ನನ್ನ ಬರವಣಿಗೆಯ ಗುಟ್ಟೇ ಆರೋಗ್ಯ

Venu
Published on

ಚಿತ್ರದುರ್ಗ: ಬರವಣಿಗೆ ನನ್ನ ಜೀವಾಳ. ಅದು ಮುಂದುವರಿದರೆ ಆರೋಗ್ಯವಾಗಿ ಇರುತ್ತೇನೆ. ಇಲ್ಲದಿದ್ದರೆ, ಏರು ಪೇರಾಗಲಿದೆ ಎಂದು ಸಾಹಿತಿ ಬಿ.ಎಲ್.ವೇಣು ತಿಳಿಸಿದರು.

ಕೆಳಗೋಟೆಯ ಅವರ ನಿವಾಸದ ಮುಂಭಾಗ ಮಂಗಳವಾರ ಸೃಷ್ಟಿಸಾಗರ ಪ್ರಕಾಶನ, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದಿಂದ ನಡೆದ 80ನೇ ಜನ್ಮದಿನವನ್ನು ಸೇಹಿತರು, ಅಭಿಮಾನಿಗಳು, ಹಿತೈಷಿಗಳೊಟ್ಟಿಗೆ ಸರಳವಾಗಿ ಆಚರಿಸಿಕೊಂಡ ನಂತರ ಮಾತನಾಡಿದರು.

ನನ್ನ ಸಾಧನೆ ಸಾಸಿವೆ ಕಾಳಿನಷ್ಟು. ಆದರೆ, ಚಿತ್ರದುರ್ಗ ಮಾತ್ರವಲ್ಲದೆ, ಹೊರಗಿನ ಜನರ ಪ್ರೀತಿ-ವಿಶ್ವಾಸ ಬೆಟ್ಟದಷ್ಟಿದೆ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ ಎಂದರು.

ಪಾಳೆಗಾರರ ಕುರಿತು ಈಗಾಗಲೇ ಸಾಲು-ಸಾಲು ಕಾದಂಬರಿಗಳನ್ನು ಬರೆಯಲಾಗಿದೆ. ಆದರೆ, ದಲಿತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವುದು ನನಗೆ ತುಂಬಾ ಇಷ್ಟ. ಇದಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ಬಹುಮಾನ ಲಭಿಸಿವೆ ಎಂದು ಹೇಳಿದರು.

ಐತಿಹಾಸಿಕ ಕಾದಂಬರಿಗಳು ಹೆಚ್ಚಿನ ಮನ್ನಣೆ ಪಡೆದಿವೆ. ಇದ್ದರೊಟ್ಟಿಗೆ ಎಲ್ಲ ವರ್ಗಕ್ಕೂ ತಲುಪುವ ಕ್ಷೇತ್ರವಾದ ಸಿನಿಮಾ ರಂಗದಲ್ಲಿಯೂ ಕೆಲಸ ಮಾಡಿದ್ದೇನೆ. ಜನರ ಪ್ರೀತಿ ಸಿಗಲು ಇದು ಕೂಡ ಕಾರಣ ಎಂದರು.

ಕೂಡ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಮಾತನಾಡಿ, ವೇಣು ಅವರ ಉತ್ತಮ ಕಾದಂಬರಿಗಳನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡುವ ಮೂಲಕ ದೇಶಾದ್ಯಂತ ಜನಪ್ರಿಯತೆ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ವೇಣು ನಮ್ಮ ದುರ್ಗದ ಆಸ್ತಿ. ದೇವರು ಇಂತಹ ಉತ್ತಮ ಸಾಹಿತಿಗಳಿಗೆ ಹೆಚ್ಚಿನ ಆರೋಗ್ಯ ನೀಡಿದರೆ, ಅತ್ಯುತ್ತಮ ಕಥೆ, ಕಾದಂಬರಿಗಳು ಹೊರಬರಲಿವೆ ಎಂದರು.

ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ, ಮದಕರಿನಾಯಕ ವಿದ್ಯಾಸಂಸ್ಥೆ ಅಧ್ಯಕ್ಷ ಸಂದೀಪ್, ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲೂಕು ಅಧ್ಯಕ್ಷ ಪ್ರಶಾಂತ್, ಪತ್ರಕರ್ತರಾದ ಬಸವರಾಜು, ಕಿರಣ್, ಸಿದ್ಧರಾಜು, ಲಕ್ಷ್ಮಣ್, ಮಹೇಶ್‌ಬಾಬು, ಅಹೋಬಲಪತಿ, ಮೇಘಗಂಗಾಧರ ನಾಯ್ಕ್, ಹೆಂಜಾರಪ್ಪ, ಛಾಯಾಗ್ರಾಹಕರಾದ ಭವಾನಿ ಮಂಜುನಾಥ್, ಚಂದ್ರಪ್ಪ, ದ್ವಾರಕನಾಥ್, ಮುಖಂಡರಾದ ಡಿ.ಎನ್.ಮೈಲಾರಪ್ಪ, ಸಂಪತ್‌ಕುಮಾರ್, ಅಂಜಿನಪ್ಪ, ಪ್ರಹ್ಲಾದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net