ನನ್ನ ಕ್ಷೇತ್ರಕ್ಕೆ ಬಿಎಸ್‌ವೈ ಕೊಡುಗೆ ಅಪಾರ

HLK
Published on

ಚಿತ್ರದುರ್ಗ: ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪ ಈ ಹಿಂದೆ ರಾಜ್ಯದ ಸಿಎಂ ಆಗಿದ್ದಾಗ 660 ಕೋಟಿ ರೂ. ಅನುದಾನ ನೀಡಿದ್ದರ ಫಲವಾಗಿ ತಾಲೂಕಿನಾದ್ಯಂತ ಎಲ್ಲ ಕೆರೆಗಳಿಗೆ ನೀರುಣಿಸಲು ಸಹಕಾರಿಯಾಯಿತು. ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಹೊಳಲ್ಕೆರೆ ಶಾಸಕ ಡಾ.ಎಂ. ಚಂದ್ರಪ್ಪ ಹೇಳಿದರು.

ಕ್ಷೇತ್ರದ ನವಣೆಕೆರೆ ಗ್ರಾಮದಲ್ಲಿ 1 ಕೋಟಿ ರೂ.ವೆಚ್ಚದ ನೂತನ ಡಾಂಬರ್ ರಸ್ತೆ, ಬಿ.ದುರ್ಗ ಗ್ರಾಮದ ಸಮೀಪ ಹಳ್ಳಕ್ಕೆ 2 ಕೋಟಿ ರೂ. ವೆಚ್ಚದ ನೂತನ ಚೆಕ್ ಡ್ಯಾಂ ಮತ್ತು ಬ್ರಿಡ್ಜ್ ಕಂ ಬ್ಯಾರೇಜ್, 1 ಕೋಟಿ ರೂ. ವೆಚ್ಚದಲ್ಲಿ ಕೆರೆ ಅಭಿವೃದ್ದಿ, ಹುಲ್ಲೇಹಾಳ್ ಗ್ರಾಮದಲ್ಲಿ 1.5 ಕೋಟಿ ರೂ. ವೆಚ್ಚದ ನೂತನ ಕೆರೆ ನಿರ್ಮಾಣ ಕಾಮಗಾರಿಗಳಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಜನಸೇವೆಯಲ್ಲೇ ಜನಾರ್ದನನನ್ನು ಕಾಣುತ್ತಿರುವ ಕಾರಣ ಕ್ಷೇತ್ರದ ಜನರ ಬೆಂಬಲದಿಂದ ಶಾಸಕನಾಗುತ್ತಿದ್ದೇನೆ. ಕೊನೆ ಉಸಿರು ಇರುವವರೆಗೂ ಅಭಿವೃದ್ಧಿ ಕಾರ್ಯಗಳ ಮೂಲಕ ಋಣ ತೀರಿಸುತ್ತೇನೆ ಎಂದರು.

ಕ್ಷೇತ್ರದ 493 ಹಳ್ಳಿಗಳಲ್ಲೂ ಹುಡುಕಿ ಬಹುತೇಕ ಅಭಿವೃದ್ಧಿ ಕಾರ್ಯ ಮಾಡಿಸುತ್ತಿದ್ದೇನೆ. ಎಚ್.ಡಿ. ದೇವೇಗೌಡರು, ಜೆ.ಎಚ್. ಪಟೇಲ್ ಅವರು ಸಿಎಂ ಆಗಿದ್ದ ವೇಳೆ ನೌಕರರಿಗೆ ವೇತನ ನೀಡಲು ಕಷ್ಟಕರವಾಗಿತ್ತು. ಅಂತಹ ಸಂದರ್ಭದಲ್ಲೂ ಅನುದಾನ ಮಂಜೂರು ಮಾಡಿಸಿಕೊಂಡು ಬರುತ್ತಿದ್ದೆ ಎಂದರು.

ಸರ್ಕಾರ ಯಾವುದೇ ಇರಲಿ ಅನುದಾನ ಮಂಜೂರು ಮಾಡಿಸಿಕೊಂಡು ಬರುವುದು ನನ್ನ ಕರ್ತವ್ಯ. ಕಾಮಗಾರಿಗಳು ಉತ್ತಮ ಗುಣಮಟ್ಟದಲ್ಲಿ ನಡೆಯುತ್ತಿದೆಯೋ ಇಲ್ಲವೋ ಎಂಬುದನ್ನು ಗ್ರಾಮಸ್ಥರು ವೀಕ್ಷಿಸಿ, ನನ್ನ ಗಮನಕ್ಕೆ ತನ್ನಿ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಎಂ.ಬಿ. ಸಿದ್ದೇಶ್, ಶೈಲೇಶ್, ಮುಖಂಡರಾದ ಕುಮಾರಣ್ಣ, ಜಗದೀಶ್, ಮಹಲಿಂಗಣ್ಣ, ಚಂದ್ರಣ್ಣ, ನುಲೇನೂರು ಶೇಖರ್, ಮರುಳಸಿದ್ದಪ್ಪ, ರುದ್ರಗೌಡ್ರು, ಡಿ.ಸಿ. ಮೋಹನ್, ಸ್ವಾಮಿ, ಮಹಾಂತೇಶ್, ಷಣ್ಮುಖಪ್ಪ, ಗುತ್ತಿಗೆದಾರ ರಾಜಶೇಖರ್, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್‌ಗಳಾದ ಆನಂದಪ್ಪ, ನವೀನ್, ಗ್ರಾಪಂ ಅಧ್ಯಕ್ಷೆ ಅನಿತಾ ನಾಗರಾಜ್, ಉಪಾಧ್ಯಕ್ಷೆ ನಿರ್ಮಲಾ, ಸದಸ್ಯರಾದ ರೂಪಾ, ರುದ್ರೇಶ್, ಬಸವರಾಜ್, ಕವಿತಾ, ತಾಪಂ ಮಾಜಿ ಸದಸ್ಯರಾದ ಕಲ್ಲೇಶ್, ಮೋಹನ್, ರಾಜಣ್ಣ, ಸತೀಶ್, ತಿಪ್ಪಣ್ಣ, ರೈತ ಮುಖಂಡ ನಾರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net