ನನ್ನ ಮೇಲೆ ಸಿಡುಕಲು ಸಿಎಂಗೆ ಹಕ್ಕಿದೆ: ಪ್ರತಾಪ್ ಸಿಂಹ

Pratap Simha
Published on

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನ ಮೇಲೆ ಸಿಡುಕುವುದಕ್ಕೆ ಮತ್ತು ಕೋಪಿಸಿಕೊಳ್ಳುವುದಕ್ಕೆ ಹಕ್ಕಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.


ಸಂಸದ ಪ್ರತಾಪ್ ಸಿಂಹಗೆ ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅತಿ ಬುದ್ಧಿವಂತ ನೀನು ಹೋಗು’ ಎಂದು ಬೈಯ್ದ ವಿಚಾರವಾಗಿ ನಗರದಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದರು.
ಜನರ ಕೆಲಸದ ಸೇವಕ ನಾನು, ಯಾರ ಕಾಲಿಗೆ ಬಿದ್ದು ಬೇಕಾದರೂ ಕೈ ಮುಗಿದು ಜನರ ಕೆಲಸ ಮಾಡಿಕೊಡುತ್ತೇನೆ. ನಾನು ಯಾವುದೋ ವರ್ಗಾವಣೆ, ಕಂಟ್ರಾಕ್ಟರ್ ಫೈಲ್ ತೆಗೆದುಕೊಂಡು ಹೋಗಿದ್ದಾಗ ಹೀಗೆ ಆಗಿದ್ದರೆ ಅದು ಅವಮಾನ. ಸಿಎಂ ವೈಯಕ್ತಿಕವಾಗಿ ನನಗೆ ಅಣ್ಣನ ಸಮಾನ ಎಂದರು.


ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸಿಎಂ ಬಳಿ ಪತ್ರ ನೀಡಿದೆ. ಅವರು ಸಂಪುಟದ ಮುಂದೆ ಇಡಲು ಪತ್ರದ ಮೇಲೆ ನೋಟ್ ಬರೆದರು. ಮುಂದಿನ ಫಾಲೋಅಪ್ ಮಾಡಲು ಆ ಲೆಟರ್‌ನ ಫೋಟೋ ತೆಗೆದುಕೊಳ್ಳಲು ಕೇಳಿದೆ. ಆಗ ಸಿಎಂ ಅಧಿಕ ಕಾರ್ಯದ ಒತ್ತಡದಿಂದಾಗಿ ಸಣ್ಣದಾಗಿ ಸಿಡುಕಿದರು. ಸಿಎಂಗೆ ನನ್ನ ಮೇಲೆ ಸಿಡುಕುವುದಕ್ಕೆ, ಕೋಪಿಸಿಕೊಳ್ಳುವುದಕ್ಕೆ ಹಕ್ಕಿದೆ. ಸಿಎಂ ನನಗೆ ಪೆಟ್ಟು ಕೊಟ್ಟರೂ ಬೇಸರ ಇಲ್ಲ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ನಾನು ಕೇಳಿದ್ದಕ್ಕೆಲ್ಲ ಹಣ ಕೊಟ್ಟ ಏಕೈಕ ಸಿಎಂ ಬಸವರಾಜ ಬೊಮ್ಮಾಯಿ ಎಂದರು.


ವಸತಿ ಸಚಿವ ವಿ.ಸೋಮಣ್ಣ ಅವರ ಹುಟ್ಟುಹಬ್ಬ ಇದ್ದ ಕಾರಣ, ಅವರಿಗೆ ಶುಭಕೋರಲು ಹೋಗಿದ್ದೆ. ಹೀಗಾಗಿ ಮೈಸೂರಿಗೆ ಸಿಎಂ ಬಂದಾಗ ಬರಲು ಆಗಲಿಲ್ಲ ಎಂದು ಪ್ರಶ್ನೆವೊಂದಕ್ಕೆ ಉತ್ತರಿಸಿದರು
ಎಐಐಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಇಡಿ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್‌ನ ನಿಜ ಬಣ್ಣ ಬೀದಿಗೆ ಬಂದಿದೆ. ಅವ್ಯವಹಾರದ ಆರೋಪದಲ್ಲಿ ಸಿಲುಕಿದವರಿಗೆ ಜನರ ಅನುಕಂಪ ದೊರೆಯಲ್ಲ ಎಂದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net