‘ನನ್ನ ಮಣ್ಣು ನನ್ನ ದೇಶ ’ಮಡಿದ ಸೈನಿಕರ ಪತ್ನಿಯರಿಗೆ, ನಿವೃತ್ತ ಯೋಧರಿಗೆ ಸನ್ಮಾನ

‘ನನ್ನ ಮಣ್ಣು ನನ್ನ ದೇಶ ’ಮಡಿದ ಸೈನಿಕರ ಪತ್ನಿಯರಿಗೆ, ನಿವೃತ್ತ ಯೋಧರಿಗೆ ಸನ್ಮಾನ
Published on

 ಹಾಸನ: ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವದ ಅಂಗವಾಗಿ ನಗರದ ಮಾರ್ಷಲ್ ಕಾರ್ಯಪ್ಪ ಉದ್ಯಾನವನದಲ್ಲಿ ಗುರುವಾರ ನಗರಸಭೆ ಆಯೋಜಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಹುತಾತ್ಮರಾದ ಸೈನಿಕರ ಪತ್ನಿಯರು ಮತ್ತು ನಿವೃತ್ತ ಯೋಧರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಲಾಯಿತು.

ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ವೆಂಕಟೇಶ್ ಮಾತನಾಡಿ, ಸೈನಿಕರು ದೇಶದ ಗಡಿ ಕಾಯುತ್ತಿರುವುದರಿಂದಲೇ ನಾವು ಇಲ್ಲಿ ನೆಮ್ಮದಿಯಾಗಿ ಇದ್ದೇವೆ. ಗಡಿ ಕಾಯುವುದು ಸುಲಭದ ಕೆಲಸವಲ್ಲ. ಮರದ ಮೇಲೆ ಕುಳಿತುಕೊಂಡು ಗುಂಡು ಹೊಡೆಯುತ್ತಿದ್ದರು. ಎಲ್ಲೆಂದರಲ್ಲಿ ಬಾಂಬ್ ಹಾಕುತ್ತಿದ್ದರು. ಇಂತಹ ಸಂದರ್ಭದಲ್ಲಿ ಸಾವಿರಾರು ಮಂದಿ ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹ ಹುತಾತ್ಮರಿಗೆ ನಗರಸಭೆಯಿಂದ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಯೋಧರು ಯಾರೇ ಆಗಿರಲಿ ಅವರು ಸೇವೆ ಸಲ್ಲಿಸಿ ತವರಿಗೆ ಬಂದಾಗ ಅವರಿಗೆ ಗೌರವ ನೀಡುವ ಗುಣ ಬೆಳೆಸಿಕೊಳ್ಳಬೇಕು ಎಂದರು.

ನಮ್ಮ ದೇಶ ಈಗ ಈ ಮಟ್ಟಿಗೆ ಬೆಳೆದಿರುವುದಕ್ಕೆ ತುಂಬಾ ಹೆಮ್ಮೆಯ ಎನಿಸುತ್ತದೆ. ಹಿಂದೆ ಚೀನಾದೊಂದಿಗೆ ಯುದ್ಧದ ಸಮಯದಲ್ಲಿ ಹಾಕಿಕೊಳ್ಳಲು ಬಟ್ಟೆ ಇರಲಿಲ್ಲ. ಫೈರ್ ಮಾಡಲು ಗನ್‌ಗಳೇ ಸರಿಯಾಗಿರಲಿಲ್ಲ. ಆ ಪರಿಸ್ಥಿತಿಯಲ್ಲಿ ಚೀನಾ ನಮ್ಮನ್ನು ನೂರಾರು ಕಿ.ಮೀ ದೂರ ತಳ್ಳಲು ಸಾಧ್ಯವಾಯಿತು. ಆದರೆ ಪ್ರಸ್ತುತ ಭಾರತ ಸದೃಢವಾಗಿದೆ. ಈಗ ಚೀನಾವನ್ನು ಹಿಮ್ಮೆಟ್ಟಿಸುವ ಶಕ್ತಿ ಪಡೆದುಕೊಂಡಿದೆ. ಅಂತಹ ತಾಕತ್ತು ನಮ್ಮ ದೇಶದ ಯೋಧರಿಗಿದೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಮಾತನಾಡಿ, ಅನ್ನ ಕೊಡುವ ರೈತ ದೇಶ ಕಾಯುವ ಸೈನಿಕ ಇಬ್ಬರೂ ಕೂಡ ಶ್ರಮಿಕರು. ನಗರಸಭೆಯು ಅತ್ಯುತ್ತಮ ಕಾರ್ಯಕ್ರಮವನ್ನು ಮಾಡುತ್ತಿದೆ. ದೇಶದ ಬಗ್ಗೆ ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ನಗರಸಭೆಯು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದರು.

ಇದೇ ಸಂದರ್ಭದಲ್ಲಿ ನನ್ನ ಮಣ್ಣು ನನ್ನ ದೇಶ ಘೋಷವಾಕ್ಯದಲ್ಲಿ ಇಡಲಾಗಿದ್ದ ಮಡಿಕೆಗೆ ಎಲ್ಲರೂ ಒಂದು ಹಿಡಿ ಮಣ್ಣನ್ನು ಹಾಕಿ ದೇಶ ಪ್ರೇಮ ಪ್ರದರ್ಶಿಸಿ ಪ್ರತಿಜ್ಞೆ ಸ್ವೀಕರಿಸಿದರು. ಹುತಾತ್ಮರಾದ ವೀರಯೋಧರು ಸುಬೇದಾರ್, ಟಿ.ಟಿ. ನಾಗೇಶ್, ಹವಾಲ್ದಾರ್ ಯೋಗಾನಂದ್, ವಿ.ಎಂ. ಮಲ್ಲೇಶ್, ಡಿ.ಪಿ. ಸಂದೀಪ್ ಕುಮಾರ್, ಎ.ಕೆ. ಸಾಗರ್ ಇವರ ಹೆಸರುಳ್ಳ ಶಿಲಾಫಲಕ ಸಮರ್ಪಣೆ, ಸ್ಮಾರಕ ಸ್ಥಾಪನೆ ಮಾಡಿದರು. ಬಳಿಕ 75 ಗಿಡಗಳನ್ನು ನೆಡಲಾಯಿತು.

ಇದೇ ವೇಳೆ ನಿವೃತ್ತ ಯೋಧರ ಸಂಘದ ಕಾರ್ಯದರ್ಶಿ ಪ್ರದೀಪ್ ಸಾಗರ್, ನಗರಸಭೆ ಪರಿಸರ ಇಂಜಿನಿಯರ್ ವೆಂಕಟೇಶ್, ಆರೋಗ್ಯ ನಿರೀಕ್ಷಕರಾದ ಪ್ರಸಾದ್, ಮಂಜುನಾಥ್, ಚೇತನ್, ಮೇಲ್ವಿಚಾರಕಾರದ ಪರಶುರಾಮು, ಕಲಾವಿದ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net