ನನ್ನ ಪರವಾಗಿ ಹೇಳಿಕೆ ಕೊಡಲು ಹೇಳಿಲ್ಲ

yatnal mla
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಿಜೆಪಿಯಿಂದ ಉಚ್ಚಾಟಿತನಾಗಿರುವ ಕಾರಣಕ್ಕೆ ನನ್ನ ಪರವಾಗಿ ಹೇಳಿಕೆ ನೀಡುವಂತೆ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಲ್ಲಿ ನಾನು ವಿನಂತಿಸಿಕೊಂಡಿಲ್ಲ. ಕೆಲವರು ಶ್ರೀಗಳ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರು, ಯತ್ನಾಳ ಪರ ಹೇಳಿಕೆ ನೀಡಬಾರದು ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್​ನ ಪ್ರಮುಖ ಮುಖಂಡರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯತ್ನಾಳ, 6 ವರ್ಷಗಳ ಕಾಲ ನನ್ನನ್ನು ಬಿಜೆಪಿಯಿಂದ ಉಚ್ಚಾಟಿಸಲಾಗಿದೆ. ಇದನ್ನು ಖಂಡಿಸಿ ಹಿಂದುತ್ವದಲ್ಲಿ ನಂಬಿಕೆ ಇರುವವರು ಹಾಗೂ ಹಿಂದು ಸಮಾಜದ ಯುವಕರು ನನ್ನ ಪರವಾಗಿ ಹೋರಾಟ ಮಾಡುತ್ತಿದ್ದಾರೆ. ಬಿಜೆಪಿಗೆ ವಾಪಸ್ ಕರೆಯಿಸಿಕೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ. ನನ್ನ ರಾಜಕೀಯ ಉದ್ದೇಶಕ್ಕಾಗಿ ಶ್ರೀಗಳ ಹೆಸರನ್ನು ಎಂದಿಗೂ ಬಳಕೆ ಮಾಡಿಕೊಂಡಿಲ್ಲ ಎಂದರು.

10 ಕೋಟಿ ಆಫರ್

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೈಗೊಂಡಿದ್ದ ಪಾದಯಾತ್ರೆಯನ್ನು ಅರ್ಧಕ್ಕೆ ಮೊಟಕುಗೊಳಿಸುವಂತೆ ಹುಬ್ಬಳ್ಳಿಯ ಮಹಾನ್ ವಕೀಲರೊಬ್ಬರು ಹರಪನಹಳ್ಳಿಗೆ ಬಂದು ಶ್ರೀಗಳಿಗೆ ಮನವಿ ಮಾಡಿದ್ದರು. ಪಾದಯಾತ್ರೆ ಕೈ ಬಿಟ್ಟರೆ ಸರ್ಕಾರದಿಂದ ಮಠಕ್ಕೆ 10 ಕೋಟಿ ರೂ. ಕೊಡಿಸುವುದಾಗಿ ಆಫರ್ ಮಾಡಿದ್ದರು. ಶ್ರೀಗಳು ಪಾದಯಾತ್ರೆ ಮುಂದುವರಿಸಿದ್ದರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್​ನ ಪ್ರಮುಖ ಮುಖಂಡರು ಮಠದ 8 ಎಕರೆ ಆಸ್ತಿಯನ್ನು ಟ್ರಸ್ಟ್ ಹೆಸರಿಗೆ ಮಾಡಿಕೊಂಡು ಸ್ವಂತಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಮುತ್ತಿಗೆ ಹೋರಾಟ ನಡೆಸಿದಾಗ ಲಿಂಗಾಯತ ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆಸಿದ ಸರ್ಕಾರದ ಕ್ರಮದ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಧಾರವಾಡ ಹೈ ಕೋರ್ಟ್ ನೀಡಿರುವ ಆದೇಶವನ್ನು ಸ್ವಾಗತಿಸುತ್ತೇವೆ. ಅಂದು ಸರ್ಕಾರದಿಂದ ಕಾನೂನಿನ ಚೌಕಟ್ಟಿನಲ್ಲಿ ಲಾಠಿ ಚಾರ್ಚ್ ನಡೆದಿರಲಿಲ್ಲ. ಹೋರಾಟಗಾರರು ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿಯುಂಟು ಮಾಡಿರದಿದ್ದರೂ ಲಾಠಿ ಚಾರ್ಜ್ ಮಾಡಲಾಗಿತ್ತು. ನ್ಯಾಯಾಂಗ ತನಿಖೆಯಿಂದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವಾಗಲಿದೆ ಎಂದರು.

ಬಿಜೆಪಿಯಿಂದ ಉಚ್ಚಾಟಿತನಾದ ಬಳಿಕ ಕೆಲ ಕಾಂಗ್ರೆಸ್ ಮುಖಂಡರು ನನ್ನನ್ನು ಭೇಟಿಯಾಗಿದ್ದರು. ನನ್ನ ಹೆಣ, ಚಪ್ಪಲಿ ಸಹ ಕಾಂಗ್ರೆಸ್​ಗೆ ಹೋಗುವುದಿಲ್ಲ. ಹೊಸ ಪಕ್ಷ ಕಟ್ಟುವುದು ಎಷ್ಟು ಸುಲಭವಲ್ಲ. ದಿ. ಬಂಗಾರಪ್ಪ, ಬಿಎಸ್​ವೈ, ಶ್ರೀರಾಮುಲು, ಜನಾರ್ದನ ರೆಡ್ಡಿ ಪಕ್ಷ ಕಟ್ಟಿರುವುದನ್ನು ನೋಡಿದ್ದೇನೆ. ನಾನು ದಡ್ಡನಲ್ಲ. ಬಿಜೆಪಿಗೆ ವಾಪಸ್ ಕರೆಯಿಸಿಕೊಳ್ಳಿ ಎಂದು ದುಂಬಾಲು ಬೀಳುವ ಜಾಯಮಾನ ನನ್ನದಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಾನು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗಬಹುದು. ಬಿ.ವೈ. ವಿಜಯೇಂದ್ರ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net