ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ: ಪ್ರೀತಂ ಗೌಡ

ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ: ಪ್ರೀತಂ ಗೌಡ
Published on

ಹಾಸನ: ಕಳೆದ ವಿಧಾನಸಭೆ ಚುನಾವಣೆಯಲ್ಲಿ 63 ಸಾವಿರ ಮತ ಕೊಟ್ಟು ಆಶೀರ್ವಾದ ಮಾಡಿದ್ದರು. ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹದಿನಾಲ್ಕು ಸಾವಿರ ಹೆಚ್ಚು ಮತ ಕೊಟ್ಟು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಆಶೀರ್ವಾದ ಮಾಡಿದ್ದಾರೆ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದರು.

ನನ್ನ ಅಭಿವೃದ್ಧಿ ಕೆಲಸ, ಮಾರುವ ಸೇವೆ ಗುರುತಿಸಿ ಜನ ಬಹಳ ಹುಮ್ಮಸ್ಸಿನಿಂದ ಆಶೀರ್ವಾದ ಮಾಡಿದ್ದಾರೆ. ಚುನಾವಣೆ ಫಲಿತಾಂಶ ವಿರುದ್ಧವಾಗಿ ಬಂದಿರಬಹುದು. ಆದರೆ ಜನರ ಆಶೀರ್ವಾದ ಪ್ರೀತಂ ಗೌಡ ಪರ ಇದೆ ಎನ್ನುವುದಕ್ಕೆ ಶೇ.25 ಹೆಚ್ಚು ಮತ ಬಂದಿರುವುದೇ ಸಾಕ್ಷಿ ಎಂದು ಬುಧವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಚುನಾವಣೆಯಲ್ಲಿ ನನಗೆ 77,300ಕ್ಕೂ ಹೆಚ್ಚು ಮತ ನೀಡಿದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ. ಬಿಜೆಪಿ ಕಾರ್ಯಕರ್ತರಿಗೆ ಅಭಾರಿಯಾಗಿದ್ದೇನೆ. ನನ್ನ ರಾಜಕೀಯ ಜೀವನದ ಕಷ್ಟಕರ ಸಮಯದಲ್ಲಿ ನನಗೆ ಬೆಂಬಲ ಕೊಟ್ಟಿದ್ದಾರೆ. ಸಂಘ ಪರಿವಾರದ ಎಲ್ಲಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರ ಭಾವನೆಗೆ ಪೂರಕವಾಗುವ ರೀತಿಯಲ್ಲಿ ಸಹಕಾರ ಕೊಟ್ಟಿದ್ದಾರೆ. ಅವರೆಲ್ಲರಿಗೂ ಚಿರಋಣಿಯಾಗಿದ್ದೇನೆ ಎಂದರು.

ಕಳೆದ ಬಾರಿ 13 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದೆ. ಈ ಸಲ ಅದರ ಅರ್ಧದಷ್ಟು ಮತಗಳಿಂದ ಸೋತಿದ್ದೇನೆ. ಯಾವುದೇ ಕಾರಣದಿಂದಲೂ ನನಗೆ ಸೋಲಾಗಿದೆ ಎಂದು ಭಾವಿಸುವುದಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಈವರೆಗೂ ಹಾಸನ ವಿಧಾನಸಭಾ ಕ್ಷೇತ್ರಕ್ಕೆ 17 ಚುನಾವಣೆಯಾಗಿವೆ. ಇಷ್ಟು ಸುದೀರ್ಘ ಇತಿಹಾಸದಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಇಷ್ಟು ಕಡಿಮೆ ಮತಗಳನ್ನು ಪಡೆದಿರುವ ಉದಾಹರಣೆ ಇಲ್ಲ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನ ಗಳಿಸಿದ್ದರೂ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅತಿ ಕಡಿಮೆ ಶೇಕಡಾವಾರು ಮತ ಪಡೆದಿರುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ. ಕಳೆದ ಬಾರಿ ಕಾಂಗ್ರೆಸ್ ಇಲ್ಲಿ 38 ಸಾವಿರ ಮತಗಳನ್ನು ಪಡೆದುಕೊಂಡಿತು. ಈ ಬಾರಿ ಕೇವಲ 4 ಸಾವಿರ ಮತಗಳನ್ನು ಪಡೆದುಕೊಂಡಿದೆ. ಕಾಂಗ್ರೆಸ್‌ಗೆ ಹೋಗಬೇಕಾದ ಒಂದು ವರ್ಗದ ಮತಗಳು ಜನತಾದಳಕ್ಕೆ ಹೋಗಿವೆ. ಇದರ ಪರಿಣಾಮ ಈ ಬಾರಿ ತಮಗೆ ಸೋಲಾಗಿದೆ ಎಂದು ಆರೋಪಿಸಿದರು.

ನೂತನ ಶಾಸಕರಿಗೆ ಸಹಕಾರ ಯಾವಾಗಲೂ ಇರುತ್ತದೆ

ಪ್ರೀತಂಗೌಡ ಯಾವ ರೀತಿ ಕೆಲಸ ಮಾಡಿದ್ದಾನೆ ಅದನ್ನು ನೂತನ ಶಾಸಕರು ಮುಂದುವರಿಸಿಕೊಂಡು ಹೋಗಲಿ. ಅವರು ಯುವಕರು, ವಿದ್ಯಾವಂತರಿದ್ದಾರೆ. ಹೆಚ್ಚು ಕೆಲಸ ಮಾಡುವ ನಿರೀಕ್ಷೆ ಇದೆ. ನಾವು ಮಾಡಿರುವ ಕೆಲಸಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ಕೆಲಸ ಮಾಡಲಿ. ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಕೆಲಸವನ್ನು ನೂತನ ಶಾಸಕರು ಮಾಡಲಿ. ಅಭಿವೃದ್ಧಿ ವಿಷಯದಲ್ಲಿ ನನ್ನ ಸಹಕಾರ ಅವರಿಗೆ ಯಾವಾಗಲೂ ಇರುತ್ತದೆ ಎಂದರು.

ವರ್ಗ ಅಂದರೆ ಕಾಂಗ್ರೆಸ್

ಒಂದು ವರ್ಗದವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡಿದ ಪ್ರೀತಂ ಗೌಡ ಅವರು, ವರ್ಗ ಎಂದು ನಾನು ಹೇಳಿರುವುದು ಕಾಂಗ್ರೆಸ್ ಪಕ್ಷವನ್ನು ಉಲ್ಲೇಖಿಸಿ ಹೊರತು ಒಂದು ಸಮುದಾಯಕ್ಕೆ ಅಲ್ಲ. ನಾನು ಯಾರನ್ನು ಭಯಪಡಿಸುವ ಕೆಲಸಕ್ಕೆ ಕೈ ಹಾಕಿಲ್ಲ. ಮುಸ್ಲಿಂ ಬಾಂಧವರನ್ನು ಅತಿ ಹೆಚ್ಚು ಪ್ರೀತಿಸುವ, ಗೌರವ ಕೊಡುವ ವ್ಯಕ್ತಿ ನಾನು. ಅವರ ಮೇಲೆ ಆಕ್ರೋಶ ಹೊರಹಾಕುವ ಅವಶ್ಯಕತೆ ನನಗಿಲ್ಲ. ಕೋವಿಡ್ ಸಮಯದಲ್ಲಿ ಅವರ ಮನೆ-ಮನೆಗಳಿಗೆ ಹೋಗಿ ಅಗತ್ಯ ನೆರವು ನೀಡಿದ್ದೇನೆ. ಅವರೊಂದಿಗೆ ಕುಳಿತು ಊಟ ಮಾಡಿದ್ದೇನೆ ಎಂದು ಸ್ಪಷ್ಟ ಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net