ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಚಾಲನೆ

12sgr1
ಸಾಗರದಲ್ಲಿ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿದರು. ಮಧು ಬಂಗಾರಪ್ಪ, ಮೈತ್ರಿ ಪಾಟೀಲ್, ಸವಿತಾ ವಾಸು, ವೀರೇಶ ಕುಮಾರ್, ಶಿವಪ್ರಕಾಶ್ ಇತರರಿದ್ದರು.
Published on

ಸಾಗರ: ಕೆಲವರಿಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದೇ ಕೆಲಸ. ಇಂತಹ ಯೋಜನೆಗಳಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಹೇಳಿಕೊಂಡು ತಿರುಗುವವರಿಗೆ ಈ ಜನಪರ ಕಾರ್ಯಕ್ರಮಗಳೇ ಉತ್ತರ ನೀಡುತ್ತಿವೆ. ಅಲ್ಲದೆ ರಾಜ್ಯ ಸರ್ಕಾರ ಆರ್ಥಿಕವಾಗಿ ಸದೃಢವಾಗಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸಾಗರ ನಗರಸಭೆ ರಂಗಮಂದಿರದಲ್ಲಿ ಸೋಮವಾರ ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಕ್ಕುಪತ್ರ ಕೊಡಬೇಕು ಎಂದು ಕಾಗೋಡು ತಿಮ್ಮಪ್ಪ ಅವರು ಸ್ಪೀಕರ್ ಆಗಿದ್ದಾಗ ಪಟ್ಟು ಹಿಡಿದು ಕೆಲಸ ಮಾಡಿದ್ದರು. ನನೆಗುದಿಗೆ ಬಿದ್ದ ಯೋಜನೆಗೆ ಈಗ ಮತ್ತೆ ಚಾಲನೆ ಸಿಕ್ಕಿದೆ ಎಂದರು. ಶಿಕ್ಷಣ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತರಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆದ ನಂತರ ಮಕ್ಕಳಿಗೆ ಕಡಿಮೆ ಅಂಕ ಬಂದರೆ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗಲು ಸಮಸ್ಯೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು. ರಾಜ್ಯದಲ್ಲಿಯೇ ಅತಿಹೆಚ್ಚು ಕೆರೆ ಹೊಂದಿರುವ ಹೆಗ್ಗಳಿಕೆ ಸೊರಬ ತಾಲೂಕಿಗೆ ಸೇರುತ್ತದೆ. ಆದರೆ ಕುಡಿಯುವ ನೀರಿನ ಸಮಸ್ಯೆ ಬಾಧಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶರಾವತಿ ನದಿಯಿಂದ ಸೊರಬ ತಾಲೂಕಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗುವ ಕಾರ್ಯಕ್ಕೆ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕಾಗೋಡು ತಿಮ್ಮಪ್ಪ ಅವರ ಕಾಯಕ ಬದ್ಧತೆ ನಮಗೆಲ್ಲ ಮಾದರಿ ಎಂದರು. ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಬಹಳ ಕಾಲದಿಂದ 94ಸಿ 94ಸಿಸಿ ಹಕ್ಕುಪತ್ರ ನೀಡಿರಲಿಲ್ಲ. ಮೊದಲ ಹಂತದಲ್ಲಿ 150ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ ಎಂದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಉಪವಿಭಾಗಾಧಿಕಾರಿ ವೀರೇಶಕುಮಾರ್, ತಾಪಂ ಇಒ ಶಿವಪ್ರಕಾಶ್, ಪ್ರಮುಖರಾದ ರಂಗಸ್ವಾಮಿ, ಗಣಪತಿ ಮಂಡಗಳಲೆ, ಮಧುಮಾಲತಿ, ನಾದಿರಾ ಪರ್ವಿನ್, ಚಂದ್ರಪ್ಪ, ಲಲಿತಮ್ಮ, ಪೌರಾಯುಕ್ತ ಎಚ್.ಕೆ.ನಾಗಪ್ಪ, ತಹಸೀಲ್ದಾರ್ ಚಂದ್ರಶೇಖರ ನಾಯ್ಕ್, ಪಿಡಬ್ಲುೃಡಿ ಎಇಇ ಅನಿಲ್ ಇತರರಿದ್ದರು.

ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಕಾಳಜಿ ಇದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮತ್ತು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಗೆ ತಾರ್ಕಿಕ ಅಂತ್ಯ ತರುವಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಎಲ್ಲರ ಸಲಹೆ ಸಹಕಾರ ಪಡೆದು ಸಾಗರ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಬಿ.ಆರ್.ಜಯಂತ್, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ನೂರಾರು ಕೋಟಿ ರೂ. ವೆಚ್ಚದಲ್ಲಿ ಸಾಗರ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಅಭಿವೃದ್ಧಿಗೆ ಹಣ ಇಲ್ಲ ಎಂದವರಿಗೆ ಇದೇ ಉತ್ತರ. ಒಳಚರಂಡಿ ಕಾಮಗಾರಿಗೆ 20 ಕೋಟಿ ರೂ., ಆಡಳಿತ ಸೌಧಕ್ಕೆ ಮೂಲ ಸೌಲಭ್ಯ ಒದಗಿಸಲು 4 ಕೋಟಿ ರೂ., ಪ್ರಥಮ ದರ್ಜೆ ಕಾಲೇಜಿನ ಕೊಠಡಿ ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ. ಗೋಪಾಲಕೃಷ್ಣ ಬೇಳೂರು, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net