ನನ್ನ ಕೆಲಸ ಇಷ್ಟವಾದರೆ ಗೆಲ್ಲುತ್ತೇನೆ ; ಪ್ರೀತಂ ಜೆ ಗೌಡ.

ನನ್ನ ಕೆಲಸ ಇಷ್ಟವಾದರೆ ಗೆಲ್ಲುತ್ತೇನೆ ; ಪ್ರೀತಂ ಜೆ ಗೌಡ.
Published on

ಹಾಸನ: ‘ಕ್ಷೇತ್ರದ ಜನರಿಗೆ ಕಳೆದ ಐದು ವರ್ಷಗಳಿಂದ ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳು ಇಷ್ಟವಾದರೆ ನನಗೆ ಮತ ಹಾಕುತ್ತಾರೆ; ಇಲ್ಲ ಹಾಸನ ಕ್ಷೇತ್ರಕ್ಕೆ ಹಿಂದೆ ರೇವಣ್ಣನವರು ಮಾಡಿದ್ದ ಅಭಿವೃದ್ಧಿಯೇ ಸರಿ, ಈಗಿನದು ಸರಿ ಇಲ್ಲ ಎಂದರೆ ಅವರ ಪಕ್ಷವನ್ನು ಬೆಂಬಲಿಸುತ್ತಾರೆ. ಎಲ್ಲವೂ 2023ರ ವಿಧಾನ ಸಭಾ ಚುನಾವಣೆ ಎಂಬ ಅಗ್ನಿಪರೀಕ್ಷೆಯಲ್ಲಿ ತೀರ್ಮಾನವಾಗಲಿದೆ. ನಾನಂತು ಪರೀಕ್ಷೆಗೆ ತಯಾರಾಗಿದ್ದೇನೆ’ ಎಂದು ಶಾಸಕ ಪ್ರೀತಂಗೌಡ ನುಡಿದರು.


ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಅಂಗವಾಗಿ ನಗರದ ಹೇಮಾವತಿ ಪ್ರತಿಮೆ ಬಳಿ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಗರದಲ್ಲಿ ನಡೆದ ದಿವಂಗತ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಲೇಔಟ್ ಮಾಡುವುದೇ ಅಭಿವೃದ್ಧಿ ಅಲ್ಲ ಎಂಬುದಾಗಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯೆ ನೀಡಿದರು.


ಜೆಡಿಎಸ್ ಆಡಳಿತ ಅವಧಿಯಲ್ಲಿ ಅವರಿಗೆ ಇಷ್ಟ ಬಂದಂತೆ ಅಭಿವೃದ್ಧಿ ಮಾಡಿದ್ದಾರೆ. ಇದೀಗ ನಾನು ನನ್ನ ಪರಿಮಿತಿಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅವರು ಅಭಿವೃದ್ಧಿ ಮಾಡಿರುವುದನ್ನು ಜನ ಒಪ್ಪಿದರೆ ಅವರಿಗೆ ಮತ ಹಾಕುತ್ತಾರೆ. ನಾನು ಮಾಡಿರುವ ಕೆಲಸಕ್ಕೆ ಜನ ತೃಪ್ತರಾಗಿದ್ದರೆ ನನಗೆ ಮತ ನೀಡುತ್ತಾರೆ. ಅದಕ್ಕಾಗಿಯೇ 5 ವರ್ಷಗಳಿಗೊಮ್ಮೆ ಚುನಾವಣೆ ಎಂಬ ಪರೀಕ್ಷೆ ಇರುವುದು. 2023 ರ ಚುನಾವಣೆ ಫಲಿತಾಂಶ ಎಲ್ಲವನ್ನೂ ನಿರ್ಧರಿಸಲಿದೆ ಎಂದರು.


ಕುಮಾರಸ್ವಾಮಿ ಅವರು ಒಂದಲ್ಲ, ಎರಡಲ್ಲ, ಮೂರು ಬಾರಿ ಹಾಸನಕ್ಕೆ ಬರಲಿ. ಮುಂದಿನ ಸಲ ಬರುವಷ್ಟರೊಳಗೆ ಅವರ ಸಲಹೆಗಳನ್ನು ಜಾರಿಗೆ ತರುವ ಪ್ರಯತ್ನ ಮಾಡುತ್ತೇನೆ. ಮುಂದಿನ ಸಲ ಬಂದಾಗ ಕುಮಾರಸ್ವಾಮಿ ಅವರು ನೀಡಿದಂತಹ ಸಲಹೆಯನ್ನು ಸಹ ಸ್ವೀಕಾರ ಮಾಡುತ್ತೇನೆ ಎಂದರು.


ನನ್ನ ವಿರುದ್ಧ ಸ್ಪರ್ಧಿಸುವಂತೆ ನಾನು ಯಾರಿಗೂ ಯಾವಾಗಲೂ ಆಹ್ವಾನ ಮಾಡಿಲ್ಲ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಅವರು ಮೂಗು ತೂರಿಸಿದ್ದರಿಂದ ನನ್ನ ಕ್ಷೇತ್ರದಲ್ಲಿ ಅಷ್ಟೊಂದು ಆಸಕ್ತಿ ಇದ್ದರೆ ಬಂದು ಚುನಾವಣೆಗೆ ನಿಂತು ಎದುರಿಸಲಿ ಎಂದು ಪ್ರತಿಕ್ರಿಯೆ ನೀಡಿದ್ದೇನೆ. ಅದನ್ನೇ ಜೆಡಿಎಸ್‌ನವರು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಯಾರೇ ಸ್ಪರ್ಧೆ ಮಾಡಿದರು ನನಗೆ ಸಂತಸ ಎಂದರು.


ಎಚ್.ಪಿ. ಸ್ವರೂಪ ಅವರಿಗೆ ವಯಸ್ಸಿದೆ, ಅವರಿಗೆ ಅವಕಾಶ ಮಾಡಿಕೊಡಲಿ, ಇಲ್ಲವಾದರೆ ಅವರಿಗೆ ಬೇರೆ ಕ್ಷೇತ್ರವನ್ನಾದರೂ ಕೊಡಲಿ. ಹಾಸನ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಅವರಿಬ್ಬರೂ ಕೂತು ತೀರ್ಮಾನ ಕೈಗೊಳ್ಳಲಿ. ಕ್ರಿಕೆಟ್ ಪಂದ್ಯದಲ್ಲಿ ಯಾರು ಫಸ್ಟ್ ಬ್ಯಾಂಟಿಂಗ್ ಮಾಡಿದರು ಎಂಬುದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವುದಿಲ್ಲ. ನಮ್ಮ ಬ್ಯಾಟಿಂಗ್ ಸರದಿಯಲ್ಲಿ ಹೆಚ್ಚಿನ ರನ್ ಗಳಿಸುವುದು ಮುಖ್ಯ. ಅವರು ವಿಕೆಟ್ ಕೆಡವುತ್ತಾರೊ, ಅಥವಾ ವೈಡ್ ಬಾಲ್ ಹಾಕಿ ನಮಗೆ ಹೆಚ್ಚಿನ ರನ್ ನೀಡುತ್ತಾರೋ ಎಂಬುದನ್ನು ಕಾದು ನೋಡಿ. ಒಟ್ಟಿನಲ್ಲಿ 2023 ರ ಚುನಾವಣೆಯಲ್ಲಿ ಈ ಪ್ರೀತಂಗೌಡ ಮತ್ತೆ ಶಾಸಕನಾಗಿ ಪುನರಾಯ್ಕೆ ಆಗುವುದು ಶತಸಿದ್ಧ ಎಂದು ಮಾರ್ಮಿಕವಾಗಿ ನುಡಿದರು.

ಎಚ್‌ಡಿಕೆ ನನ್ನ ಹಿತೈಷಿ:
ಎಚ್.ಡಿ. ಕುಮಾರಸ್ವಾಮಿ ಅವರ ನನ್ನ ಹಿತೈಷಿ, ನಮ್ಮ ಸಮುದಾಯದ ಹಿರಿಯರು ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು. ನನ್ನ ಮೇಲೆ ಅವರಿಗೆ ಪ್ರೀತಿ ಹಾಗೂ ಕಾಳಜಿ ಇದೆ. ಅವರು ನನ್ನ ಬಗ್ಗೆ ಏನೇ ಮಾತನಾಡಿದರೂ ಅದನ್ನು ಆಶೀರ್ವಾದ ಎಂದು ಭಾವಿಸುತ್ತೇನೆ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಲ್ಲ ಎಂದರು.


ರಾಜಕೀಯ ಹೊರತುಪಡಿಸಿ ವೈಯಕ್ತಿಕವಾಗಿ ಎಚ್.ಡಿ. ಕುಮಾರಸ್ವಾಮಿ ಹಾಗೂ ನನ್ನ ನಡುವಿನ ಸಂಬಂಧ ಬಹಳ ಚೆನ್ನಾಗಿದೆ. ಬೇರೆಯವರು ಯಾರೋ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿರಬಹುದು. ಸ್ವಾಭಾವಿಕವಾಗಿ ಸ್ಥಳೀಯರು ನೀಡಿರುವ ತಪ್ಪು ಮಾಹಿತಿ ಆಧಾರದಲ್ಲಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಲು ನನ್ನ ವಿರುದ್ಧ ಟೀಕೆ ಮಾಡಿರಬಹುದು. ಸದನದಲ್ಲಿ ನೇರವಾಗಿ ಅವರ ಜೊತೆ ಮಾತನಾಡಿ ಮನವರಿಕೆ ಮಾಡುವೆ ಎಂದು ನುಡಿದರು.

ರೇವಣ್ಣ ಅವರಿಗೆ ಶಕ್ತಿ ಇಲ್ಲವೇ?
ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿಯನ್ನು ತಾವೇ ಖುದ್ದು ವಹಿಸಿಕೊಳ್ಳುವುದಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ, ಏಕೆ ಎಚ್.ಡಿ. ರೇವಣ್ಣ ಅವರ ಶಕ್ತಿ ಕುಂದಿದಿಯೇ ಎಂದು ಪ್ರಶ್ನಿಸಿದರು.


ಎಚ್.ಡಿ. ರೇವಣ್ಣ ಅವರು ಸಚಿವರಗಿದ್ದವರು, ಈಗ ಅವರ ಒಬ್ಬ ಪುತ್ರ ಪ್ರಜ್ವಲ್ ಸಂಸದರಾಗಿದ್ದಾರೆ, ಮತ್ತೊಬ್ಬ ಪುತ್ರ ಸೂರಜ್ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಈ ಶಕ್ತಿ ರೇವಣ್ಣ ಅವರಿಗೆ ಸಾಕಾಗುವುದಿಲ್ಲವೇ? ಹೀಗಿದ್ದೂ ಮಾಜಿ ಸಿಎಂ ಕುಮಾರಸ್ವಾಮಿ ಅವರೇ ಖುದ್ದು ಹಾಸನ ಕ್ಷೇತ್ರದ ಉಸ್ತುವಾರಿ ವಹಿಸಿಕೊಳ್ಳುತ್ತಾರೆಂದರೆ, ಪರೋಕ್ಷವಾಗಿ ಅವರೇ ರೇವಣ್ಣನವರ ಶಕ್ತಿ ಕುಂದಿದೆ ಎಂಬುದಾಗಿ ಒಪ್ಪಿಕೊಂಡಂತಲ್ಲವೇ? ಅಲ್ಲದೆ, ಇದು ಈ ಬೆಳವಣಿಗೆ ಅವರ ಕುಟುಂಬದ ಆಂತರಿಕ ಕಲಹವನ್ನು ಬಹಿರಂಗಪಡಿಸಿದೆ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net