ನನ್ನ ಕ್ಷೇತ್ರಕ್ಕೆ 59 ಲಕ್ಷ ರೂ. ಪರಿಹಾರ ಬಿಡುಗಡೆಯಾಗಿಲ್ಲ: ಎಚ್.ಡಿ. ರೇವಣ್ಣ

HD Revanna
Published on

ಹಾಸನ: ಅತಿವೃಷ್ಟಿಯಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 59 ಲಕ್ಷ ರೂ.ಗೂ ಅಧಿಕ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಇದನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದೇನೆ ಎಂದು ಸಚಿವ ರಾಜಣ್ಣ ಅವರ ಹೇಳಿಕೆಗೆ ಮಾಜಿ ಸಚಿವ ಎಚ್. ಡಿ ರೇವಣ್ಣ ತಿರುಗೇಟು ನೀಡಿದರು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಬುಧವಾರ ಸುದ್ದಿಗೋಷ್ಠಿ ನಡೆಸಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬಡವರಿಗೆ ಪರಿಹಾರದ ಹಣ ಬಿಡುಗಡೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದೆ ಆದರೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವರು ಪರಿಹಾರದ ಬಗ್ಗೆ ದಾಖಲೆ ಸಮೇತ ಹೇಳಲಿ ಎಂದು ಹೇಳಿಕೆ ನೀಡಿದ್ದರು, ಇದಕ್ಕೆ ಉತ್ತರಿಸಿದ ರೇವಣ್ಣ ನನ್ನ ಕ್ಷೇತ್ರದಲ್ಲಿ ಶಾಂತಿಗ್ರಾಮ ಮತ್ತು ದುದ್ದ ಹೋಬಳಿಗೆ 23.40 ಲಕ್ಷ ರೂ. ಹೊಳೆನರಸಿಪುರ ತಾಲೂಕಿಗೆ 36 ಲಕ್ಷ ರೂ. ಸೇರಿ ಒಟ್ಟು 59.40 ಲಕ್ಷ ರೂ. ಪರಿಹಾರದ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಸಚಿವರಿಗೆ ದಾಖಲೆ ಸಮೇತ ನನ್ನ ಕ್ಷೇತ್ರದಲ್ಲಿ ಬರ ಪರಿಹಾರ ವಿತರಣೆಯಲ್ಲಿ ಆಗಿರುವಂತಹ ಅನ್ಯಾಯದ ಬಗ್ಗೆ ದಾಖಲೆ ನೀಡಿದ್ದೇನೆ. ತಕ್ಷಣವೇ ಈಗಲಾದರೂ ಪರಿಹಾರದ ಹಣವನ್ನು ಬಿಡುಗಡೆ ಮಾಡಲಿ ಇದರ ಜತೆಗೆ ಹಾಸನ ತಾಲೂಕಿಗೆ 2.47 ಕೋಟಿ ರೂ. ಪರಿಹಾರದ ಹಣ ಬಿಡುಗಡೆಯಾಗಬೇಕು. ಇನ್ನುಳಿದ ತಾಲೂಕುಗಳಿಗೂ ಕೂಡ ಸರಿಯಾದ ರೀತಿ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 398 ಹೆಕ್ಟೇರ್ ಪ್ರದೇಶದಲ್ಲಿ 1353 ರೈತರ 36 ಲಕ್ಷ ಪರಿಹಾರದ ಹಣ ಬರಬೇಕಾಗಿದೆ. ಅದೇ ರೀತಿ ತೋಟಗಾರಿಕೆ ಇಲಾಖೆಯಲ್ಲಿ 85.6 ಹೇಕ್ಟರ್‌ನಲ್ಲಿ 492 ರೈತರ ಬೆಳೆ ನಷ್ಟವಾಗಿದೆ 21.40 ಲಕ್ಷ ಪರಿಹಾರದ ಹಣ ಬರಬೇಕಾಗಿದೆ ಇಷ್ಟು ದಾಖಲೆ ಸಾಕಲ್ಲವೆ? ಬಡವರು, ರೈತರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ನಾನು ಸುದ್ದಿಗೋಷ್ಠಿಯಲ್ಲಿ ಪರಿಹಾರದ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಮತ್ತು ಉಪನ್ಯಾಸಕರ ಕೊರತೆ ಇದ್ದು ಇದನ್ನು ತಕ್ಷಣವೇ ಭರ್ತಿ ಮಾಡಬೇಕು ಎಂದು ಹೇಳಿದ್ದೆ. ಆದರೆ ಸಚಿವರು ಇದಕ್ಕೆ ಸಾಕ್ಷಿ ಕೇಳಿರುವುದು ನಿಜಕ್ಕೂ ಖಂಡನೀಯ ಟಾಂಗ್ ನೀಡಿದರು.
ಜಿಲ್ಲಾ ಮಂತ್ರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಜಿಲ್ಲೆಗೆ ಯಾವೆಲ್ಲ ಅನುದಾನಗಳು ಬರಬೇಕು ಮತ್ತು ಪರಿಹಾರದ ಹಣ ಬರಬೇಕು ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡಲಿ. ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ ಅವರ ನೆರವಿಗೆ ಸರ್ಕಾರ ಭಾವಿಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಪೊಲೀಸರ ವಿಫಲ
ನಾಗಮಂಗಲದಲ್ಲಿ ಗಣಪತಿ ಉತ್ಸವದ ಸಂದರ್ಭದಲ್ಲಿ ಉಂಟಾಗಿರುವ ಗಲಾಟೆಗೆ ಸ್ಥಳೀಯ ಪೊಲೀಸರ ವೈಫಲ್ಯವೇ ಕಾರಣ. ಅಲ್ಲಿ ಎರಡು ಸಮಾಜದ ಮುಖಂಡರನ್ನು ಕರೆದು ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕಾಗಿತ್ತು. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ರೇವಣ್ಣ ಆರೋಪಿಸಿದರು

ಕಾಂಗ್ರೆಸ್‌ನಿಂದ ಮುಸ್ಲಿಂ ಸಮುದಾಯ ಕಡಗಣನೆ
ಕಾಂಗ್ರೆಸ್ ಪಕ್ಷ ಕೇವಲ ಮುಸಲ್ಮಾನರನ್ನು ವೋಟ್ ಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಾರೆ. ನಂತರ ಅವರನ್ನು ಕಡೆಗಣಿಸಲಾಗುತ್ತದೆ. ಹೊಳೆನರಸೀಪುರ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕು ಮಟ್ಟದ ಅಧಿಕಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದು ಆತನನ್ನು ಆರು ತಿಂಗಳಲ್ಲಿ ವರ್ಗಾವಣೆ ಮಾಡಲಾಗಿದೆ. ಆತನ ಮೇಲೆ ಯಾವುದೇ ರೀತಿ ಆಪಾದನೆ ಇಲ್ಲದಿದ್ದರೂ ಕೂಡ ವರ್ಗಾವಣೆ ಮಾಡಲಾಗಿದೆ. ಮುಸಲ್ಮಾನರನ್ನು ರಕ್ಷಣೆ ಮಾಡುತ್ತೇವೆ ಎಂದು ಹೇಳುವ ಕಾಂಗ್ರೆಸ್ ಪಕ್ಷ ಅಧಿಕಾರಿಗಳನ್ನು ಏಕೆ ವರ್ಗಾವಣೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net