

ಆಳಂದ: ಸುಳ್ಳು ಹೇಳುವುದು, ದ್ವೇಷ ರಾಜಕಾರಣ ಬಿಡಿ. ಸರ್ಕಾರದಿಂದ ಅನುದಾನ ತಂದು ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿ. ಈಗಾಗಲೇ ಮಂಜೂರಾದ ಕಾಮಗಾರಿಗಳ ಸ್ಥಳ ಬದಲಾವಣೆ ಮಾಡಿದರೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್ ಎಚ್ಚರಿಕೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯಿಂದ 2022-23ರಲ್ಲಿ ಕವಲಗಾ ಹತ್ತಿರ ಹೊಸ ಕೆರೆ ನಿರ್ಮಾಣ ಕಾಮಗಾರಿಗಾಗಿ 16 ಕೋಟಿ ರೂ., ಕಡಗಂಚಿ ನಾಲಾಕ್ಕೆ ಅಡ್ಡಲಾಗಿ ಬಿಸಿಬಿ ಕಾಮಗಾರಿಗೆ 3 ಕೋಟಿ ರೂ., ತಡೋಳಾದಲ್ಲಿ ಕೆರೆ ನವೀಕರಣಕ್ಕೆ 5 ಕೋಟಿ ರೂ., ಧಂಗಾಪುರ ಕೆರೆ ಅಭಿವೃದ್ಧಿಗೆ 5 ಕೋಟಿ ರೂ., ಮದಗುಣಿಕೆ ಕೆರೆ ಪುನಶ್ಚೇತನಕ್ಕೆ 5 ಕೋಟಿ ರೂ., ವೈಜಾಪುರ ಹತ್ತಿರ ಸಣ್ಣ ನೀರಾವರಿ ಕೆರೆ ಸುಧಾರಣೆಗೆ 78 ಕೋಟಿ ರೂ. ಮೀಸಲಿಡಲಾಗಿತ್ತು. ಈಗಾಗಲೇ ಕಾಮಗಾರಿಗಳ ಟೆಂಡರ್ ಮುಗಿದಿದ್ದು, ಕೆಲಸ ಆರಂಭಿಸಬೇಕು. ಆದರೆ ಶಾಸಕ ಬಿ.ಆರ್.ಪಾಟೀಲ್ ಈ ಎಲ್ಲ ಕಾಮಗಾರಿಗಳನ್ನು ಬೇರೆಡೆ ಸ್ಥಳಾಂತರಿಸಲು ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ದ್ವೇಷ ರಾಜಕಾರಣ ನಡೆಸುತ್ತಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಶರಣ ನಗರದಲ್ಲಿ 6 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದರ್ಗಾ ಪ್ರದೇಶಕ್ಕೆ ಸ್ಥಳಾಂತರಿಸಲು ಆರೋಗ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಜನರಿಗೆ ಸೌಕರ್ಯ ಕಲ್ಪಿಸುವುದೇ ನಿಮ್ಮ ಉದ್ದೇಶವಾಗಿದ್ದರೆ ಹೊಸ ಕಾಮಗಾರಿ ಆರಂಭಿಸಿ. ಅದನ್ನು ಬಿಟ್ಟು ಹಿಂದಿನ ಯೋಜನೆಗಳ ಸ್ಥಳಾಂತರ ಸರಿಯಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಮಾರು 7 ವಾರ್ಡ್ ಜನರು ಬರುತ್ತಾರೆ. ಇದೀಗ ಏಕಾಏಕಿ ಸ್ಥಳಾಂತರಕ್ಕೆ ಮುಂದಾಗಿರುವುದು ಯಾವ ಕಾರಣಕ್ಕೆ? ಒಂದು ಸಮುದಾಯದ ಓಲೈಕೆ ಮಾಡುವುದನ್ನು ಬಿಡಿ. ಶರಣ ನಗರ ಪಿಎಚ್‌ಸಿ ಸ್ಥಳಾಂತರಿಸದAತೆ ಡಿಎಚ್‌ಒಗೆ ಮನವಿ ಮಾಡಿರುವುದಾಗಿ ಹೇಳಿದರು.