

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ನನ್ನ ಜೀವನ ನನ್ನ ಸ್ವಚ್ಛ ನಗರ ಕಾರ್ಯಕ್ರಮಕ್ಕೆ ಮುಖ್ಯಾಧಿಕಾರಿ ನಾಚಪ್ಪ ಚಾಲನೆ ನೀಡಿದರು.
ಪಟ್ಟಣ ನಿವಾಸಿಗಳು, ಸಾರ್ವಜನಿಕರು, ಅನುಪಯುಕ್ತ ವಸ್ತುಗಳನ್ನು ಜೇಸಿ ವೇದಿಕೆಯಲ್ಲಿ ಸ್ಥಾಪಿಸಿರುವ ಕೇಂದ್ರಕ್ಕೆ ತಂದು ಕೊಡಬೇಕು. ಉತ್ತಮ ಪುಸ್ತಕಗಳಿದ್‌ದರೆ ಲೈಬ್ರರಿಗೆ, ಬಳಕೆಗೆ ಯೋಗ್ಯವಾದ ಬಟ್ಟೆಗಳಿದ್ದರೆ ಅನಾಥಶ್ರಮಗಳಿಗೆ ನೀಡಲಾಗುತ್ತದೆ ಎಂದು ನಾಚಪ್ಪ ಹೇಳಿದರು.
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ತ್ಯಾಜ್ಯದ ಪ್ರಮಾಣ ಕಡಿತಗೊಳಿಸುವುದು (ರೆಡ್ಯೂಸ್), ತ್ಯಾಜ್ಯದ ಮರುಬಳಕೆ(ರೀಯೂಸ್), ತ್ಯಾಜ್ಯವನ್ನು ಮರು ಉಪಯೋಗ (ರೀಸೈಕಲ್) ಮಾಡಬಹುದಾಗಿದೆ. ಮೇ 20 ರಿಂದ ಜೂ.5 ರವರೆಗೆ ಬೆಳಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗೆ ಈಗಾಗಲೇ ಜೇಸಿ ವೇದಿಕೆಯಲ್ಲಿ ಸ್ಥಾಪಿಸಿರುವ ಕೇಂದ್ರ ಮತ್ತು ವಾಹನಕ್ಕೆ ಸಾರ್ವಜನಿಕರು ವಸ್ತುಗಳನ್ನು ನೀಡಬೇಕು ಎಂದು ಮನವಿ ಮಾಡಿದರು.
ಉಪಯೋಗಿಸಿದ ಪ್ಲಾಸ್ಟಿಕ್ ಸಾಮಗ್ರಿಗಳು, ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಮಕ್ಕಳ ಪ್ಲಾಸ್ಟಿಕ್ ಆಟಿಕೆಗಳು, ಬಟ್ಟೆಗಳು, ಹಳೇ ಜೀನ್ಸ್, ಯೂನಿ ಫಾರಂ, ಸೀರೆಗಳು, ಬಟ್ಟೆಗಳು, ಚಪ್ಪಲಿ, ಶೂಗಳು, ನ್ಯೂಸ್ ಪೇಪರ್, ಹಳೇ ಪುಸ್ತಕಗಳು ಮತ್ತಿತರ ಎಲೆಕ್ಟ್ರಿಕಲ್ ಸಾಮಗ್ರಿಗಳನ್ನು ಸಾರ್ವಜನಿಕರು ನೀಡಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಡಿಜಿಟಲ್ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯರಾದ ಪಿ.ಕೆ.ಚಂದ್ರು, ಶೀಲಾ ಡಿಸೋಜ, ಬಿ.ಆರ್.ಮಹೇಶ್, ಮೃತ್ಯುಂಜಯ, ಮೋಹಿನಿ ಇದ್ದರು.