ನನ್ನ ಮನೆಯನ್ನೇ ಆಸ್ಪತ್ರೆಯನ್ನಾಗಿಸುವೆ ; ಗ್ರಾಮಾಂತರ ಕ್ಷೇತ್ರದ ಶಾಸಕ ಗೌರಿಶಂಕರ್ ೋಷಣೆ ; ಕ್ಷೇತ್ರದ ಜನ ಆತಂಕಗೊಳ್ಳದೆ ಮಾರ್ಗಸೂಚಿ ಪಾಲಿಸಿ

08Tmk_Gowrishankar_Guluru
Published on

ತುಮಕೂರು : ಸಂಭಾವ್ಯ ಕರೊನಾ 3ನೇ ಅಲೆ ಭೀತಿಗೆ ಗ್ರಾಮಾಂತರ ಕ್ಷೇತ್ರದ ಜನರು ಆತಂಕಗೊಳ್ಳಬೇಕಿಲ್ಲ. ತುರ್ತು ಸ್ಥಿತಿ ಉಂಟಾದಲ್ಲಿ ಬಳ್ಳಗೆರೆಯ ನನ್ನ ಮನೆಯನ್ನೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಜನರಿಗೆ ಅನುಕೂಲ ಮಾಡಿಕೊಡುವೆ ಎಂದು ಶಾಸಕ ಡಿ.ಸಿ. ಗೌರಿಶಂಕರ್ ೋಷಿಸಿದರು.

ಗೂಳೂರು ಗ್ರಾಪಂ ವ್ಯಾಪ್ತಿಯಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಗ್ರಾಮಸಭೆಯಲ್ಲಿ ಮಾತನಾಡಿದರು.

ಈಗಾಗಲೇ ಕೋಡಿಮುದ್ದನಹಳ್ಳಿಯ ಮುರಾರ್ಜಿ ಶಾಲೆಯಲ್ಲಿ ಕರೊನಾ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಬೆಡ್ ವ್ಯವಸ್ಥೆ ಸಿದ್ಧವಾಗಿದೆ. ಬಳ್ಳಗೆರೆಯ ನನ್ನ ನಿವಾಸದಲ್ಲೂ ಐಸಿಯು ಬೆಡ್ ಒಳಗೊಂಡಂತೆ ಆಸ್ಪತ್ರೆ ವ್ಯವಸ್ಥೆ ನಿರ್ಮಿಸಿ ತಜ್ಞ ವೈದ್ಯರಿಂದ ಸೇವೆ ಒದಗಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು.

ಕರೊನಾ ಸಂಕಷ್ಟದಲ್ಲಿ ನೆರವಾಗಬಹುದೇ ವಿನಃ ಯಾರ ಪ್ರಾಣವನ್ನು ಕಾಪಾಡಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡು, ಕಟ್ಟುನಿಟ್ಟಾಗಿ ಕರೊನಾ ಮಾರ್ಗಸೂಚಿ ಪಾಲಿಸಬೇಕು. ಸೋಂಕಿನಿಂದ ಮೃತಪಟ್ಟವರ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ಕೊಡಲಾಗುತ್ತದೆ. ಅಷ್ಟು ಹಣದಲ್ಲಿ ಅವರೇನು ಮಾಡಲು ಸಾಧ್ಯ? ಅವರನ್ನು ಕಾಪಾಡಿಕೊಳ್ಳಲಿಲ್ಲ ಎಂಬ ಬೇಸರ ಕುಟುಂದವರಿಗೆ ಇದ್ದೇ ಇರುತ್ತದೆ. ಹಾಗಾಗಿ, ಸೋಂಕಿನ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದರು.

ಅಧಿಕಾರಿಗಳು ಭಾಗವಹಿಸಬೇಕು: ಗ್ರಾಮಸಭೆಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಇಲ್ಲಿ ಸ್ವೀಕರಿಸಿದ ಒಟ್ಟಾರೆ ಅಹವಾಲುಗಳ ಪೈಕಿ ಶೇ.80ಕ್ಕಾದರೂ ಪರಿಹಾರ ಒದಗಿಸಬೇಕು. ಗೂಳೂರು ಗ್ರಾಪಂ ವ್ಯಾಪ್ತಿಯಲ್ಲಿರುವ ನಿವೇಶನರಹಿತ ಬಡಕುಟುಂಬಗಳಿಗೆ ಎಲ್ಲ ಸದಸ್ಯರ ಸಹಕಾರದಿಂದ ಶೀಘ್ರವೇ ನಿವೇಶನ ವಿತರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಗೌರಿಶಂಕರ್ ಭರವಸೆಯಿತ್ತರು.

ತಾಲೂಕು ಅಧ್ಯಕ್ಷ ರಾಮಚಂದ್ರಪ್ಪ, ಜೆಡಿಎಸ್ ಗೂಳೂರು ಹೋಬಳಿ ಅಧ್ಯಕ್ಷ ಾಲನೇತ್ರಯ್ಯ, ಜೆಡಿಎಸ್ ಕಾರ್ಯಾಧ್ಯಕ್ಷ ಹಾಲನೂರು ಅನಂತ್, ಎಸ್‌ಕೆಡಿಆರ್‌ಡಿಪಿ ಯೋಜನಾಧಿಕಾರಿ ಸುನಿತಾ, ಮುಖಂಡರಾದ ಕೈದಾಳ ರಮೇಶ್, ಕೃಷ್ಣೇಗೌಡ ಮತ್ತಿತರರು ಇದ್ದರು.

1 ಸಾವಿರ ಕೋಟಿ ರೂ. ಅನುದಾನ! : ಹಣೆಬರಹ ಚೆನ್ನಾಗಿಲ್ಲ... ಸರಿಯಾದ ಸಮಯದಲ್ಲಿ ಶಾಸಕನಾಗಿ ಆಯ್ಕೆಯಾಗಲಿಲ್ಲ... ಎರಡು ವರ್ಷ ಕರೊನಾ ತಿಂದು ಹಾಕಿದೆ... ಆದರೂ, 1 ಸಾವಿರ ಕೋಟಿ ರೂ.ಗೂ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡದೆ ಈ ಪ್ರದೇಶದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಕೈಜೋಡಿಸಿದ್ದಾರೆ ಎಂದು ಡಿ.ಸಿ.ಗೌರಿಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆರೆಗಳಿಗೆ ವೃಷಭಾವತಿ ಕಣಿವೆ ನೀರು: ಹೇಮೆ ಹರಿದರೂ ಕೆರೆ ತುಂಬಿಸಿಕೊಳ್ಳಲಾಗದ ಕಾರಣ ಕ್ಷೇತ್ರದ ಕೆರೆಗಳಿಗೆ 865 ಕೋಟಿ ರೂ. ವೆಚ್ಚದಲ್ಲಿ ವೃಷಭಾವತಿ ಕಣಿವೆಯಿಂದ ನೀರು ಪೂರೈಸುವ ಯೋಜನೆಗೆ ಸಚಿವ ಮಾಧುಸ್ವಾಮಿ ಒಪ್ಪಿಗೆ ಪಡೆಯಲಾಗಿದೆ. ಈ ಯೋಜನೆಗಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಸಚಿವರ ಸಹಕಾರದಿಂದ ಯೋಜನೆ ಜಾರಿಗೆ ತರಲಾಗುತ್ತಿದ್ದು, ಶೀಘ್ರ ಚಾಲನೆ ನೀಡಲಾಗುವುದು. ಈ ಯೋಜನೆ ಪ್ರಾರಂಭವಾಗುತ್ತಿರುವುದು ಕೆಲವರಿಗೆ ಬೇಸರ ತರಿಸಿದೆ ಎಂದು ಶಾಸಕ ಹೇಳಿದರು.

ಗೂಳೂರು ಮಹಾಗಣಪತಿ ದೇವಸ್ಥಾನದ ಸ್ವಾಗತ ಕಮಾನು ಹಾಗೂ ರಥ ನಿಲ್ಲಿಸಲು ಶೆಡ್ ನಿರ್ಮಾಣಕ್ಕಾಗಿ 10 ಲಕ್ಷ ರೂಪಾಯಿಯನ್ನು ವೈಯಕ್ತಿಕವಾಗಿ ಕೊಡುವೆ. ನನ್ನ ತಂದೆ ಹೆಸರಲ್ಲಿ ಸ್ವಾಗತ ಕಮಾನು, ತಾಯಿ ಹೆಸರಿನಲ್ಲಿ ರಥದ ಶೆಡ್ ನಿರ್ಮಿಸಲಾಗುವುದು. ಡಿ.ಸಿ.ಗೌರಿಶಂಕರ್, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net