

ಹಾಸನ: ನನ್ನ ಅಧಿಕಾರಾವಧಿಯಲ್ಲಿ ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ನನ್ನ ರಾಜಕೀಯ ಏಳಿಗೆ ಸಹಿಸದವರು ಸುಖಾಸುಮ್ಮನೆ ಆರೋಪ ಮಾಡಿದ್ದಾರೆ ಎಂದು ಬಾಳ್ಳುಪೇಟೆ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ಸ್ವಾಮಿ ಸ್ಪಷ್ಟಪಡಿಸಿದರು.
ನನ್ನ ಮೇಲಿನ ಭ್ರಷ್ಟಾಚಾರ ಆರೋಪ ಸುಳ್ಳು. ಜೆಪಿ ನಗರದ ಸುಮಾರು 200 ಮಂದಿ ಫಲಾನಭವಿಗಳಿಗೆ ಹಕ್ಕುಪತ್ರ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅದರಂತೆ ನಾನು ನನ್ನ ಸ್ವಂತ್ರ ಖರ್ಚಿನಿಂದ ಅರ್ಜಿ ಸಿದ್ಧ ಪಡಿಸಿ ಅರ್ಹರಿಗೆ ಮನೆ ಕೊಡಿಸುವ ಕೆಲಸ ಮಾಡುತ್ತಿದ್ದೇನೆಯೇ ಹೊರತು, ಯಾರಿಂದಲೂ ಹಣ ಪಡೆಯುತ್ತಿಲ್ಲ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನನ್ನ ವಿರುದ್ಧದ ಆರೋಪ ಶುದ್ಧ ಸುಳ್ಳು. ಗ್ರಾಪಂ ನಿಂದ ಇ ಸ್ವತ್ತು ನೀಡಲು ಅಥವಾ ಹಕ್ಕು ಪತ್ರ ಕೊಡಲು ಒಂದು ರೂ.ಕೇಳಿದ್ದನ್ನು ಸಾಬೀತು ಪಡಿಸಿದ್ರೆ ಅವರು ಕೊಡುವ ಶಿಕ್ಷೆಗೆ ಬದ್ಧ ಎಂದರು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ ಎಂದ ಸ್ವಾಮಿ, ನಾನು ಸತತ ಎರಡು ಬಾರಿ ಸದಸ್ಯನಾಗಿದ್ದೇನೆ. ನನ್ನ ಜನರಿಗೆ ನಾನು ಕೆಲಸ ಮಾಡಬಾರದಾ ಎಂದು ಕೇಳಿದರು.
ನನ್ನ ಕಚೇರಿಗೆ ಕಡತ ತೆಗೆದುಕೊಂಡು ಹೋಗಿದ್ದು ಅರ್ಜಿಗಳು ಮಾತ್ರ, ಯಾವುದೇ ಸರಕಾರಿ ಕಡತ ಅಲ್ಲ. ಉದೀಶ್ ಎಂಬುವರು ಅನಧಿಕೃತ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದು, ಆ ಅಕ್ರಮ ಪ್ರಶ್ನೆ ಮಾಡಿದ್ದಕ್ಕೆ ವೈಯಕ್ತಿಕ ದ್ವೇಷದಿಂದ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ನನ್ನ ಹೆಸರು ಹಾಳು ಮಾಡಲು, ರಾಜಕೀಯವಾಗಿ ನನ್ನನ್ನು ತುಳಿಯಲು ಹೀಗೆ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಸುದ್ದಿಗೋಷ್ಠಿಯಲ್ಲಿ ರೋಹಿತ್, ಲೋಕೇಶ್, ಮಲ್ಲಿಕ್, ವಿರೂಪಾಕ್ಷ ಇದ್ದರು.