ನನ್ನ ಮೇಲೆ ಸುಳ್ಳು ಆರೋಪ ಮಸೀದಿಗೆ ಬಂದು ಆಣೆ-ಪ್ರಮಾಣ ಮಾಡಲಿ:ಗಿರೀಶ್ ಸವಾಲು

ನನ್ನ ಮೇಲೆ ಸುಳ್ಳು ಆರೋಪ ಮಸೀದಿಗೆ ಬಂದು ಆಣೆ-ಪ್ರಮಾಣ ಮಾಡಲಿ:ಗಿರೀಶ್ ಸವಾಲು
Published on

ಹಾಸನ: ನಮ್ಮ 30 ತಿಂಗಳ ಅಧಿಕಾರಾವಧಿಯಲ್ಲಿ ಏನು ಮಾಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿರುವವರು, ಜೇನುಕಲ್ ಕ್ಷೇತ್ರಕ್ಕೆ ಬೇಡ, ಅವರೇ ಹೇಳುವ ಮಸೀದಿಗೆ ಬಂದು ಆಣೆ-ಪ್ರಮಾಣ ಮಾಡಲಿ ಎಂದು ಅರಸೀಕೆರೆ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಸವಾಲು ಹಾಕಿದರು.
ಹಿಂದಿನ 30 ತಿಂಗಳಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಮಹಿಳಾ ಸದಸ್ಯೆಯೊಬ್ಬರ ಮೂಲಕ ಹೇಳಿಸಿದ್ದಾರೆ. ಆದರೆ ನಾನು ಆ ತಾಯಿಗೆ ಹೇಳ ಬಯಸುತ್ತೇನೆ, ಪರಿಶಿಷ್ಟ ವರ್ಗದ ನನಗೆ ಅಧಿಕಾರ ನಡೆಸಲು ಇನ್ನಿಲ್ಲದ ಕಿರುಕುಳ ನೀಡಿದರು. ಸಮುದಾಯದ ಸಂಸ್ಥೆಯೊಂದರ ಜಾಗದ ಸಂಬಂಧ ನಾನು ಹೈಕೋರ್ಟ್‌ಗೆ ಅಲೆಯುವಂತೆ ಮಾಡಿದಿರಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನನ್ನ ಅವಧಿಯಲ್ಲಿ ಪೌರಕಾರ್ಮಿಕರ ನಿವೇಶನಕ್ಕಾಗಿ ಎರಡೂವರೆ ಜಾಗ ಕೊಡಿಸಿದ್ದೇನೆ. ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ನಗರೋತ್ಥಾನ ಯೋಜನೆಯಡಿ 30 ಕೋಟಿ ತಂದಿದ್ದು, ಕೆಲಸ ನಡೆಯುತ್ತಿದೆ. ನಗರಕ್ಕೆ ಕುಡಿಯುವ ನೀರು ಶುದ್ಧೀಕರಿಸುವ ಫಿಲ್ಟರ್ ರೆಡಿ ಮಾಡಿಸಿದ್ದು ನಾನು, ಪಂಪ್‌ಹೌಸ್ ನಿರ್ವಹಣೆಯಲ್ಲಿ ಆಗುತ್ತಿದ್ದ ದುಂಧುವೆಚ್ಚ ತಡೆಗಟ್ಟಿದ್ದೇನೆ ಎಂದು ತಮ್ಮ ಸಾಧನೆ ಹೇಳಿಕೊಂಡರು. ಹಾಲಿ ಶಾಸಕರು ಮಾಡಿರುವ ಯುಜಿಡಿ ಅಸಮರ್ಪಕವಾಗಿದೆ, ತಮ್ಮ ಹುಳುಕು ಮುಚ್ಚಿಕೊಂಡು ನನ್ನ ಮೇಲೆ ಗೂಬೆ ಕೂರಿಸುವುದು ಬೇಡ ಎಂದು ತಿರುಗೇಟು ನೀಡಿದರು.
ಶಾಸಕರು ಕಳೆದ 14 ತಿಂಗಳ ಅವಧಿಯಲ್ಲಿ ನಗರಸಭೆಗೆ ಏನು ಅನುದಾನ ತಂದಿದ್ದಾರೆ ಎಂಬುದರ ಬಗ್ಗೆ ತಾಕತ್ತಿದ್ದರೆ ಶ್ವೇತಪತ್ರ ಹೊರಡಿಸಲಿ ಎಂದು ಗಿರೀಶ್ ಸವಾಲು ಹಾಕಿದರು.ಇದೇ ವೇಳೆ ಇ-ಸ್ವತ್ತು ಪಡೆಯಲು ಅಧ್ಯಕ್ಷರ ಸಮ್ಮಿತಿ ಮೇರೆಗೆ ಪಡೆಯಬೇಕು ಎಂದು ಮೌಖಿಕ ಆದೇಶ ಮಾಡಲಾಗಿದೆ. ಇದು ಕಾನೂನು ಬಾಹಿರ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಕಾನೂನು ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಜೆಡಿಎಸ್‌ನಿಂದ ಗೆದ್ದಿರುವ ಸದಸ್ಯರಿಗೆ ಹಣದ ಆಮಿಷ ತೋರಿಸಿ ಹಾಲಿ ನಗರಸಭೆ ಅಧ್ಯಕ್ಷರು ಹಿಂಬಾಗಿಲ ಮೂಲಕ ಅಧ್ಯಕ್ಷರಾಗಿದ್ದಾರೆ ಎಂದು ದೂರಿದ ಗಿರೀಶ್, ನಮ್ಮ ನಾಯಕರಾದ ಎನ್.ಆರ್.ಸಂತೋಷ್ ಅವರು ಯಾವುದೇ ಸಮುದಾಯವನ್ನು ದೂರುವ, ಟೀಕಿಸುವ ಕೆಲಸ ಮಾಡಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಹರ್ಷವರ್ಧನ್, ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net