

ಚಿಕ್ಕಮಗಳೂರು
ಸಭೆ, ಸಮಾವೇಶ ನಡೆಸಿ ನನ್ನ ಪರವಾಗಿ ಮಾತನಾಡಬೇಕು ಎಂಬ ಸಂದರ್ಭ ಬರುತ್ತದೆ ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ ನನ್ನ ಪರವಾಗಿ ಯಾವುದೇ ಸಮಾವೇಶ ನಡೆಸಬೇಡಿ ಎಂದು ಎಲ್ಲರಲ್ಲಿಯೂ ವಿನಂತಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
ಬಾಳೆಹೊನ್ನೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಜಾತಿ ಸಮಾವೇಶ ಮಾಡುವುದರಿಂದ ಪಕ್ಷಕ್ಕೆ ಲಾಭವಾಗುವುದಿಲ್ಲ. ಎಲ್ಲವನ್ನೂ ಪಕ್ಷದ ಕೇಂದ್ರ ನಾಯಕರು ಗಮನಿಸುತ್ತಿದ್ದಾರೆ. ಎಲ್ಲವೂ ಶೀಘ್ರದಲ್ಲೇ ಸರಿಯಾಗಲಿದೆ ಎಂದರು.
ಕಾAಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದಲೂ ಶಾಸಕರ ಕ್ಷೇತ್ರದ ಅಭಿವೃದ್ಧಿಗೆ ಸೂಕ್ತ ಅನುದಾನ ನೀಡಿಲ್ಲ. ಹೀಗಾಗಿ ಶಾಸಕರು ಅಸಹಾಯಕರಾಗಿದ್ದಾರೆ. ತಾವು ಆಡಳಿತ ಪಕ್ಷದವರೆಂದು ಹೇಳಿಕೊಂಡು ಓಡಾಡುವುದೇ ಕಷ್ಟವಾಗಿದೆ ಎಂದು ಕೆಲ ಶಾಸಕರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಶಾಲೆ, ರಸ್ತೆ, ಆಸ್ಪತ್ರೆ ಕೂಡ ಕೊಡದಿರುವ ಸ್ಥಿತಿ ಸರ್ಕಾರಕ್ಕಿದೆ. ಇಂಥ ಸರ್ಕಾರವನ್ನು ಜನ ನೋಡುತ್ತಿರುವುದು ಇದೇ ಮೊದಲು ಎಂದು ಹೇಳಿದರು.
ಶ್ರೀ ರಂಭಾಪುರಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ. ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಜಗದ್ಗುರುಗಳಿಗೆ ಸಾಕಷ್ಟು ಕಾಳಜಿಯಿದೆ. ಹೀಗಾಗಿಯೇ ಗುರುಗಳು ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿದ್ದಾರೆ ಎಂದರು.
ರನ್ಯಾ ರಾವ್ ಚಿನ್ನ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂದು ಹಿರಿಯರು ಹೇಳಿದ್ದಾರೆ. ಈಕೆ ಹಿರಿಯ ಅಧಿಕಾರಿಯ ಮಗಳು. ಸಚಿವರೊಬ್ಬರ ಬಲ ಇದೆ ಎನ್ನುವುದು ಇನ್ನೊಂದು ವಿಚಾರ. ಹೀಗಾಗಿ ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.