

ಹಾಸನ: ನಮ್ಮ ದೇಶ, ಬೇರೆ ಬೇರೆ ದೇಶಗಳ ಜತೆಗೆ ಕನ್ನಡ, ಕರುನಾಡು ಹೊಂದಿರುವ ಸಾಹಿತ್ಯಿಕ ಸಂಬಂಧ, ಬೇರೆಲ್ಲೂ ಕಾಣಲು ಸಾಧ್ಯವಿಲ್ಲ ಎಂದು ಜ್ಞಾನಪೀಠ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಹೇಳಿದರು.
ಹಾಸನ ಸಾಹಿತ್ಯೋತ್ಸವದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಚನ ಸಾಹಿತ್ಯವನ್ನು ಬೇರೆಲ್ಲೂ ಕಾಣಲು ಸಾಧ್ಯವೇ ಇಲ್ಲ. ಸುಮಾರು 56 ದೇಶಗಳಲ್ಲಿ ಪಠ್ಯ ಆಗಿದೆ. ಇಂಥ ಸೌಭಾಗ್ಯ ಯಾವ ಭಾಷೆಗೂ ಇಲ್ಲ ಎಂದು ಕೊಂಡಾಡಿದರು. ನನ್ನ ಭಾಷೆಗೆ ದೇಶದಲ್ಲೇ ವಿಶೇಷ ಸ್ಥಾನಮಾನ ಇರುವುದು ಹೆಮ್ಮೆಯ ವಿಷಯ ಎಂದರು.
ಕನ್ನಡ ಉಳಿಸುವ ಕೆಲಸ ಎಲ್ಲರಿಂದಲೂ ಆಗಬೇಕು. ಬೇರೆ ಭಾಷೆ ಸಂಪರ್ಕ ಬಂದಾಗ ಅದನ್ನು ಕಲಿತರೂ, ನಮ್ಮ ಭಾಷೆ ಮರೆಯಬಾರದು. ನಮ್ಮ ಭಾಷೆ ಉಳಿಸಿಕೊಂಡು ಬೇರೆ ಭಾಷೆ ಕಲಿಯಬೇಕು. ಆ ಭಾಷಿಗರೇ ಆಗಬಾರದು. ನನಗೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಬಹಳ ಹೆಮ್ಮೆ ಇದೆ. ಮುಂದೆಯೂ ಕರುನಾಡಲ್ಲೇ ಹುಟ್ಟಬೇಕು ಎಂಬುದು ನನ್ನ ಆಶಯ, ಕನ್ನಡ ಪವಿತ್ರ ಭಾಷೆ, ಕರ್ನಾಟಕ ಹೆಮ್ಮೆಯ ಬೀಡು ಎಂದು ಗುಣಗಾನ ಮಾಡಿದರು.
ಮತ್ತೊಂದು ಅತಿಶಯದ ಸಂಗತಿ ಎಂದರೆ ಕನ್ನಡಿಗರ ಹಾಗೆ ಕತೆ ಹೇಳೋರು ಬೇರೆ ಯಾವುದೇ ಭಾಷೆಯಲ್ಲೂ ಇಲ್ಲ. ಕತೆ ನಮ್ಮಲ್ಲಿ ಬೇಗ ಹುಟ್ಟಲಿವೆ, ಕತೆಯ ಹುಟ್ಟು, ಸೃಷ್ಟಿಸುವಲ್ಲಿ ನಾವು ಮೊದಲಿಗರು, 85 ಸಾವಿರ ಜಾನಪದ ಕತೆಗಳು ನಮ್ಮಲ್ಲಿವೆ. ಈ ಬಗ್ಗೆ ಅತೀವ ಹೆಮ್ಮೆ ಇದೆ. ಕತೆ ಹೇಳೋರು, ಕೇಳೋರು ಹಾಗೂ ಸೃಷ್ಟಿಸೋರು ಎಲ್ಲೂ ಇಲ್ಲ. ಇಂಥ ಸೃಜನಶೀಲತೆ ಪ್ರಪಂಚದ ಯಾವುದೇ ಭಾಷೆಗಿಲ್ಲ, ಕನ್ನಡ ಕತೆಗಳು ಅದ್ಭುತ ಎನಿಸಿಕೊಂಡಿವೆ, ಇದು ನಮ್ಮ ಹಿರಿಮೆ ಎಂದರು.