಅಭಿವೃದ್ಧಿಗೆ ನಾನು ದುಡಿದಿದ್ದೇನೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net