

ನಾಗಮಂಗಲ: ನಾನು ರಾಜಕೀಯ ಆರಂಭಿಸಿದ್ದು ಬಿಂಡಿಗನವಿಲೆ ಹೋಬಳಿಯಿಂದ. ನನ್ನ ಪತ್ನಿ ಸುಧಾಶಿವರಾಮೇಗೌಡ ಅವರನ್ನು ಈ ಬಾರಿ ಗೆಲ್ಲಿಸುವ ಪ್ರಮುಖ ಜವಾಬ್ದಾರಿ ಈ ಹೋಬಳಿಯ ಜನರ ಮೇಲಿದ್ದು, ನನ್ನ ಅಳಿವು, ಉಳಿವು ನಿಮ್ಮ ಕೈಯಲ್ಲಿದೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಹೇಳಿದರು.
ತಾಲೂಕಿನ ದೊಡ್ಡಬಾಲ, ಮಾಯಿಗೋನಹಳ್ಳಿ, ಹೊನ್ನಾವರ ಹಾಗೂ ಬಿಂಡಿಗನವಿಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಬಿಂಡಿಗನವಿಲೆಯಲ್ಲಿ ಅವರು ಮಾತನಾಡಿದರು.
ನಾನು ಈ ಹೋಬಳಿಯ ಮಗನಾಗಿದ್ದು, ಇದು ಮಹತ್ತರವಾದ ಚುನಾವಣೆಯಾಗಿದೆ. ಮಹಿಳೆಯರು ಮಹಿಳಾ ಅಭ್ಯರ್ಥಿಯ ಪರವಾಗಿ ಮತಹಾಕುವ ಮನಸ್ಸು ಮಾಡಬೇಕಿದೆ. ಇದುವರೆಗೂ ಮಹಿಳೆಗೆ ತಾಲೂಕಿನಲ್ಲಿ ಮತಹಾಕಿಲ್ಲ. ಈ ಬಾರಿ ಪ್ರಥಮ ಬಾರಿಗೆ ಮಹಿಳೆಗೆ ಮತಹಾಕುವ ಅವಕಾಶ ಸಿಕ್ಕಿದೆ. ಇದನ್ನು ಸದುಪಯೋಗಿಸಿಕೊಂಡು ಸುಧಾಶಿವರಾಮೇಗೌಡರಿಗೆ ಮತ ಚಲಾಯಿಸಿ ಮಹಿಳಾ ಶಾಸಕಿಯನ್ನಾಗಿಸಿ ಎಂದು ಕೋರಿದರು.
ಬಿಂಡಿಗನವಿಲೆ ಹೋಬಳಿಯ ಸಣ್ಣಗ್ರಾಮ ಲಾಳನಕೆರೆಯಿಂದ ದೆಹಲಿಯವರೆಗೆ ಹೋಗಲು ಬೆಳೆಸಿದ್ದು ಬಿಂಡಿಗನವಿಲೆ ಹೋಬಳಿಯ ಜನತೆಯಾಗಿದ್ದಾರೆ. ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯನನ್ನಾಗಿ ಆಯ್ಕೆ ಮಾಡಿದ ಈ ಹೋಬಳಿಯ ಜನತೆಗೆ ನಾನು ಜೀವನಪೂರ್ತಿ ಋಣಿಯಾಗಿರುತ್ತೇನೆ. ಕಳೆದ 40 ವರ್ಷದಲ್ಲಿ ನಾನು ಯಾರೊಬ್ಬರಿಗೂ ಅನ್ಯಾಯ ಮಾಡಿಲ್ಲ. ತೊಂದರೆ ಕೊಟ್ಟಿಲ್ಲ. ಸಾವಿರಾರು ಎಕರೆ ಜಮೀನನ್ನು ಜನತೆಗೆ ಮಂಜೂರು ಮಾಡಿಕೊಟ್ಟಿದ್ದೇನೆ. ಚಲುವರಾಯಸ್ವಾಮಿ ಶಾಸಕರಾಗಿ, ಸಚಿವರಾಗಿ ಸಂಸದರಾಗಿದ್ದವರಾಗಿದ್ದರೂ ಈಗಿರುವ ಶಾಸಕರ ಭ್ರಷ್ಟಾಚಾರದ ವಿರುದ್ಧ ಒಂದೇ ಒಂದು ಧ್ವನಿ ಎತ್ತಲಿಲ್ಲ. ಈಗ ತಾಲೂಕಿನ ಜನತೆಯ ಮುಂದೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದರು.
ಜೆಡಿಎಸ್ ಸೇರ್ಪಡೆಯಾದ 6 ವರ್ಷಗಳಲ್ಲಿ ಕೇವಲ 6 ತಿಂಗಳಿಗೆ ಸಂಸದನನ್ನಾಗಿ ಮಾಡಿ ನನ್ನನ್ನು ಮನೆಗೆ ಕಳುಹಿಸಿದರು. ಆ ಚುನಾವಣೆಯಲ್ಲಿ ನನ್ನನ್ನು 35 ಕೋಟಿ ರೂ. ಸಾಲಗಾರನನ್ನಾಗಿಸಿದರು. ಇಂದಿಗೂ ನಾನು ಆ 35 ಕೋಟಿ ರೂ.ಗೆ ಬಡ್ಡಿ ಕಟ್ಟುತ್ತಿದ್ದೇನೆ. ಯಾರ ಬಳಿಯೂ ಒಂದು ರೂ. ಲಂಚ ಪಡೆದಿಲ್ಲ. ಈ ಬಾರಿ ನನ್ನ ಪತ್ನಿಯನ್ನು ಗೆಲ್ಲಿಸುವ ಮೂಲಕ ನನ್ನ ಕೈಬಲಪಡಿಸಿಕೊಡಿ ಎಂದು ಮನವಿ ಮಾಡಿದರು.
ಟಿಕೆಟ್ ಕೊಡಿಸಿದ ನನ್ನ ಮೇಲೆಯೇ ಸವಾರಿ: ನಾನು ಮತ್ತು ಸುರೇಶ್‌ಗೌಡ ಇಬ್ಬರು ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ನಮ್ಮಿಬ್ಬರನ್ನು ಮಾಜಿ ಪ್ರಧಾನಿ ದೇವೇಗೌಡರು ಆಹ್ವಾನಿಸಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಮಾಡಿಕೊಂಡರು. ಎಚ್.ಡಿ.ದೇವೇಗೌಡರು ಕಳೆದ ಬಾರಿಯೆ ಸುಧಾಶಿವರಾಮೇಗೌಡರನ್ನು ಸ್ಪರ್ಧೆ ಮಾಡುವಂತೆ ಸೂಚಿಸಿದ್ದರು. ಆದರೆ ನಾನು ಅಂದು ಸುರೇಶ್‌ಗೌಡನಿಗೆ ಟಿಕೆಟ್ ಕೊಡಿಸಿದ್ದೆ. ಆದರೆ ಈಗ ಅದೇ ಸುರೇಶ್‌ಗೌಡ ನಮ್ಮನ್ನು ಕೆಳಕ್ಕೆ ಬೀಳಿಸಿ ಸವಾರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪ್ರಚಾರದ ಸಂದರ್ಭದಲ್ಲಿ ಎಲ್ಲ ಕಡೆಗಳಲ್ಲಿ ಮಹಿಳೆಯರು ಪೂರ್ಣಕುಂಭ ಹಾಗೂ ವಿವಿಧ ಕಲಾತಂಡಗಳ ಮೂಲಕ ಪಟಾಕಿ ಸಿಡಿಸಿ ಜೈಕಾರ ಕೂಗಿ ಅದ್ದೂರಿಯಾಗಿ ಸ್ವಾಗತಿಸಿದರು. ಅಭ್ಯರ್ಥಿ ಸುಧಾಶಿವರಾಮೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸೋಮಶೇಖರ್, ಮುಖಂಡರಾದ ಚೇತನ್‌ಗೌಡ, ಶೃತಿಚೇತನ್‌ಗೌಡ, ಸತ್ಯನ್, ಮಂಜೇಗೌಡ, ನರೇಂದ್ರ ಇದ್ದರು.