ನನೆಗುದಿಗೆ ಬಿದ್ದಿರುವ ಕಾಮಗಾರಿ ಪೂರ್ಣಗೊಳಿಸಿ

15ark1
ಕುಶಾಲನಗರದ ಹಾರಂಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ಹಾರಂಗಿ ಜಲಾಶಯ ಯೋಜನೆ ವ್ಯಾಪ್ತಿಯ ಇಂಜಿನಿಯರ್‌ಗಳ ಸಭೆ ನಡೆಸಿದ ಶಾಸಕ ಎ.ಮಂಜು ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ನೀಲಿನಕ್ಷೆ ಪರಿಶೀಲಿಸಿದರು. ಎಸ್.ಸಿ.ಚೌಡೇಗೌಡ, ಕೆ.ಕೆ.ರಘುಪತಿ ಇತರರಿದ್ದರು.
Published on

ಅರಕಲಗೂಡು: ನನೆಗುದಿಗೆ ಬಿದ್ದಿರುವ ತಾಲೂಕಿನ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಕೆರೆ, ಕಟ್ಟೆಗಳಿಗೆ ನೀರು ತುಂಬಿಸದಿದ್ದರೆ ಸಹಿಸುವುದಿಲ್ಲ ಎಂದು ಶಾಸಕ ಎ. ಮಂಜು ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳಿಗೆ ತಾಕೀತು ಮಾಡಿದರು.

ಹಾರಂಗಿ ಪ್ರವಾಸಿ ಮಂದಿರದಲ್ಲಿ ಶನಿವಾರ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಅಧಿಕಾರಿಗಳು ಮತ್ತು ನೀರಾವರಿ ಇಲಾಖೆ ಇಂಜಿನಿಯರ್‌ಗಳ ಸಭೆ ನಡೆಸಿ ಮಾತನಾಡಿದರು. ಕಳೆದ 2019ರಲ್ಲಿ 106 ಕೋಟಿ ರೂ. ವೆಚ್ಚದಲ್ಲಿ ಮಂಜೂರಾದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಗುತ್ತಿಗೆ ಕರಾರು ಪ್ರಕಾರ 18 ತಿಂಗಳಿಗೆ ಮುಗಿಸಬೇಕು. ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ನಿರ್ಲಕ್ಷ್ಯದಿಂದಾಗಿ ನನೆಗುದಿಗೆ ಬಿದ್ದಿದೆ. ಕಟ್ಟೇಪುರ ಬಳಿ ಹೇಮಾವತಿ ಹಿನ್ನೀರಿನಲ್ಲಿ ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ ಮಲ್ಲಿಪಟ್ಟಣ ಮತ್ತು ಕೊಣನೂರು ಹೋಬಳಿಯ 150 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಮಹತ್ವಾಕಾಂಕ್ಷೆ ಯೋಜನೆ ಕಾರ್ಯಗತಗೊಳಿಸಲು ಮಾಜಿ ಶಾಸಕರು ಆಸಕ್ತಿ ವಹಿಸದ ಕಾರಣ ಅಪೂರ್ಣಗೊಂಡಿದ್ದು, ರೈತಾಪಿ ವರ್ಗದ ಜನರಿಗೆ ಅನ್ಯಾಯ ಮಾಡಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಯುನೈಟೆಡ್ ಗ್ಲೋಬಲ್ ಕಂಪನಿಗೆ ಶೇ.65ರಷ್ಟು ಹಣ ಪಾವತಿಸಲಾಗಿದೆ. ಆದರೆ ಶೇ. 40ರಷ್ಟು ಕಾಮಗಾರಿ ಕೂಡ ಆಗಿಲ್ಲ. ಜಾಕ್‌ವೆಲ್ ಲಿಫ್ಟ್ ನಿರ್ಮಿಸಲು ಸಹ ಸಾಧ್ಯವಾಗಿಲ್ಲ. ಹಣ ಪಾವತಿ ಮಾಡಿಕೊಳ್ಳಲು ಯತ್ನಿಸುವ ಗುತ್ತಿಗೆದಾರರು ಕಾಮಗಾರಿ ಮುಗಿಸಲು ನಿರಾಸಕ್ತಿ ವಹಿಸಿರುವುದಾದರೂ ಏಕೆ ಎಂದು ರಾಮನಾಥಪುರ ಹಾರಂಗಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೀಪಕ್, ಸಹಾಯಕ ಇಂಜಿನಿಯರ್ ಗೌತಮ್ ಮತ್ತು ಗುತ್ತಿಗೆದಾರ ಮೇಲ್ವಿಚಾರಕ ಷಣ್ಮುಗಂ ವಿರುದ್ದ ಹರಿಹಾಯ್ದರು.

ಹಾರಂಗಿ ಮಹಾಮಂಡಲ ಅಧ್ಯಕ್ಷ ಎಸ್.ಸಿ.ಚೌಡೇಗೌಡ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟಸ್ವಾಮಿ, ಸಹಾಯಕ ಇಂಜಿನಿಯರ್ ವರಲಕ್ಷ್ಮೀ, ಹರಿಕೃಷ್ಣ, ಯೋಜನಾಧಿಕಾರಿ ಪುಷ್ಪಲತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net