

ಎಚ್.ಡಿ.ಕೋಟೆ: ನನಗೆ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವೇ ಹೊರತು ಜೆಡಿಎಸ್ ಪಕ್ಷವಲ್ಲ ಎಂದು ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ತಿಳಿಸಿದರು.
ತಾಲೂಕಿನ ಬೆಟ್ಟದಬೀಡು ಗ್ರಾಮದಲ್ಲಿ ಬುಧವಾರ ಮನೆಮನೆಗೆ ಸಂಪರ್ಕ ಅಭಿಯಾನ ಹಾಗೂ ರೋಡ್ ಶೋ ನಡೆಸಿ ಮಾತನಾಡಿದರು. ಈ ಬಾರಿ ತಾಲೂಕಿನಲ್ಲಿ ಜನರು ಭಾರತೀಯ ಜನತಾ ಪಕ್ಷವನ್ನು ಆಯ್ಕೆ ಮಾಡಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಪಕ್ಷ ನಮಗೆ ನೇರ ಸ್ಪರ್ಧೆ ನೀಡಲಿದ್ದು, ಜೆಡಿಎಸ್ ಪಕ್ಷ ಮೂರನೇ ಸ್ಥಾನಕ್ಕೆ ಹೋಗಲಿದೆ ಎಂದರು.
ಒಂಬತ್ತು ವರ್ಷಗಳಿಂದ ನಿರಂತರವಾಗಿ ತಾಲೂಕಿನಲ್ಲಿ ಸಮಾಜ ಸೇವೆ ಮಾಡುತ್ತಾ, ನನ್ನ ಕೈಲಾದಷ್ಟು ಸಹಾಯವನ್ನು ಕ್ಷೇತ್ರದ ಜನರಿಗೆ ಮಾಡಿಕೊಂಡು ಬಂದಿದ್ದೇನೆ.
ಇನ್ನೂ ಹೆಚ್ಚಿನ ಸೇವೆಯನ್ನು ತಾಲೂಕಿನಲ್ಲಿ ಮಾಡಲು ನನಗೆ ರಾಜಕೀಯ ಅನಿವಾರ್ಯವಾಗಿದೆ. ಹಾಗಾಗಿ ಬಿಜೆಪಿ ಪಕ್ಷ ನನ್ನನ್ನು ಗುರುತಿಸಿ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡಿದೆ. ತಾಲೂಕಿನ ಪ್ರತಿಯೊಂದು ಸಮಾಜ ಕೂಡ ನನ್ನನ್ನು ಪರಿಗಣಿಸಿದೆ. ಹಾಗಾಗಿ ಈ ಬಾರಿ ಹೆಗ್ಗಡದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಶಾಸಕ ಆಯ್ಕೆಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಇದುವರೆಗೂ ಆಯ್ಕೆಯಾದ ಶಾಸಕರು ತಾಲೂಕನ್ನು ಅಭಿವೃದ್ಧಿಪಡಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಸಾವಿರಾರು ಕೋಟಿ ಅನುದಾನ ಬಂದರು ಕೂಡ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳಾಗಿಲ್ಲ. ನನಗೆ ಹಣ ಮಾಡುವ ಯಾವುದೇ ಆಲೋಚನೆ ಇಲ್ಲ, ಅದರ ಅವಶ್ಯಕತೆ ಕೂಡ ಇಲ್ಲ. ಈ ತಾಲೂಕನ್ನು ಅಭಿವೃದ್ಧಿಪಡಿಸಿ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೋಗಲಾಡಿಸುವುದೇ ನನ್ನ ಉದ್ದೇಶ. ಹಾಗಾಗಿ ಈ ಬಾರಿ ಬಿಜೆಪಿಗೆ ಮತ ನೀಡಿ ರಾಜ್ಯದ ಪ್ರಗತಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಎಂಟು ವರ್ಷದ ಅವಧಿಯಲ್ಲಿ ನಾನು ಯಾವುದೇ ಅಧಿಕಾರ ಇಲ್ಲದಿದ್ದರೂಜನರ ಸೇವೆಯಲ್ಲಿ ತೊಡಗಿಕೊಂಡು ಕೆಲಸ ಮಾಡಿದ್ದೇನೆ. ಕೋವಿಡ್ ಸಂದರ್ಭದಲ್ಲಿ ತಾಲೂಕಿನ ಇಪ್ಪತ್ತೈದು ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ, 15 ಲಕ್ಷ ರೂ.ವೆಚ್ಚದಲ್ಲಿ 3 ಸಾವಿರ ಕುಟುಂಬಗಳಿಗೆ ಔಷಧ ಕಿಟ್ ವಿತರಣೆ ಹಾಗೂ ಮೂರು ಆಕ್ಸಿಜನ್ ತುರ್ತು ವಾಹನ ನೀಡುವ ಮೂಲಕ ತಾಲೂಕಿನ ಜನರ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಅದೇ ರೀತಿ ಸರಗೂರು ಮತ್ತು ಎಚ್.ಡಿ.ಕೋಟೆ ಪಟ್ಟಣದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಕ್ಯಾಂಟೀನ್ ತೆರೆದು 10 ರೂ.ವೆಚ್ಚದಲ್ಲಿ ಊಟ, ತಿಂಡಿ ನೀಡುತ್ತಿದ್ದೇನೆ. ಈ ಎಲ್ಲ ಸೇವೆಗಳನ್ನು ಪರಿಗಣಿಸಿ ನನಗೆ ಈ ಬಾರಿ ನನಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಜಿ.ಬಿ.ಸರಗೂರು, ಕಣಿಯನ ಹುಂಡಿ, ಬೆಟ್ಟದ ಬೀಡು, ಮುದ್ದಯ್ಯನ ಹುಂಡಿ, ಕಟ್ಟೆ ಹುಂಡಿ, ಗೊಲ್ಲನ ಬೀಡು, ಹಳ್ಳದ ಮನುಗನಹಳ್ಳಿ, ಶಿಂಡೇನಹಳ್ಳಿ, ಆಲನಹಳ್ಳಿ, ಕೃಷ್ಣಯ್ಯನ ಹುಂಡಿ, ಕೊತ್ತೇಗಾಲ, ಗಂಗಡಹೊಸಹಳ್ಳಿ, ಮಶಣದ ಕುಪ್ಪೆ, ಕ್ಯಾತನಹಳ್ಳಿ, ಚಾಮಲಾಪುರ, ಕನ್ನೇಗೌಡನಪುರ, ಹಂಪಾಪುರ, ಹೊಮ್ಮರಗಳ್ಳಿ, ಕೊಹಳ, ದೆಗ್ಗಲುಹುಂಡಿ, ಮಾರ್ಚಳ್ಳಿ, ಜಿನಳ್ಳಿ, ಮಾದೇವ ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ಮಾಡಿದರು.
ಬಿಜೆಪಿ ಅಧ್ಯಕ್ಷ ಗುರುಸ್ವಾಮಿ, ಸಿ.ವಿ.ನಾಗರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಸಿ.ಲಕ್ಷ್ಮಣ್, ವೆಂಕಟಸ್ವಾಮಿ, ಮೊತ್ತ ಬಸವರಾಜಪ್ಪ, ಸಿ.ಕೆ.ಗಿರೀಶ್, ಶಿವರಾಜಪ್ಪ, ಬಿಡಗಲು ರಾಜು, ಸೋಮಾಚಾರಿ, ಕೆಂಡಗಣ್ಣಸ್ವಾಮಿ, ನಂದೀಶ್, ಸತೀಶ್, ಲೋಕೇಶ್, ಮಹೇಶ್, ಯೋಗೇಶ್, ಪರೀಕ್ಷಿತಾ ರಾಜೇ ಅರಸ್, ನಾಗೇಶ್, ಗೋವಿಂದಚಾರಿ, ಮಹಾದೇವು, ಸಿದ್ದರಾಜು, ಗೋಪಾಲಯ್ಯ, ಹೇಮಂತ್ ಕುಮಾರ್ ಇದ್ದರು.