

ಅರಕಲಗೂಡು: ಹಿಂದುಳಿದಿದ್ದ ಅರಕಲಗೂಡನ್ನು ಬೇರೆ ತಾಲೂಕುಗಳಿಗೆ ಸಮವಾಗಿ ಅಭಿವೃದ್ಧಿಪಡಿಸಿದ್ದೇನೆ. ಇದಕ್ಕೆ ರಾಜಕೀಯವಾಗಿ ನೀವು ನೀಡಿದ ಶಕ್ತಿಯೇ ಕಾರಣ. ಮತ್ತೊಮ್ಮೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಮಾಜಿ ಸಚಿವ ಎ.ಮಂಜು ಮನವಿ ಮಾಡಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಎ.ಮಂಜು ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಹಾಗೂ ಎ.ಮಂಜು ಅವರ 65ನೇ ವರ್ಷದ ಹುಟ್ಟುಹಬ್ಬ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಷೇತ್ರದ ಜನರು ನನ್ನನ್ನು ರಾಜಕೀಯವಾಗಿ ಎತ್ತರಕ್ಕೆ ಬೆಳೆಸಿದರು. ಅರಕಲಗೂಡು ಹಿಂದೆ ಹೇಗಿತ್ತು, ನಾನು ಸಚಿವನಾಗಿದ್ದ ಎರಡು ವರ್ಷಗಳಲ್ಲಿ ಎಷ್ಟೊಂದು ಅಭಿವೃದ್ಧಿ ಕೆಲಸಗಳಾಗಿವೆ ಎಂಬುದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.
ಹಾಸನ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಪುಣ್ಯದ ಕಾಯಕ ಮಾಡಿದವರನ್ನು ಜನತೆ ಕೈ ಹಿಡಿಯುತ್ತಾರೆ. ಉತ್ತಮ ಸೇವಾ ಸಾಧನೆಗಳಿಗೆ ಹೆಸರಾದವರು ಎ.ಮಂಜು. ಶಾಸಕ, ಸಚಿವರಾಗಿದ್ದರೂ ಅವರ ಸರಳತೆ, ಪ್ರೀತಿ ಎಲ್ಲರನ್ನೂ ಹತ್ತಿರ ಸೆಳೆಯುತ್ತದೆ, ಮುಂದೆಯೂ ಅವರ ರಾಜಕೀಯ ಸೇವಾ ಕಾರ್ಯಗಳಿಗೆ ಒಳಿತಾಗಲಿ ಎಂದರು.
ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾರ್ಥಿ ತನಗೋಸ್ಕರ ಬದುಕಿದರೆ, ಸ್ವಾಭಿಮಾನಿ ಸಮಾಜಕ್ಕಾಗಿ ದುಡಿಯುತ್ತಾನೆ. ಎ.ಮಂಜು ಅವರು ಎಲ್ಲ ಸಮುದಾಯದ ಜನರ ಆಶಯಗಳ ಈಡೇರಿಕೆಗಾಗಿ ಶ್ರಮಿಸಿದ್ದಾರೆ ಎಂದರು.
ದೊಡ್ಡಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿ, ವಿಶ್ವದೆಲ್ಲೆಡೆ ಕನ್ನಡದ ಕಂಪು ಹರಡಿ ಭಾಷೆ ಬೆಳೆಸಿದರೆ ಅಲ್ಲಿಯೂ ಕನ್ನಡದ ವಾತಾವರಣ ನಿರ್ಮಾವಾಗಲಿದೆ. ನಾಡು ನುಡಿಗಾಗಿ ಭಾಷಾಭಿಮಾನ ಬೆಳೆಸಿಕೊಳ್ಳಬೇಕಿದೆ ಎಂದರು.
ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಇಂಗ್ಲಿಷ್ ವ್ಯಾಮೋಹದಿಂದಾಗಿ ಇಂದು ಪ್ರತಿ ಮನೆಯಲ್ಲಿ ನಾವು ಕನ್ನಡ ಉಳಿಸುತ್ತಿರುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಚಿಲುಮೆ ಮಠದ ಶ್ರೀಜಯದೇವ ಸ್ವಾಮೀಜಿ, ತೇಜೂರು ಮಠದ ಶ್ರೀ ಕಲ್ಯಾಣ ಸ್ವಾಮೀಜಿ, ಟಿ. ಮಾಯಿಗೌಡನಹಳ್ಳಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಜಾಮೀಯಾ ಮಸೀದಿಯ ಅಫೀಜ್ ನಯಾಜ್, ಕೈಸ್ತ ಧರ್ಮಗುರು ಫೌಲ್ ಡಿಸೋಜಾ, ಅದಿತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಸುರೇಶ್ ಸಿಂಗನಕುಪ್ಪೆ, ಜಿಪಂ ಮಾಜಿ ಸದಸ್ಯರಾದ ಡಾ.ಮಂಥರ್‌ಗೌಡ, ಎಸ್.ಪಿ. ರೇವಣ್ಣ, ಬರಗೂರು ರವಿ, ನಾಗಮಂಗಲ ರಾಜಶೇಖರ್, ಕೆ.ಆರ್.ಹೊಯ್ಸಳ ಇದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.
ನಂತರ ಮಾಜಿ ಸಚಿವ ಎ.ಮಂಜು ತಮ್ಮ ಕುಟುಂಬದೊಂದಿಗೆ ಬೃಹತ್ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡರು. ಸಂಗೀತ ರಸಸಂಜೆ ಕಾರ್ಯಕ್ರಮದಲ್ಲಿ ನಟ ಶಶಿಗೌಡ, ಪುಟ್ಟಸ್ವಾಮಿ ಇತರರು ವಿವಿಧ ಹಾಡುಗಳನ್ನು ಹಾಡಿ ನೃತ್ಯ ಪ್ರದರ್ಶಿಸಿದರು.