ನನಗೆ ಸವಾಲು ಹಾಕಿರುವ ಶಾಸಕರನ್ನು ಸೋಲಿಸುವುದೇ ನನ್ನ ಗುರಿ : ಎಚ್.ಡಿ.ರೇವಣ್ಣ

ನನಗೆ ಸವಾಲು ಹಾಕಿರುವ ಶಾಸಕರನ್ನು ಸೋಲಿಸುವುದೇ ನನ್ನ ಗುರಿ : ಎಚ್.ಡಿ.ರೇವಣ್ಣ
Published on

ಹಾಸನ : ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿದ್ದು, ಯಾರಿಗೆ ಟಿಕೆಟ್ ಎಂಬುದು ಇನ್ನೂ ನಿಗೂಢವಾಗಿದೆ. ಮಾಜಿ ಸಚಿವ ಎಚ್.ಡಿ.ರೇವಣ್ಣ ಶುಕ್ರವಾರ ಸಂಜೆ ಜೆಡಿಎಸ್ ಹಿರಿಯ ಮುಖಂಡ ಕೆ.ಎಂ. ರಾಜೇಗೌಡರ ಮನೆಯಲ್ಲಿ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್‌ಗಾಗಿ ಎಚ್.ಡಿ.ರೇವಣ್ಣ ಅವರ ಕುಟುಂಬ ಮತ್ತು ಸ್ವರೂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಈಗ ಈ ಇಬ್ಬರನ್ನು ಬಿಟ್ಟು ಮೂರನೇ ವ್ಯಕ್ತಿಯನ್ನು ಕಣಕ್ಕಿಳಿಸಲು ಮುಂದಾಗಿದ್ದು, ಅದಕ್ಕಾಗಿ ಈಗಾಗಲೇ ದಳಪತಿಗಳು ಕೆ.ಎಂ.ರಾಜೇಗೌಡರ ಹೆಸರನ್ನು ಪ್ರಸ್ತಾಪಿಸಿದ್ದಾರೆ.
ಕುಮಾರಸ್ವಾಮಿ ಅವರು ಸ್ವರೂಪ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಆದರೆ ರೇವಣ್ಣ ತನ್ನ ಪತ್ನಿಗೆ ಟಿಕೆಟ್ ಕೊಡಿಸಲು ಸಾಕಷ್ಟು ಒತ್ತಡ ಹಾಕುತ್ತಿದ್ದರು. ಅಂತಿಮವಾಗಿ ರೇವಣ್ಣ ಅವರೇ ಕೆ.ಎಂ.ರಾಜೇಗೌಡರ ಹೆಸರನ್ನು ಪ್ರಸ್ತಾಪಿಸಿ ಅವರನ್ನು ಕಣಕ್ಕಿಳಿಸಲು ಮುಂದಾಗುವ ಮೂಲಕ ಸ್ವರೂಪ್ ಮತ್ತು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಲು ಮುಂದಾಗಿದ್ದಾರೆ. ನಮ್ಮ ಕುಟುಂಬಕ್ಕೆ ಸಿಗದ ಟಿಕೆಟ್ ಸ್ವರೂಪ್‌ಗೂ ಕೂಡ ಸಿಗಬಾರದೆಂಬ ಉದ್ದೇಶದಿಂದ ನೆನ್ನೆ ರಾತ್ರಿ ದಿಢೀರನೆ ನೂರಾರು ಜನ ಮುಖಂಡರೊಡನೆ ಹೆಚ್.ಡಿ.ರೇವಣ್ಣ ಅವರು ಕೆ.ಎಂ.ರಾಜೇಗೌಡರ ಮನೆಗೆ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.
ಈ ಸಭೆಯಲ್ಲಿ ಕೆಲವರು ಸ್ವರೂಪ್ ಸ್ಪರ್ಧಿಸಲಿ, ಇನ್ನೂ ಕೆಲವರು ಭವಾನಿ ರೇವಣ್ಣ ಅಥವಾ ರೇವಣ್ಣ ಅವರೇ ಸ್ಪರ್ಧಿಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಿ ಈ ಬಾರಿ ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು. ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾವೆಲ್ಲರೂ ಅಭ್ಯರ್ಥಿಯ ಗೆಲುವಿನ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.
ನಂತರ ಸಭೆಯಲ್ಲಿ ಮಾತನಾಡಿದ ಕೆ.ಎಂ.ರಾಜೇಗೌಡರು, ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ದನಿದ್ದೇನೆ. ನನಗೂ ಎರಡು ಬಾರಿ ಈ ಹಿಂದೆ ಟಿಕೆಟ್ ಕೈ ತಪ್ಪಿತ್ತು. ಎಲ್ಲರ ಒತ್ತಾಯದ ಮೇರೆಗೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಇದಕ್ಕೆ ಎಲ್ಲರೂ ಒಟ್ಟಾಗಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ನಂತರ ಮಾಧ್ಯಮದವರನ್ನು ಹೊರಗೆ ಕಳುಹಿಸಿ ಮಾತನಾಡಲು ಆರಂಭಿಸಿದ ಎಚ್.ಡಿ.ರೇವಣ್ಣ ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾದರೆ ಕೆ.ಎಂ.ರಾಜೇಗೌಡರಿಗೆ ನೀಡಲಿ. ನಾವೆಲ್ಲರೂ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನನಗೆ ಸವಾಲು ಹಾಕಿರುವ ಶಾಸಕರನ್ನು ಸೋಲಿಸುವುದೇ ನನ್ನ ಗುರಿ ಎಂದು ಹೇಳಿದ್ದಾರೆ ಎಂದು ಜೆಡಿಎಸ್‌ನ ಮುಖಂಡರೊಬ್ಬರು ತಿಳಿಸಿದ್ದಾರೆ.
ಈಗಾಗಲೇ ರಾಜೇಗೌಡರಿಗೆ ಚುನಾವಣೆ ಎದುರಿಸಲು ಸನ್ನದ್ಧರಾಗಿ ಎಂದು ತಿಳಿಸಲಾಗಿದೆ. ಕ್ಷೇತ್ರದಾದ್ಯಂತ ಪ್ರವಾಸ ಮಾಡಿ ಜನರ ಅಭಿಪ್ರಾಯ ಸಂಗ್ರಹಿಸಿ, ಇನ್ನೂ ಕೆಲ ದಿನಗಳ ಸಮಯದ ಅವಕಾಶ ನೀಡಲಾಗುವುದು. ನಂತರ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂದು ಹೇಳಿದ್ದಾರೆ.
ಈಗಾಗಲೇ ದೇವೇಗೌಡರೊಂದಿಗೆ ಮಾತುಕತೆ ನಡೆಸಿದ್ದೇನೆ. ಇನ್ನೊಮ್ಮೆ ಮಾತುಕತೆ ನಡೆಸಿ ರಾಜೇಗೌಡರನ್ನು ಕಣಕ್ಕಿಳಿಸುವಂತೆ ಸಭೆಯಲ್ಲು ಕೂಡ ಚರ್ಚಿಸಲಾಗಿದ್ದು, ಇದನ್ನು ಅವರ ಗಮನಕ್ಕೆ ತರಲಾಗುವುದು. ರಾಜೇಗೌಡರು ಪ್ರಚಾರ ಕಾರ್ಯ ಶುರು ಮಾಡುವಂತೆ ರೇವಣ್ಣ ಅವರು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಅಡಕತ್ತರಿಯಲ್ಲಿ ಸ್ವರೂಪ್
ಕುಮಾರಸ್ವಾಮಿಯವರ ಅಭಯದಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಸ್ವರೂಪ್ ಇತ್ತ ರೇವಣ್ಣ ಅವರ ಕುಟುಂಬ ಮತ್ತು ಅವರ ತಂಡ ಯಾವುದೇ ಕಾರಣಕ್ಕೂ ಸ್ವರೂಪ್‌ಗೆ ಟಿಕೆಟ್ ಸಿಗದಂತೆ ಮಾಡುತ್ತಿರುವುದು ಜಗಜ್ಜಾಹೀರಾದ ಹಿನ್ನೆಲೆಯಲ್ಲಿ ಸ್ವರೂಪ್ ಅವರು ಅತ್ತವೂ ಹೋಗಲಾರದೆ, ಇತ್ತವೂ ಬರಲಾಗದೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ತಮ್ಮ ಬೆಂಬಲಿಗರ ಹಿತದೃಷ್ಟಿಯಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಲೇಬೇಕೆಂಬ ಹಠಕ್ಕೆ ಬಿದ್ದಿರುವ ಸ್ವರೂಪ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಶತಾಯ ಗತಾಯ ಟಿಕೆಟ್ ಸಿಗಬಾರದೆಂಬ ಹಿನ್ನೆಲೆಯಲ್ಲಿ ರಾಜೇಗೌಡರನ್ನು ಮುನ್ನಲೆಗೆ ತಂದು ಬಿಟ್ಟಿರುವ ರೇವಣ್ಣ ಅವರ ಕುಟುಂಬದಿಂದಾಗಿ ಸ್ವರೂಪ್ ಅವರ ರಾಜಕೀಯ ಭವಿಷ್ಯ ಅತಂತ್ರವಾಗಲಿದೆಯೇ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net