ನನ್ನ ಗೆಲುವು ಕಾರ್ಯಕರ್ತರು, ಮತದಾರರಿಗೆ ಅರ್ಪಣೆ

23 NMG 01 (2)
Published on

ನಾಗಮಂಗಲ: ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಸೇರಿದಂತೆ ನಾಗಮಂಗಲ ವಿಧಾನಸಭಾ ಕ್ಷೇತ್ರದ ಮುಖಂಡ ಹಾಗೂ ಕಾರ್ಯಕರ್ತರು ಹಠಕ್ಕೆ ಬಿದ್ದು ಶ್ರಮಿಸಿದ ಫಲವಾಗಿ ನನಗೆ ಗೆಲುವಾಗಿದೆ. ಈ ಗೆಲುವನ್ನು ಪ್ರತಿಯೊಬ್ಬ ಕಾರ್ಯಕರ್ತ ಹಾಗೂ ಕ್ಷೇತ್ರದ ಮತದಾರರಿಗೆ ಅರ್ಪಿಸುತ್ತೇನೆ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಹೇಳಿದರು.


ತಾಲೂಕಿನ ಬೆಳ್ಳೂರು ಕ್ರಾಸ್ ಹಾಗೂ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕರ್ತರ ಕೃತಜ್ಞತಾ ಸಭೆಯಲ್ಲಿ ಮಾತನಾಡಿ,ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಅಧಿಕಾರ ಹಿಡಿಯಲು ರಾಜ್ಯದ ತುಂಬಾ ಹತ್ತಾರು ಬಾರಿ ತಮ್ಮ ರಾಷ್ಟ್ರೀಯ ನಾಯಕರನ್ನು ಕರೆಸಿ ಸುತ್ತಾಡಿಸಿದರು. ಜೆಡಿಎಸ್‌ನವರು ಪಂಚರತ್ನಯಾತ್ರೆ ಎಂದು ಇಡೀ ರಾಜ್ಯವನ್ನು ಸುತ್ತಿದರು. ಆದರೆ ನಮ್ಮ ಪಕ್ಷದಲ್ಲಿ ಯಾವ ನಾಯಕರೂ ಅವರ ರೀತಿ ಮಾಡದಿದ್ದರೂ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಶ್ರಮ ಹಾಕುವ ಮೂಲಕ ರಾಜ್ಯದಲ್ಲಿ 135 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಈ ಬಾರಿ 150 ಸ್ಥಾನಗಳು ಬರಬೇಕಿತ್ತು. ಆ

ದರೆ ಕೆಲವು ಕಾರಣ ಹಾಗೂ ನಮ್ಮ ಕೆಲವು ತಪ್ಪುಗಳಿಂದ 135 ಸ್ಥಾನಗಳಿಗೆ ತೃಪ್ತಿಪಟ್ಟು ಕೊಳ್ಳುವಂತಾಗಿದೆ ಎಂದರು.
ನಮ್ಮ ಗ್ಯಾರಂಟಿಗಳನ್ನು ಚುನಾವಣೆಯ ಸಂದರ್ಭದಲ್ಲಿ ಕೆಲವರು ನಂಬುತ್ತಿರಲಿಲ್ಲ. ಆದರೆ ಈಗ ಅದರ ಪರಿಣಾಮ ತಿಳಿಯಲಿದೆ. ಮತದಾನದಂದು ಬೆಂಗಳೂರು, ಮುಂಬೈ, ಮೈಸೂರು ಮುಂತಾದ ನಗರಗಳಿಂದ ಬಂದು ಮತ ಹಾಕುವ ಮೂಲಕ ನನ್ನನ್ನು ಗೆಲ್ಲಿಸಿದ್ದಾರೆ. ಆದ್ದರಿಂದ ಈ ಗೆಲುವು ಕಾರ್ಯಕರ್ತರು ಹಾಗೂ ಮತದಾರರಿಗೆ ಸಲ್ಲಬೇಕು ಎಂದರು.

ಗುಪ್ತಚರ ವರದಿ ಸುಳ್ಳು ಮಾಡಿದ ಮತದಾರ:ಇಡೀ ಜಿಲ್ಲೆಯಲ್ಲಿ ಮಳವಳ್ಳಿ ಮಾತ್ರ ಕಾಂಗ್ರೆಸ್ ಗೆಲ್ಲಲಿದ್ದು, ಉಳಿದೆಡೆ ಜೆಡಿಎಸ್ ಗೆಲ್ಲಲಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿತ್ತು. ಆದರೆ ಈ ಬಾರಿ 7 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲ್ಲಲಿದೆ ಎಂದು ನನಗೆ ನಂಬಿಕೆಯಿತ್ತು. ಮತದಾನದ ನಂತರವೂ ಮಳವಳ್ಳಿ ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಮಾಹಿತಿ ನೀಡಿದ್ದರು. ಆ ವರದಿ ನನ್ನ ಬಳಿಯಿದೆ. ಅವರ ವರದಿಯನ್ನು ಸುಳ್ಳು ಮಾಡುವ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಸಾಹಸ ತೋರಿರುವುದು ನನ್ನ ಗೆಲುವಿಗೆ ಸಹಕಾರಿಯಾಗಿದೆ. ಗುಪ್ತಚರ ಇಲಾಖೆಯವರು ಯಾವ ರೀತಿ ಸರ್ವೆ ಮಾಡುತ್ತಾರೆ ಎಂಬುದು ಇದರಿಂದ ತಿಳಿಯಲಿದೆ ಎಂದು ಅಸಮಾಧಾನವ್ಯಕ್ತಪಡಿಸಿದರು.


ಈ ಸಂದರ್ಭ ಕಾರ್ಯಕರ್ತರು, ಮುಖಂಡರು ಶಾಸಕ ಚಲುವರಾಯಸ್ವಾಮಿಗೆ ಹಾರ, ಶಾಲು ಹಾಕಿ ಅಭಿನಂದಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಸುನೀಲ್ ಲಕ್ಷ್ಮೀಕಾಂತ್, ರಾಜೇಗೌಡ, ನರಸಿಂಹಮೂರ್ತಿ, ಎಚ್.ಟಿ.ಕೃಷ್ಣೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net