ನನಗೂ ಸಿಎಂ ಆಗೋ ಆಸೆ ಇದೆ ; ಉಮೇಶ್‌ಕತ್ತಿ ಇಂಗಿತ ; ಸಿದ್ಧಗಂಗೆ ಶ್ರೀಗಳ ಆಶೀರ್ವಾದ ಪಡೆದ ಸಚಿವ

22TMK_Umeshkatti_Matt 4
Published on

ತುಮಕೂರು: ಬಿಜೆಪಿಯಲ್ಲಿ 75 ವರ್ಷದವರೆಗೂ ಸಿಎಂ ಆಗೋ ಅವಕಾಶವಿದೆ, ಸದ್ಯಕ್ಕೆ ನಾನು ಹಾಗೂ ಯತ್ನಾಳ್ ಇಬ್ಬರೂ ಸೀನಿಯರ್ ಇದ್ದೀವಿ, ಸಿಎಂ ಆಗೋ ಆಸೆ ಎಲ್ಲರಂತೆ ನನಗೂ ಇದೆ ಎಂದು ಆಹಾರ ಸಚಿವ ಉಮೇಶ್‌ಕತ್ತಿ ಹೇಳಿದರು.

ಶುಕ್ರವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದು, ಶ್ರೀ ಸಿದ್ದಲಿಂಗ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಯತ್ನಾಳ್‌ಗೆ ಇನ್ನೂ 60 ವರ್ಷ ನನಗೆ ಶ್ರೀಗಳ ಆಶೀರ್ವಾದವಿದೆ, ಭವಿಷ್ಯದಲ್ಲಿ ಯಾವ ಅವಕಾಶ ಸಿಕ್ಕರೂ ನಿಭಾಯಿಸಲು ಸಿದ್ಧ ಎಂದು ನೀಡಿದ ಹೇಳಿಕೆ ಅಚ್ಚರಿ ಮೂಡಿಸಿತು.

ಯತ್ನಾಳ್ ಚಿಕ್ಕ ವಯಸ್ಸಿಗೆ ಕೇಂದ್ರ ಮಂತ್ರಿಯಾದವರು, ನನ್ನ ಆತ್ಮೀಯ ಮಿತ್ರರು, ಅವರು ಸೀನಿಯರ್ ಇದ್ದಾರೆ ಅವರಿಗಿಂತ ನಾನು ರಾಜಕೀಯದಲ್ಲಿ ಹಿರಿಯನಿದ್ದೇನೆ, ಸಿಎಂ ಸ್ಥಾನ ಖಾಲಿಯಾದಾಗ ನಾನೂ ಆಕಾಂಕ್ಷಿಯೇ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.

ಸಿಎಂ ಯಡಿಯೂರಪ್ಪ ನನಗೆ ವಿಶೇಷವಾದ ಜವಾಬ್ದಾರಿ ನೀಡಿದ್ದು ಪ್ರಮುಖವಾಗಿರುವ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಜವಾಬ್ದಾರಿ ನೀಡಿದ್ದಾರೆ. 4.36ಕೋಟಿ ಜನರು ನಮ್ಮ ಇಲಾಖೆ ಫಲಾನುಭವಿಗಳಾಗಿದ್ದು ಉತ್ತಮ ಕೆಲಸ ಮಾಡುವ ಮೂಲಕ ರಾಜ್ಯಕ್ಕೆ ಉತ್ತಮ ಹೆಸರು ತರುತ್ತೇನೆ, ಈ ಖಾತೆ ನನಗೆ ತೃಪ್ತಿ ನೀಡಿದೆ ಎಂದರು. ಮಂತ್ರಿ ಮಂಡಲ ರಚನೆ ಹಾಗೂ ಖಾತೆ ಹಂಚಿಕೆ ಸಂದರ್ಭದಲ್ಲಿ ಹೆಚ್ಚು ಕಡಿಮೆ ಆಗೋದು ಸಹಜ, ಕೆಲವು ಸಹದ್ಯೋಗಿಗಳು ಈ ಬಗ್ಗೆ ಅಸಮಾಧಾನವಾಗಿರಬಹುದು, ಇವರೆಲ್ಲರೊಂದಿಗೆ ಸಿಎಂ ಯಡಿಯೂರಪ್ಪ ಚರ್ಚಿಸಿ ಸಮಸ್ಯೆ ಬಗೆಹರಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಈಗಲೂ ಇದೆ, ಎಂಟು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ, ಬಿಜೆಪಿಯಲ್ಲಿ ನಾನು ಹಾಗೂ ಯತ್ನಾಳ್ ಸಿಎಂ ಹುದ್ದೆಯ ರೇಸ್‌ನಲ್ಲಿದ್ದು ಅವಕಾಶ ಬಂದಾಗ ರಾಜ್ಯದ ಸಿಎಂ ಆಗಬೇಕೆಂಬ ಆಸೆ ಇದೆ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಹಾಗಾಗಿ, ಕಾಲ ಬಂದಾಗ ಈ ಬಗ್ಗೆ ಮಾತನಾಡೋಣ. ಉಮೇಶ್‌ಕತ್ತಿ, ಆಹಾರ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net