

ಮಂಗಳೂರು: ಪತಿಯೊಂದಿಗೆ ವಾಸ ಮಾಡಲು ಕಳೆದ ಎರಡು ವರ್ಷಗಳಿಂದ ಹೋರಾಟ ಮಾಡುತ್ತಿದ್ದ ಸುಳ್ಯದ ಆಸಿಯಾ ಇದೀಗ ಹೋರಾಟದಿಂದ ಹಿಂದೆ ಸರಿದಿದ್ದು ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಲು ನಿರ್ಧರಿಸಿದ್ದಾರೆ.
ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಳ್ಯದ ಇಬ್ರಾಹಿಂ ಕಟ್ಟೆಕಾರ್ ಅವರ ಮನ ಒಲಿಸಲು ಹಿಂದು ಹಾಗು ಮುಸ್ಲಿಂ ಸಂಘಟನೆಗಳು, ಅಧಿಕಾರಿಗಳು, ಧಾರ್ಮಿಕ ಮುಖಂಡರು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ನಾನು ಎರಡು ವರ್ಷ ಇದಕ್ಕಾಗಿ ಸಮಯ ವಿನಿಯೋಗಿಸಿದೆ. ಇನ್ನು ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಸ್ವತಂತ್ರವಾಗಿ ಜೀವನ ನಡೆಸಲು ನಿರ್ಧರಿಸಿದ್ದೇನೆ. ನಾನಿನ್ನು ಆಸಿಯಾ ಮಾತ್ರ ಎಂದು ಹೇಳಿದರು.
ಕೇರಳದ ಕಣ್ಣೂರಲ್ಲಿ ಕುಟುಂಬಸ್ಥರಿದ್ದು ನಾನು ಹಿಂದು ಧರ್ಮಕ್ಕೆ ಮರಳಿದರೆ ಸೇರಿಸಿಕೊಳ್ಳುವುದಾಗಿ ಹೇಳಿದರು. ಅದಕ್ಕೆ ನಾನು ಒಪ್ಪಿಲ್ಲ. ಸ್ವಲ್ಪ ಸಮಯ ಸುಳ್ಯದಲ್ಲಿದ್ದು ಮತ್ತೆ ಉದ್ಯೋಗಕ್ಕೆ ಸೇರಲು ನಿರ್ಧರಿಸಿದ್ದೇನೆ. ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಾಗಿ ಆಸಿಯಾ ಹೇಳಿದರು.